
ಬಾಗಲಕೋಟೆ, 02 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬಾಗಲಕೋಟೆ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆ ಚುನಾವಣಾ ಆಯೋಗವು ವಿಶೇಷ ಮತದಾನ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಮತಗಟ್ಟೆಗೆ ಬರಲು ಸಾಧ್ಯವಾಗದ ವಯೋವೃದ್ಧರು ಹಾಗೂ ವಿಕಲಚೇತನರಿಗಾಗಿ ಮನೆ ಬಾಗಿಲಿಗೇ ಮತದಾನದ ವ್ಯವಸ್ಥೆ ಮಾಡಲಾಗಿದೆ.
85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಕಲಚೇತನರಿಗಾಗಿ ಆರಂಭಿಸಲಾದ ‘ಮನೆಯಿಂದಲೇ ಮತದಾನ’ ಪ್ರಕ್ರಿಯೆಯಲ್ಲಿ ಇಂದು ಚುನಾವಣಾ ಅಧಿಕಾರಿಗಳ ತಂಡವು ಮನೆ ಮನೆಗೆ ತೆರಳಿ ಮತದಾನ ಮಾಡಿಸಿಕೊಳ್ಳಿತು.
ಜಿಲ್ಲಾಧಿಕಾರಿ ಸಂಗಪ್ಪ ಅವರ ನೇತೃತ್ವದಲ್ಲಿ ಈ ಪ್ರಕ್ರಿಯೆ ನಡೆಯುತ್ತಿದ್ದು, ಕ್ಷೇತ್ರದಲ್ಲಿ ಒಟ್ಟು 183 ಮಂದಿ ವಯೋವೃದ್ಧರು ಹಾಗೂ 90 ಮಂದಿ ವಿಕಲಚೇತನರು ಸೇರಿದಂತೆ ಒಟ್ಟು 273 ಜನರಿಗೆ ಈ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ಮನೆ ಬಾಗಿಲಿಗೇ ಮತದಾನ ವ್ಯವಸ್ಥೆ ಮಾಡಿರುವುದರಿಂದ ಹಿರಿಯರು ಹಾಗೂ ವಿಕಲಚೇತನರು ಉತ್ಸಾಹದಿಂದ ತಮ್ಮ ಮತದಾನದ ಹಕ್ಕು ಚಲಾಯಿಸಿದರು.
ವಿದ್ಯಾಗಿರಿಯ ಮತಗಟ್ಟೆ ಸಂಖ್ಯೆ 92ರ ವ್ಯಾಪ್ತಿಯ 86 ವರ್ಷದ ಮುರುಗೇಪ್ಪ ಜಿಗಜಿನ್ನಿ ಹಾಗೂ ಮತಗಟ್ಟೆ ಸಂಖ್ಯೆ 148ರ ವ್ಯಾಪ್ತಿಯ ಡಾ. ಹೊನ್ನಪ್ಪ ಕೋರಾ ಅವರು ಮನೆಯಿಂದಲೇ ಮತ ಚಲಾಯಿಸಿ ಮಾದರಿಯಾದರು.
ಇಂದು ಹಾಗೂ ನಾಳೆಯೂ ಈ ವಿಶೇಷ ಮತದಾನ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande