ದಲಿತ ಸಮಾಜದಲ್ಲಿ ಒಡಕು : ಸಿ.ಎಂ. ಮುನಿಯಪ್ಪ ವಿಷಾದ
ದಲಿತ ಸಮಾಜದಲ್ಲಿ ಒಡಕು ; ಸಿ.ಎಂ. ಮುನಿಯಪ್ಪ ವಿಷಾದ
ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ಸಿ.ಎಂ.ಮುನಿಯಪ್ಪನವರನ್ನು ಕೋಲಾರದಲ್ಲಿ ಪತ್ರಕರ್ತರ ಸಂಘದಿAದ ಸನ್ಮಾನಿಸಲಾಯಿತು.


ಕೋಲಾರ, ೨೦ ಏಪ್ರಿಲ್ (ಹಿ.ಸ) :

ಆ್ಯಂಕರ್ : ಬೆವರು ಸುರಿಸಿ ಕಟ್ಟಿದ ಸಂಘಟನೆ ಒಡೆದು ಹೋಗಿದೆ. ತಳ ಸಮುದಾಯಗಳು ಛಿದ್ರವಾಗಿವೆ. ಹೀಗಾಗಿ, ಅಂಬೇಡ್ಕರ್ ಪ್ರಶಸ್ತಿ ನನಗೆ ಅಷ್ಟೇನೂ ಸಂತೋಷ ತಂದಿಲ್ಲ ಎಂದು ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ಹಿರಿಯ ದಲಿತ ಹೋರಾಟಗಾರ ಹಾಗೂ ಸಂಚಿಕೆ ದಿನಪತ್ರಿಕೆಯ ಸಂಪಾದಕ ಸಿ.ಎಂ.ಮುನಿಯಪ್ಪ ಅಸಮದಾನ ವ್ಯಕ್ತಪಡಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿ0ದ ಸೋಮವಾರ ನಗರದ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಅಭಿಮಾನದಿಂದ ಕರೆದು ಗೌರವಿಸಿರುವುದಕ್ಕೆ ಚಿರಋಣಿ. ಆದರೆ, ನಾನೇನೂ ಸಂತೋಷದಿ0ದಿಲ್ಲ. ದಲಿತ ಸಮಾಜದಲ್ಲೇ ಒಡಕು ಉಂಟಾಗಿ ಬೇರೆ ಬೇರೆ ಆಗಿದೆ. ದಲಿತರು ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿಲ್ಲ ಎಂಬ ನೋವು, ಬೇಸರವಿದೆ. ಒಬ್ಬರ ಮೇಲೆ ಒಬ್ಬರಿಗೆ ವಿಶ್ವಾಸ ಇಲ್ಲ. ಛಿದ್ರಛಿದ್ರ ಆಗಿರುವುದು ದುಃಖಕ್ಕೆ ಕಾರಣವಾಗಿದೆ. ಸಾಸಿವೆಯಷ್ಟು ಸಂತೋಷಕ್ಕೆ ಸಾಗರದಷ್ಟು ದುಃಖ ತಂದುಕೊ0ಡಿದ್ದೇವೆ. ಸಂಘದವರು ಹಾಗೂ ಪತ್ರಕರ್ತರು ಅಭಿನಂದನೆ ಮೂಲಕ ಶಕ್ತಿ ತುಂಬಿದ್ದೀರಿ. ಮತ್ತೆ ಈ ಸಮಾಜ, ಸಂಘಟನೆಗಳನ್ನು ಒಗ್ಗೂಡಿಸಲು ಪ್ರಯತ್ನ ಹಾಕುತ್ತೇನೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಮಾತನಾಡಿ, ಮುನಿಯಪ್ಪ ಅವರಿಗೆ ಒಲಿದಿರುವ ಅಂಬೇಡ್ಕರ್ ಪ್ರಶಸ್ತಿ ಜಿಲ್ಲೆಯ ಎಲ್ಲರಿಗೂ ಸಂದ ಗೌರವ. ಈಗ ಸಂಘಟನೆಗಳು ಪರ, ವಿರೋಧ ಧೋರಣೆ ಹೊಂದಿವೆ. ಸಿ.ಎಂ.ಮುನಿಯಪ್ಪ ಎಲ್ಲಾ ಸಂಘಟನೆಗಳನ್ನು ಒಂದಾಗಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಕೋರಿದರು.

ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು ಮಾತನಾಡಿ, ವಿದ್ಯಾರ್ಥಿದೆಸೆಯಲ್ಲಿಯೇ ಮುನಿಯಪ್ಪ ಹೋರಾಟದಲ್ಲಿ ತೊಡಗಿದ್ದವರು. ಚಳವಳಿಗಳಿಗೆ ಭದ್ರ ಬುನಾದಿ ಹಾಕಿದವರು. ಹೋರಾಟದಲ್ಲಿ ಎಲ್ಲಾ ವರ್ಗದವರನ್ನು ಒಳಗೊಂಡು ಮುನ್ನಡೆದಿದ್ದಾರೆ. ಅವರು ಸಂಸತ್ತಿನಲ್ಲಿ ಇರಬೇಕಿತ್ತು. ಸ್ವಲ್ಪ ವ್ಯತ್ಯಾಸದಿಂದ ತಪ್ಪಿ ಹೋಯಿತು. ಮುಂದೆ ಅಂಥ ಅವಕಾಶ ಬರಲಿ ಎಂದರು.

ಸ0ಘದ ನಿಕಟಪೂರ್ವ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ ಮುನಿಯಪ್ಪ ಜೀತಗಾರನ ಮಗನಾಗಿ ಹುಟ್ಟಿ ಜೀವನಗಾಥೆ ಬರೆದಿದ್ದಾರೆ. ಕೆಲ ಡೋಂಗಿತನ ಪ್ರದರ್ಶಿಸುವ ಜಾತಿ ಹೋರಾಟಗಾರರು ಇದ್ದಾರೆ. ಆದರೆ, ಆ ಮನೋಭಾವವನ್ನು ಮುನಿಯಪ್ಪ ಅವರಲ್ಲಿ ಕಂಡಿಲ್ಲ. ಅವರು ಆರು ವರ್ಷದ ಹಿಂದೆಯೇ ಸಂಸತ್ ಪ್ರವೇಶಿಸಬಹುದಿತ್ತು. ಅವರು ಮನಸ್ಸು ಮಾಡಲಿಲ್ಲ. ಹಣಕಾಸು ವಿಚಾರ ನೆಪವೊಡ್ಡಿ ಹಿಂದೆ ಸರಿದರು ಎಂದು ಸ್ಮರಿಸಿದರು. ಆಕ್ರಮಣಕಾರಿ ಆಗಿದ್ದವರು ನಂತರ ಮಾಗಿದ ಮುನಿಯಪ್ಪ ಆಗಿ, ಈಗ ಪಾಲಿಷ್ಡ್ ಮುನಿಯಪ್ಪ ಆಗಿ ಬದಲಾಗಿದ್ದಾರೆ. ಅವರಿಗೆ ಅಂಬೇಡ್ಕರ್ ಪ್ರಶಸ್ತಿ ಬಂದಿರುವುದು ಇಡೀ ರಾಜ್ಯದ ಪತ್ರಕರ್ತರಿಗೆ ಪ್ರಶಸ್ತಿ ಬಂದಷ್ಟೇ ಖುಷಿ ಆಗಿದೆ ಎಂದು ತಿಳಿಸಿದರು.

ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಗಣೇಶ್ ಮಾತನಾಡಿ, ಕೋಲಾರದಿಂದ ಬೀದರ್ ವರೆಗೆ ಜನಪ್ರಿಯತೆ ಜೊತೆಗೆ ಅಪಾರ ಅಭಿಮಾನ ಬಳಗ ಹೊಂದಿದ್ದಾರೆ. ಸಮಸ್ಯೆ, ಸವಾಲು, ಅವಮಾನ ಮೆಟ್ಟಿ ನಿಂತು ಹೋರಾಟ ನಡೆಸಿದ್ದಾರೆ. ಈಗ ಅಂಬೇಡ್ಕರ್ ಪ್ರಶಸ್ತಿಗೆ ಭಾಜನರಾಗುವ ಮೂಲಕ ಸಾಧಕರಾಗಿ ನಮ್ಮ ಮುಂದೆ ಕಾಣಿಸುತ್ತಿದ್ದಾರೆ. ಮುನಿಯಪ್ಪ ಅವರ ಹೋರಾಟದಿಂದ ಲಕ್ಷಾಂತರ ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ವ್ಯಾಸಂಗ ಮಾಡಲು ಸಾಧ್ಯವಾಗಿದೆ. ಸಾವಿರಾರು ಮಂದಿಗೆ ಸೂರು ಭಾಗ್ಯ ಕಲ್ಪಿಸಿಕೊಟ್ಟಿದ್ದಾರೆ. ಗಾಂಧಿನಗರದ ಅವರ ನಿವಾಸ ಸಮಸ್ಯೆಗಳ ಪರಿಹಾರ ಕೇಂದ್ರಬಿ0ದು ಎಂದು ಶ್ಲಾಘಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಎ.ಜಿ. ಸುರೇಶ್ ಕುಮಾರ್, ಹಿರಿಯ ಪತ್ರಕರ್ತ ಪಾ.ಶ್ರೀ ಅನಂತರಾಮು ವಿಶ್ವ ಕುಂದಾಪುರ, ಸಂಚಿಕೆ ನಾರಾಯಣಯಪ್ಪ ಮಾತನಾಡಿದರು. ಶ್ರೀನಿವಾಸಪುರ, ಮಾಲೂರು, ಕೆಜಿಎಫ್ ಪತ್ರಕರ್ತರು ಸನ್ಮಾನಿಸಿದರು. ಸಿ.ವಿ.ನಾಗರಾಜ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪದಾಧಿಕಾರಿಗಳು ಹಾಗೂ ಪತ್ರಕರ್ತರು ಪಾಲ್ಗೊಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande