ಉಧಂಪುರ್ ನಲ್ಲಿ ಭೀಕರ ಬಸ್ ದುರಂತ ; 15 ಸಾವು, 20 ಮಂದಿಗೆ ಗಾಯ
ಜಮ್ಮು, 20 ಏಪ್ರಿಲ್ (ಹಿ.ಸ.) : ಆ್ಯಂಕರ್ : ಜಮ್ಮು ಮತ್ತು ಕಾಶ್ಮೀರದ ಉಧಂಪುರ್ ಜಿಲ್ಲೆಯಲ್ಲಿ ಸೋಮವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದಾರೆ. ರಾಮನಗರ ಪ್ರದೇಶದ ಕಾಗೋಟ್ ಗ್ರಾಮದ ಸಮೀಪ ಈ ದುರಂತ ಸಂಭವಿಸಿದೆ. ದೂರದ ಹಳ್ಳಿಯಿಂದ ಉಧಂಪುರ
ಉಧಂಪುರ್ ನಲ್ಲಿ ಭೀಕರ ಬಸ್ ದುರಂತ ; 15 ಸಾವು, 20 ಮಂದಿಗೆ ಗಾಯ


ಜಮ್ಮು, 20 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಜಮ್ಮು ಮತ್ತು ಕಾಶ್ಮೀರದ ಉಧಂಪುರ್ ಜಿಲ್ಲೆಯಲ್ಲಿ ಸೋಮವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದಾರೆ.

ರಾಮನಗರ ಪ್ರದೇಶದ ಕಾಗೋಟ್ ಗ್ರಾಮದ ಸಮೀಪ ಈ ದುರಂತ ಸಂಭವಿಸಿದೆ. ದೂರದ ಹಳ್ಳಿಯಿಂದ ಉಧಂಪುರ್ ತೆರಳುತ್ತಿದ್ದ ಪ್ರಯಾಣಿಕರ ಬಸ್ ಬೆಳಿಗ್ಗೆ ಸುಮಾರು 10 ಗಂಟೆಗೆ ಅಪಾಯಕಾರಿ ತಿರುವಿನಲ್ಲಿ ನಿಯಂತ್ರಣ ತಪ್ಪಿ ಕಣಿವೆಗೆ ಉರುಳಿದೆ.

ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಮೊದಲು ಸ್ಥಳಕ್ಕೆ ಧಾವಿಸಿ ಅವಶೇಷಗಳ ನಡುವೆ ಸಿಲುಕಿದ್ದ ಗಾಯಾಳುಗಳನ್ನು ಹೊರತೆಗೆದರು. ಬಳಿಕ ಪೊಲೀಸರು ಮತ್ತು ಇತರ ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆ ಆರಂಭಿಸಿದರು.

ಬಸ್ ಅವಶೇಷಗಳು ಮತ್ತು ಕಂದಕದಿಂದ 15 ಶವಗಳನ್ನು ಹೊರತೆಗೆದಿದ್ದು, ಗಾಯಗೊಂಡ 20 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಅನೇಕರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತದ ಬಳಿಕ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಉಧಂಪುರ್ ಜಿಲ್ಲಾಧಿಕಾರಿ ಮಿಂಗಾ ಶೆರ್ಪಾ ಅವರೊಂದಿಗೆ ಮಾತನಾಡಿದರು. ಗಂಭೀರವಾಗಿ ಗಾಯಗೊಂಡವರನ್ನು ವಿಮಾನದ ಮೂಲಕ ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಸಚಿವರು, ರಾಮನಗರದಿಂದ ಉಧಂಪುರ್ ತೆರಳುತ್ತಿದ್ದ ಸಾರ್ವಜನಿಕ ಸಾರಿಗೆ ಬಸ್ ಕನೋಟೆ ಗ್ರಾಮದ ಬಳಿ ಅಪಘಾತಕ್ಕೀಡಾಗಿದೆ ಎಂಬ ಮಾಹಿತಿ ಸಿಕ್ಕ ತಕ್ಷಣ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿರುವುದಾಗಿ ತಿಳಿಸಿದ್ದಾರೆ. ಹೆಚ್ಚಿನ ಸಾವುನೋವುಗಳ ಆತಂಕವಿದ್ದು, ಗಾಯಾಳುಗಳಿಗೆ ಅಗತ್ಯ ವೈದ್ಯಕೀಯ ನೆರವು ಒದಗಿಸಲಾಗುತ್ತಿದೆ ಎಂದರು.

ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿರುವ ಅವರು, ಜಿಲ್ಲಾಡಳಿತ, ಪೊಲೀಸ್, ಎಸ್ಡಿಆರ್ಎಫ್ ಮತ್ತು ಆರೋಗ್ಯ ಇಲಾಖೆಗೆ ತಕ್ಷಣ ನೆರವು ಒದಗಿಸುವಂತೆ ಸೂಚನೆ ನೀಡಿದ್ದಾರೆ.

ಇದೇ ವೇಳೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕೂಡ ಅಪಘಾತದ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಅವರು, ಈ ದುಃಖದ ಸಮಯದಲ್ಲಿ ಸರ್ಕಾರವು ಸಂತ್ರಸ್ತರು ಮತ್ತು ಅವರ ಕುಟುಂಬಗಳೊಂದಿಗೆ ನಿಂತಿದ್ದು, ಅಗತ್ಯವಿರುವ ಎಲ್ಲಾ ಸಹಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande