
ನವದೆಹಲಿ, 12 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ, ಗಾನಕೋಗಿಲೆ ಆಶಾ ಭೋಸ್ಲೆ ಅವರು ಭಾನುವಾರ ನಿಧನರಾಗಿದ್ದು, ದೇಶದ ಸಂಗೀತ ಲೋಕದಲ್ಲಿ ಅಪಾರ ಶೋಕದ ವಾತಾವರಣ ಉಂಟಾಗಿದೆ.
ಹೃದಯಾಘಾತದಿಂದ ಅಸ್ವಸ್ಥಗೊಂಡಿದ್ದ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮಧ್ಯಾಹ್ನ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ನಾಳೆ ಬೆಳಿಗ್ಗೆ 11 ಗಂಟೆಯಿಂದ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಸಂಜೆ 4 ಗಂಟೆಗೆ ಶಿವಾಜಿ ಪಾರ್ಕ್ ಚಿತಾಗಾರದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
1933ರ ಸೆಪ್ಟೆಂಬರ್ 8ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜನಿಸಿದ ಆಶಾ ಭೋಂಸ್ಲೆ, ಪ್ರಸಿದ್ಧ ಗಾಯಕ ದೀನಾನಾಥ್ ಮಂಗೇಶ್ಕರ್ ಅವರ ಪುತ್ರಿ. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಅವರು ಕುಟುಂಬದ ಹೊಣೆ ಹೊತ್ತು, ತಮ್ಮ ಅಕ್ಕ ಲತಾ ಮಂಗೇಶ್ಕರ್ ಅವರೊಂದಿಗೆ ಗಾಯನ ಕ್ಷೇತ್ರಕ್ಕೆ ಪ್ರವೇಶಿಸಿದರು.
ಸುಮಾರು ಎಂಟು ದಶಕಗಳ ಕಾಲ ಗಾಯನ ಸೇವೆ ಸಲ್ಲಿಸಿದ ಅವರು 12 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಭಾರತೀಯ ಸಂಗೀತ ಕ್ಷೇತ್ರದಲ್ಲಿ ಅಪಾರ ಕೀರ್ತಿಯನ್ನು ಗಳಿಸಿದರು. ಹಿಂದಿ, ಮರಾಠಿ ಸೇರಿದಂತೆ ಹಲವು ಭಾಷೆಗಳಲ್ಲಿ ತಮ್ಮ ಧ್ವನಿಯನ್ನು ಹರಡಿದ ಅವರು, ಅನೇಕ ಪೀಳಿಗೆಗಳ ನಟಿಯರಿಗೆ ಹಿನ್ನೆಲೆ ಧ್ವನಿಯಾಗಿ ಸೇವೆ ಸಲ್ಲಿಸಿದರು.
ಒ. ಪಿ. ನಯ್ಯರ್, ಎಸ್. ಡಿ. ಬರ್ಮನ್, ಆರ್. ಡಿ. ಬರ್ಮನ್ ಮತ್ತು ಎ. ಆರ್. ರೆಹಮಾನ್ ಸೇರಿದಂತೆ ಹಲವು ಖ್ಯಾತ ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿದ ಅವರು ಅನೇಕ ಅಮರ ಗೀತೆಗಳನ್ನು ನೀಡಿದ್ದಾರೆ.
ಅವರ ಸಾಧನೆಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಪದ್ಮವಿಭೂಷಣ ಸೇರಿದಂತೆ ಅನೇಕ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಗೌರವಗಳು ಲಭಿಸಿವೆ. ಸಂಗೀತ ಕ್ಷೇತ್ರದಲ್ಲಿ ಅವರ ಅಪಾರ ಕೊಡುಗೆಯನ್ನು ಮನಗಂಡು ಗಿನ್ನೆಸ್ ದಾಖಲೆ ಪುಸ್ತಕದಲ್ಲಿಯೂ ಸ್ಥಾನ ಪಡೆದಿದ್ದರು.
ಆಶಾ ಭೋಂಸ್ಲೆ ಅವರ ಅಗಲಿಕೆಯಿಂದ ಭಾರತೀಯ ಸಂಗೀತ ಲೋಕದಲ್ಲಿ ಭಾರೀ ಶೂನ್ಯ ಉಂಟಾಗಿದೆ. ಅವರ ಸುಮಧುರ ಧ್ವನಿ ಸದಾ ಸಂಗೀತ ಪ್ರೇಮಿಗಳ ಮನದಲ್ಲಿ ಅನುರಣಿಸುತ್ತಲೇ ಇರುತ್ತದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa