

ಬೆಂಗಳೂರು, 20 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಹೈದರಾಬಾದ್ ನಿಂದ ಹುಬ್ಬಳ್ಳಿಗೆ ಬರುತ್ತಿದ್ದ Fly91 ವಿಮಾನವು ಬಿರುಗಾಳಿ ಹಾಗೂ ಹವಾಮಾನ ವೈಪರಿತ್ಯದಿಂದ ಹುಬ್ಬಳ್ಳಿಯಲ್ಲಿ ಇಳಿಯಲು ಸಾಧ್ಯವಾಗದೇ ಕೊನೆಗೆ ಬೆಂಗಳೂರಿಗೆ ಮಾರ್ಗ ಬದಲಾಯಿಸಿದ ಘಟನೆ ಭಾನುವಾರ ನಡೆದಿದೆ. ಇದರಿಂದ ವಿಮಾನದಲ್ಲಿದ್ದ 18 ಪ್ರಯಾಣಿಕರು ಹಲವು ಗಂಟೆಗಳ ಕಾಲ ಆತಂಕದಲ್ಲಿ ಕಾಲ ಕಳೆಯಬೇಕಾಯಿತು.
ಭಾನುವಾರ ಹೈದರಾಬಾದ್ ನಿಂದ ಮಧ್ಯಾಹ್ನ 3 ಗಂಟೆ ಸುಮಾರಿಗೆ ಹೊರಟ Fly91 ಸಂಸ್ಥೆಯ IC3401 ಸಂಖ್ಯೆಯ ATR ಟರ್ಬೋಪ್ರಾಪ್ ವಿಮಾನ ಸಂಜೆ 4.30ಕ್ಕೆ ಹುಬ್ಬಳ್ಳಿಯಲ್ಲಿ ಇಳಿಯಬೇಕಾಗಿತ್ತು. ಆದರೆ ಹುಬ್ಬಳ್ಳಿ ಸಮೀಪಿಸುತ್ತಿದ್ದಂತೆ ಭಾರಿ ಗಾಳಿ ಹಾಗೂ ಹವಾಮಾನ ವೈಪರಿತ್ಯ ಉಂಟಾಗಿ ವಿಮಾನ ಲ್ಯಾಂಡಿಂಗ್ಗೆ ಅಡಚಣೆ ಎದುರಾಯಿತು.
ಪ್ರಯಾಣಿಕರ ಪ್ರಕಾರ, ವಿಮಾನವು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹುಬ್ಬಳ್ಳಿ ಭಾಗದ ಆಕಾಶದಲ್ಲಿ ಸುತ್ತಾಡಿದ್ದು, ಬಳಿಕ ಸುರಕ್ಷತಾ ಕಾರಣಗಳಿಂದ ಬೆಂಗಳೂರಿಗೆ ಕಳುಹಿಸಲಾಯಿತು. ಸಂಜೆ 7.30ರ ಸುಮಾರಿಗೆ ವಿಮಾನವು ಸುರಕ್ಷಿತವಾಗಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದಿದೆ.
ವಿಮಾನದಲ್ಲಿದ್ದ ಪ್ರಯಾಣಿಕ ಜಯಕುಮಾರ್ ಅರಳಗುಂಡಗಿ ಪ್ರತಿಕ್ರಿಯಿಸಿದ್ದು, “ನಾವು ಮತ್ತೆ ಬದುಕಿ ಬರುತ್ತೇವೋ ಇಲ್ಲವೋ ಎಂಬ ಭಯ ಎಲ್ಲರಲ್ಲೂ ಇತ್ತು. ಭಾರಿ ಬಿರುಗಾಳಿಯಿಂದ ವಿಮಾನ ತೀವ್ರ ಅಸ್ಥಿರವಾಗಿತ್ತು. ಪೈಲಟ್ ಸಮಯಪ್ರಜ್ಞೆಯಿಂದ ನಡೆದುಕೊಂಡ ಕಾರಣವೇ ನಾವು ಸುರಕ್ಷಿತವಾಗಿ ಬದುಕುಳಿದಿದ್ದೇವೆ” ಎಂದು ಹೇಳಿದರು.
“ಹುಬ್ಬಳ್ಳಿಯಲ್ಲಿ ಇಳಿಯಲಾಗದೇ ಬೆಂಗಳೂರಿಗೆ ಕರೆದೊಯ್ದ ನಂತರ ವಿಮಾನ ಸಂಸ್ಥೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡಲಿಲ್ಲ. ಸಿಬ್ಬಂದಿ ಸೌಜನ್ಯದಿಂದ ವರ್ತಿಸಲಿಲ್ಲ. ಕೊನೆಗೆ ನಾವು ಸ್ವಂತ ಖರ್ಚಿನಲ್ಲಿ ಟ್ಯಾಕ್ಸಿ ಮಾಡಿಕೊಂಡು ಹುಬ್ಬಳ್ಳಿಗೆ ಬರಬೇಕಾಯಿತು” ಎಂದು ಆರೋಪಿಸಿದ್ದಾರೆ.
ಇದರಿಂದ ಹಲವು ಪ್ರಯಾಣಿಕರು ಹಾಗೂ ಅವರ ಕುಟುಂಬಸ್ಥರು Fly91 ಸಂಸ್ಥೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಮಾನದಲ್ಲಿದ್ದ ಕೆಲವರು ಆತಂಕದಿಂದ ಕುಟುಂಬ ಸದಸ್ಯರಿಗೆ ಮೊಬೈಲ್ ಮೂಲಕ ಸಂದೇಶ ಕಳುಹಿಸಿದ್ದರೆ, ಕೆಲವರು ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾ ಕಣ್ಣೀರಿಟ್ಟಿರುವ ಪೋಟೋಗಳು ಬಹಿರಂಗವಾಗಿವೆ.
ಘಟನೆ ಕುರಿತು ಹುಬ್ಬಳ್ಳಿ ವಿಮಾನ ನಿಲ್ದಾಣದ ಪ್ರಭಾರ ನಿರ್ದೇಶಕ ಪ್ರವೀಣ್ ಎಂ. ಜಾಧವ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, “ಹವಾಮಾನ ವೈಪರಿತ್ಯ ಹಾಗೂ ಬಿರುಗಾಳಿಯಿಂದ ವಿಮಾನವನ್ನು ಹುಬ್ಬಳ್ಳಿಯಲ್ಲಿ ಇಳಿಸಲು ಸಾಧ್ಯವಾಗಲಿಲ್ಲ. ವಿಮಾನದಲ್ಲಿ 18 ಪ್ರಯಾಣಿಕರು ಇದ್ದರು. ಸಿಬ್ಬಂದಿ ವರ್ತನೆ ಬಗ್ಗೆ ಪ್ರಯಾಣಿಕರು ನೀಡಿರುವ ದೂರಿನ ಕುರಿತು ಸಂಬಂಧಿತ ಸಂಸ್ಥೆಯಿಂದ ಸ್ಪಷ್ಟನೆ ಪಡೆಯಲಾಗುವುದು” ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa