ಕಾನೂನು ಸುವ್ಯವಸ್ಥೆ–ಜಿಡಿಪಿಗೆ ನೇರ ಸಂಬಂಧ : ಸಿದ್ದರಾಮಯ್ಯ
ಬೆಂಗಳೂರು, 02 ಏಪ್ರಿಲ್ (ಹಿ.ಸ.) : ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ಆರ್ಥಿಕ ಬೆಳವಣಿಗೆ (ಜಿಡಿಪಿ) ನಡುವೆ ನೇರ ಸಂಬಂಧವಿದೆ ಎಂದು ಹೇಳಿ, ಹೆಚ್ಚುತ್ತಿರುವ ಅಪರಾಧ ಪ್ರಮಾಣಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು ಪೊಲೀಸ್ ಇಲಾಖೆಗೆ ಸ್ಪಷ್ಟ ಸೂಚನೆ ನೀಡ
Cm


ಬೆಂಗಳೂರು, 02 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ಆರ್ಥಿಕ ಬೆಳವಣಿಗೆ (ಜಿಡಿಪಿ) ನಡುವೆ ನೇರ ಸಂಬಂಧವಿದೆ ಎಂದು ಹೇಳಿ, ಹೆಚ್ಚುತ್ತಿರುವ ಅಪರಾಧ ಪ್ರಮಾಣಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು ಪೊಲೀಸ್ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿದರು.

ನಗರದ ಕೋರಮಂಗಲ ಪರೇಡ್ ಮೈದಾನದಲ್ಲಿ ನಡೆದ “ಪೊಲೀಸ್ ಧ್ವಜ ದಿನಾಚರಣೆ” ಕಾರ್ಯಕ್ರಮದಲ್ಲಿ “ಮುಖ್ಯಮಂತ್ರಿಗಳ ಪದಕ” ಪ್ರದಾನ ಮಾಡಿದ ಬಳಿಕ ಮಾತನಾಡಿದ ಅವರು, ಸೈಬರ್ ಅಪರಾಧಗಳು ಸೇರಿದಂತೆ ಕೆಲವು ಪ್ರಕರಣಗಳಲ್ಲಿ ಕರ್ನಾಟಕದ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.

ಇಂತಹ ಅಪರಾಧಗಳನ್ನು ತಡೆಗಟ್ಟಲು ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಅಗತ್ಯವಿದೆ ಎಂದು ಸಲಹೆ ನೀಡಿದರು.

ಯಾವುದೇ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಠಾಣಾಧಿಕಾರಿಯ ಗಮನಕ್ಕೆ ಬಾರದಂತೆ ಅಪರಾಧಗಳು ನಡೆಯಲು ಸಾಧ್ಯವಿಲ್ಲ ಎಂದ ಅವರು, ಈಗಾಗಲೇ ಹಲವು ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಿಸಿರುವುದಕ್ಕಾಗಿ ಪೊಲೀಸ್ ಇಲಾಖೆಯನ್ನು ಅಭಿನಂದಿಸಿದರು. ಆದರೆ, ಹೆಚ್ಚಿರುವ ಅಪರಾಧಗಳ ನಿಯಂತ್ರಣದಲ್ಲಿ ಇನ್ನಷ್ಟು ಶ್ರಮ ಅಗತ್ಯವಿದೆ ಎಂದು ತಿಳಿಸಿದರು.

ಮಹಿಳೆಯರು, ಮಕ್ಕಳು ಮತ್ತು ದುರ್ಬಲ ವರ್ಗಗಳ ರಕ್ಷಣೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಹೇಳಿದ ಅವರು, ಪೊಲೀಸರೂ ಇದೇ ದಿಕ್ಕಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು. ದಿನದ 24 ಗಂಟೆಯೂ ಕರ್ತವ್ಯಪ್ರಜ್ಞೆಯಿಂದ ಸೇವೆ ಸಲ್ಲಿಸುವ ಪೊಲೀಸರಿಂದ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸಿದೆ ಎಂದು ಶ್ಲಾಘಿಸಿದರು.

ರಾಜ್ಯದ ಆರ್ಥಿಕ ಪ್ರಗತಿಗೆ ಕಾನೂನು ಸುವ್ಯವಸ್ಥೆ ಪ್ರಮುಖ ಅಂಶವಾಗಿದ್ದು, ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದರೆ ಆರ್ಥಿಕತೆಗೆ ಸಹ ಮಹತ್ವದ ಕೊಡುಗೆ ನೀಡಬಹುದು ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.

“ಡ್ರಗ್ಸ್ ಮುಕ್ತ ಕರ್ನಾಟಕ” ಗುರಿಯನ್ನು ಸಾಧಿಸಲು ಪೊಲೀಸ್ ಇಲಾಖೆ ಸಕ್ರಿಯವಾಗಿ ಕೈಜೋಡಿಸಬೇಕು ಎಂದು ಕರೆ ನೀಡಿದ ಅವರು, ಪದಕ ವಿಜೇತರಿಗೆ ಶುಭಾಶಯ ಕೋರಿದರು.

ಕಾರ್ಯಕ್ರಮದಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಎಂ.ಎ. ಸಲೀಂ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande