ಬೆಂಗಳೂರಿನಲ್ಲಿ ಸಂಭ್ರಮದ ಕರಗ ಉತ್ಸವ
ಬೆಂಗಳೂರು, 02 ಏಪ್ರಿಲ್ (ಹಿ.ಸ.) : ಆ್ಯಂಕರ್ : ಬೆಂಗಳೂರಿನಲ್ಲಿ ನಡೆದ ಐತಿಹಾಸಿಕ ಹಾಗೂ ಸಾಂಪ್ರದಾಯಿಕ ಬೆಂಗಳೂರು ಕರಗ ಉತ್ಸವವು ಭಕ್ತಿ, ಸಂಪ್ರದಾಯ ಮತ್ತು ಸಾಂಸ್ಕೃತಿಕ ವೈಭವದ ಮೇಳವಾಗಿ ಕಂಗೊಳಿಸಿತು. ಸಾವಿರಾರು ಭಕ್ತರು ರಾತ್ರಿ ಪೂರ್ತಿ ಕರಗ ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಸತತ 17ನೇ ಬಾರಿಗೆ
ಕರಗ


ಬೆಂಗಳೂರು, 02 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬೆಂಗಳೂರಿನಲ್ಲಿ ನಡೆದ ಐತಿಹಾಸಿಕ ಹಾಗೂ ಸಾಂಪ್ರದಾಯಿಕ ಬೆಂಗಳೂರು ಕರಗ ಉತ್ಸವವು ಭಕ್ತಿ, ಸಂಪ್ರದಾಯ ಮತ್ತು ಸಾಂಸ್ಕೃತಿಕ ವೈಭವದ ಮೇಳವಾಗಿ ಕಂಗೊಳಿಸಿತು. ಸಾವಿರಾರು ಭಕ್ತರು ರಾತ್ರಿ ಪೂರ್ತಿ ಕರಗ ಮೆರವಣಿಗೆಯನ್ನು ಕಣ್ತುಂಬಿಕೊಂಡರು.

ಸತತ 17ನೇ ಬಾರಿಗೆ ಅರ್ಚಕ ಎ. ಜ್ಞಾನೇಂದ್ರ ಕರಗವನ್ನು ಹೊತ್ತು, ಹುಣ್ಣಿಮೆ ಬೆಳಕಿನಲ್ಲಿ ಮಲ್ಲಿಗೆ ಹೂಗಳಿಂದ ಅಲಂಕೃತಗೊಂಡ ದ್ರೌಪದಿದೇವಿಯ ಹೂವಿನ ಕರಗಕ್ಕೆ ಜೀವ ತುಂಬಿದರು. ಪೂರ್ವ ಪೂಜಾಕ್ರಮಗಳನ್ನು ನೆರವೇರಿಸಿದ ಬಳಿಕ ತಿಗಳರಪೇಟೆಯಲ್ಲಿರುವ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ಪೂರ್ಣಗೊಳಿಸಿ, ಕರಗ ಮೆರವಣಿಗೆಗೆ ಚಾಲನೆ ನೀಡಲಾಯಿತು.

ವೀರಕುಮಾರರ ಘೋಷಣೆಗಳು, ಭಕ್ತರ ಗೋವಿಂದ ನಾಮಸ್ಮರಣೆ, ಮಲ್ಲಿಗೆ ಹೂಗಳ ಸಮರ್ಪಣೆ—ಇವೆಲ್ಲದರ ಮಧ್ಯೆ ನಗರದ ಪೇಟೆಗಳು, ಗಲ್ಲಿಗಳು, ಮುಖ್ಯರಸ್ತೆಗಳು ಭಕ್ತಿಯ ಸಂಭ್ರಮದಿಂದ ಕಂಗೊಳಿಸಿದವು. ಖಡ್ಗ ಹಿಡಿದ ವೀರಕುಮಾರರ ಅಬ್ಬರದ ನಡುವೆ ಕರಗ ಮೆರವಣಿಗೆ ರಾತ್ರಿಯಿಡೀ ವೈಭವದಿಂದ ಸಾಗಿತು.

ಈ ಬಾರಿ ಕರಗ ಮೆರವಣಿಗೆ 25 ಪೇಟೆಗಳಲ್ಲಿ ಸಂಚರಿಸಿದ್ದು, ವಿಶೇಷವಾಗಿ ಮಸ್ತಾನ್ ಸಾಬ್ ದರ್ಗಾದಲ್ಲಿ ಕರಗ ಪ್ರದಕ್ಷಿಣೆ ಹಾಕಿದದ್ದು ಧಾರ್ಮಿಕ ಸಾಮರಸ್ಯದ ಅಪೂರ್ವ ಉದಾಹರಣೆಯಾಗಿ ಪರಿಣಮಿಸಿತು.

ಉತ್ಸವದ ಸಂದರ್ಭದಲ್ಲಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಗರುಡ ಆಚಾರ್ಯ ಹಾಗೂ ಎನ್.ಎ.ಹಾರಿಸ್ ಸೇರಿದಂತೆ ಅನೇಕ ಗಣ್ಯರು ಕರಗದ ದರ್ಶನ ಪಡೆದು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande