
ಕೋಲಾರ, ೧೭ ಏಪ್ರಿಲ್ (ಹಿ.ಸ) :
ಆ್ಯಂಕರ್ : ಕನಿಷ್ಠ ವೇತನ ಸೇರಿದಂತೆ ಕಾರ್ಮಿಕರ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್ಸಿಆರ್) ವ್ಯಾಪ್ತಿಯಲ್ಲಿರುವ ನೋಯ್ಡಾ, ಗ್ರೇಟರ್ ನೋಯ್ಡಾ, ಗುರುಗ್ರಾಮಗಳಲ್ಲಿ ನಡೆಸುತ್ತಿರುವ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸದೇ, ಕಾರ್ಮಿಕರ ಹೋರಾಟವನ್ನು ಹತ್ತಿಕ್ಕಲು ಪೊಲೀಸರು ಅಮಾನುಷವಾಗಿ ವರ್ತಿಸುತ್ತಿರುವುದನ್ನು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಜಿಲ್ಲಾ ಸಮಿತಿ ವತಿಯಿಂದ ಉಪ ತಹಶಿಲ್ದಾರ್ ಅವರಿಗೆ ಮನವಿ ಸಲ್ಲಿಸಿದರು
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ ಮಾತನಾಡಿ ದೇಶದ ರಾಜಧಾನಿಯ ಸಮೀಪದಲ್ಲಿರುವ ಈ ನಗರದಲ್ಲಿರುವ ಕೈಗಾರಿಕೆಗಳಲ್ಲಿಯೇ ಗುತ್ತಿಗೆ ಕಾರ್ಮಿಕರೇ ಹೆಚ್ಚಾಗಿ ದುಡಿಯುತ್ತಿದ್ದು, ಈ ಕಾರ್ಮಿಕರಿಗೆ ತಿಂಗಳಿಗೆ ೧೦,೦೦೦, ೧೨,೦೦೦ ವೇತನ, ೧೦ ರಿಂದ ೧೩ ಗಂಟೆಗಳ ಕೆಲಸದ ದಿನ, ಹೆಚ್ಚುವರಿ ಕೆಲಸಕ್ಕೆ ಓಟಿ ಇಲ್ಲ, ವಾರದ ವಿಶ್ರಾಂತಿ ಇಲ್ಲ, ಇಎಸ್ಐ, ಬೋನಸ್, ಉದ್ಯೋಗ ಭದ್ರತೆ ಮತ್ತು ಮೂಲಭೂತ ಸುರಕ್ಷತೆಗಳಿಲ್ಲದೆ ದುಡಿಸಿಕೊಳ್ಳಲಾಗುತ್ತಿದೆ. ಈ ವೇತನದಿಂದ ಕಾರ್ಮಿಕರು ಮನೆ ಬಾಡಿಗೆ, ವಿದ್ಯುತ್, ನೀರಿನ ಶುಲ್ಕ, ಆಹಾರ, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯದ ವೆಚ್ಚಗಳನ್ನು ಭರಿಸಲು ಸಾಧ್ಯವಿಲ್ಲ. ಆದ್ದರಿಂದ ವೇತನವನ್ನು ಹೆಚ್ಚಳ ಮಾಡುವಂತೆ ಹಲವು ಮನವಿಗಳನ್ನು ಪ್ರಯೋಜನವಾಗಿಲ್ಲ. ಇದರಿಂದ ರೊಚ್ಚಿಗೆದ್ದ ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಏಪ್ರಿಲ್ ೯ರಂದು ನೋಯ್ಡಾ ಫೇಸ್-ನಲ್ಲಿ ಆರಂಭವಾದ ಈ ಹೋರಾಟ ವೇಗವಾಗಿ ವ್ಯಾಪಿಸಿದೆ. ನೋಯ್ಡಾದಲ್ಲೇ ಸುಮಾರು ೪೦,೦೦೦ ರಿಂದ ೫೦,೦೦೦ ಕಾರ್ಮಿಕರನ್ನು ಒಳಗೊಂಡು ೬–೮ ಪ್ರಮುಖ ಕೈಗಾರಿಕಾ ಪ್ರದೇಶಗಳು ಮತ್ತು ೧೫ಕ್ಕೂ ಹೆಚ್ಚು ಕೈಗಾರಿಕಾ ವಲಯಗಳಿಗೆ ವಿಸ್ತರಿಸಿದೆ ಎಂದು ತಿಳಿಸಿದರು
ಈ ಸಮಸ್ಯೆಗಳನ್ನು ಪರಿಹರಿಸುವ ಬದಲು, ಬಿಜೆಪಿ ಸರ್ಕಾರಗಳು ದಮನ ಮತ್ತು ತಪ್ಪು ಪ್ರಚಾರವನ್ನು ಆರಿಸಿಕೊಂಡಿವೆ. ೩೦೦–೪೦೦ಕ್ಕೂ ಹೆಚ್ಚು ಕಾರ್ಮಿಕರನ್ನು ಬಂಧಿಸಲಾಗಿದೆ; ಅವರ ಮನೆಗಳು ಮತ್ತು ಹಳ್ಳಿಗಳ ಮೇಲೆ ದಾಳಿ ನಡೆಸಲಾಗಿದೆ; ಕುಟುಂಬಗಳನ್ನು ಭೀತಿಗೊಳಿಸಲಾಗಿದೆ. ಟ್ರೇಡ್ ಯೂನಿಯನ್ ನಾಯಕರು, ವಿಶೇಷವಾಗಿ ಸಿಐಟಿಯು ನಾಯಕರು, ಅನಧಿಕೃತವಾಗಿ ಬಂಧಿಸಲ್ಪಟ್ಟಿದ್ದಾರೆ. ಮಹಿಳಾ ಕಾರ್ಮಿಕರ ಮೇಲೆ ಕ್ರೂರ ಹಲ್ಲೆಗಳು ನಡೆದಿವೆ. ಹೋರಾಟವನ್ನು “ರಾಷ್ಟ್ರ ವಿರೋಧಿ” ಎಂದು ಪ್ರಚಾರ ನಡೆಸುತ್ತಿರುವುದು ಖಂಡನೀಯ.
ಈ ವೇತನ ಹೆಚ್ಚಳ ನಾಟಕೀಯವಾಗಿದೆ ಬದುಕಲು ಅಗತ್ಯವಾದ ಮಟ್ಟಕ್ಕಿಂತ ಬಹಳ ಕಡಿಮೆ. ಉತ್ತರ ಪ್ರದೇಶ ಮತ್ತು ಹರಿಯಾಣದ ಕಾರ್ಮಿಕರು ದೆಹಲಿಯಂತೆ ಸಮಾನ ಜೀವನ ವೆಚ್ಚ ಇದ್ದರೂ ಕಡಿಮೆ ವೇತನ ಪಡೆಯುತ್ತಿದ್ದಾರೆ. ಏರುತ್ತಿರುವ ಬೆಲೆ ಏರಿಕೆಯ ನಡುವೆ, ತಿಂಗಳಿಗೆ ೨೬,೦೦೦ ಕನಿಷ್ಠ ವೇತನದ ಬೇಡಿಕೆಯು ನ್ಯಾಯಯುತವಾಗಿದೆ. ಆದ್ದರಿಂದ ತಕ್ಷಣ ಸರ್ಕಾರವು ಮಧ್ಯ ಪ್ರವೇಶಿಸಿ, ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕು. ಬಂಧಿಸಿರುವ ಕಾರ್ಮಿಕರನ್ನು ಬಿಡುಗಡೆ ಮಾಡಬೇಕೆಂದು ಸಿಐಟಿಯು ಕೋಲಾರ ಜಿಲ್ಲಾ ಸಮಿತಿಯು ತಹಶೀಲ್ದಾರ್ರವರ ಮೂಲಕ ಪ್ರಧಾನಮಂತ್ರಿಗಳಿಗೆ ಕಳುಹಿಸಿರುವ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಖಜಾಂಚಿ ಹೆಚ್.ಬಿ.ಕೃಷ್ಣಪ್ಪ, ಮುಖಂಡರಾದ ಎಂ. ಭೀಮರಾಜ್, ಬಿ.ಎಲ್.ಕೇಶವರಾವ್, ಅಪ್ಪಯ್ಯಣ್ಣ, ಆಶಾ, ಆರೋಗ್ಯನಾಥನ್ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್