
ಬಾಗಲಕೋಟೆ, 02 ಏಪ್ರಿಲ್ (ಹಿ.ಸ.) :
ಆ್ಯಂಕರ್ : ವಿದ್ಯಾರ್ಥಿಗಳನ್ನು ಮತದಾನದ ವೇಳೆ ಬಂಧಿಸುವ ಬಗ್ಗೆ ನೀಡಿರುವ ಹೇಳಿಕೆ ಪ್ರಜಾಪ್ರಭುತ್ವಕ್ಕೆ ಮಾಡಿದ ದೊಡ್ಡ ಅಪಮಾನ ಹಾಗೂ ಅಪಾಯಕಾರಿ ಬೆಳವಣಿಗೆ ಎಂದು ಸಂಸದ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬಾಗಲಕೋಟೆ ಉಪಚುನಾವಣೆಯ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಿಮಗೆ ತಾಕತ್ ಇದ್ದರೆ ವಿದ್ಯಾರ್ಥಿಗಳನ್ನು ಮತದಾನದ ಸಮಯದಲ್ಲಿ ಜೈಲಿಗೆ ಹಾಕಿಸಿ ತೋರಿಸಿ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸವಾಲು ಹಾಕಿದರು.
ಚುನಾವಣಾ ಆಯೋಗದ ನಿಯಮಾವಳಿ ಪ್ರಕಾರ, ಯಾವುದೇ ವ್ಯಕ್ತಿ ವಿಳಾಸ ನೀಡಿ ಆಧಾರ್ ಕಾರ್ಡ್ ಮೂಲಕ ಮತದಾರರ ಗುರುತು ಪತ್ರ ಪಡೆದುಕೊಂಡ ನಂತರ ಆ ವ್ಯಕ್ತಿಗೆ ಒಂದೇ ಸ್ಥಳದಲ್ಲಿ ಮತದಾನ ಮಾಡುವ ಹಕ್ಕು ಇರುತ್ತದೆ ಎಂದು ಅವರು ತಿಳಿಸಿದರು.
ಬಾಗಲಕೋಟೆಯಲ್ಲಿ ಕಳೆದ 8ರಿಂದ 10 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳು ವಾಸವಿದ್ದು, ಇಲ್ಲಿ ಅಭ್ಯಾಸ ಮಾಡುತ್ತಾ ಉದ್ಯೋಗ ಮಾಡಿಕೊಂಡಿದ್ದಾರೆ. ಅವರು ಕಾನೂನು ಬದ್ಧವಾಗಿ ಇಲ್ಲಿನ ನಿವಾಸಿಗಳಾಗಿರುವುದು ಸಾಬೀತಾಗಿದೆ ಎಂದು ಹೇಳಿದರು.
ಅಂಥ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕುವುದು ಸರಿಯಲ್ಲ. ಎರಡು ಕಡೆ ಮತದಾನದ ಹಕ್ಕು ಇದ್ದರೆ ಒಂದೇ ಕಡೆ ಉಳಿಸಿಕೊಳ್ಳುವಂತೆ ತಿಳಿಸಬೇಕು. ಅದನ್ನು ಸರಿಯಾದ ರೀತಿಯಲ್ಲಿ ಹೇಳುವ ಬದಲು ಬೆದರಿಕೆ ಹಾಕಿದರೆ ಬಿಜೆಪಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಕಾರಜೋಳ ಎಚ್ಚರಿಸಿದರು.
“ನಿಮ್ಮದೇ ಸರ್ಕಾರ ಇದೆ. ತಾಕತ್ ಇದ್ದರೆ ವಿದ್ಯಾರ್ಥಿಗಳನ್ನು ಬಂಧಿಸಿ ತೋರಿಸಿ, ನಾವು ಅದಕ್ಕೆ ತಕ್ಕ ಉತ್ತರ ಕೊಡುತ್ತೇವೆ” ಎಂದು ಅವರು ಸವಾಲು ಹಾಕಿದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸೋಲಿನ ಭಯದಿಂದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಮನೆ ಮನೆಗೆ ಕಳುಹಿಸಿ ಕಾಂಗ್ರೆಸ್ಗೆ ಮತ ಹಾಕದಿದ್ದರೆ ಪಂಚ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುತ್ತೇವೆ ಎಂದು ಮತದಾರರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande