

ಬಳ್ಳಾರಿ, 11 ಏಪ್ರಿಲ್ (ಹಿ.ಸ.) :
ಆ್ಯಂಕರ್ : ದೇಶಕ್ಕಾಗಿ ಏನನ್ನಾದರೂ ಕೊಡುಗೆ ನೀಡುವವರು ಉತ್ತಮ ಮತ್ತು ಸಭ್ಯ ನಾಗರಿಕರು ಎಂದು ಮಂಗಳಾನಾಥಾನಂದ ಜೀ ಮಹಾರಾಜ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಹಾನಗಲ್ ಶ್ರೀಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನ `ಪದವಿ ದಿನಾಚರಣೆ’ಯ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಭಾರತೀಯ ನಾಗರೀಕರು ದೇಶವನ್ನಾದರು ಸುತ್ತಬೇಕು ಅಥವಾ ಕೋಶವನ್ನಾದರು ಓದಬೇಕು. ದೇಶವನ್ನು ಸದಾಕಾಲ ಅಭಿವೃದ್ಧಿಪಡಿಸುವಲ್ಲಿ ನಿರಂತರ ಪ್ರಯತ್ನಶೀಲರಾಗಿ ಇರಬೇಕು ಎಂದು ಅವರು ಹೇಳಿದರು.
ಭಾರತದ ಯುವಪೀಳಿಗೆಯು ಮಾನವೀಯತೆ ಮತ್ತು ಮಾನವೀಯ ಮೌಲ್ಯಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿಕೊಂಡು ಕ್ರಿಯಾತ್ಮಕ – ರಚನಾತ್ಮಕ ಮತ್ತು ಅಭಿವೃದ್ಧಿಪರವಾದ ಚಿಂತನೆಗಳಲ್ಲಿ ತೊಡಗಿಕೊಂಡು ಹೆತ್ತವರ - ಪೋಷಕರ ಗೌರವ ಹೆಚ್ಚಿಸಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಬಿ. ಶ್ರೀಶೈಲಗೌಡ ಅವರು ಸ್ವಾಗತ ಕೋರಿದರು. ಉಪನ್ಯಾಸಕಿ ಕುಮಾರಿ ಸುಮಾ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಉಪನ್ಯಾಸಕಿ ಶ್ರೀಮತಿ ನಳಿನಿ ಅವರು ಪದವಿ ಪಡೆಯುತ್ತಿರುವ ಎಲ್ಲಾ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರತಿಜ್ಞೆಯನ್ನು ಬೋಧಿಸಿದರು. ಪದವಿ ಪ್ರಮಾಣ ಪತ್ರವನ್ನು ವಿತರಣೆ ಮಾಡಲಾಯಿತು.
ಹಾನಗಲ್ ಶ್ರೀಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಪಲ್ಲೇದ ಪ್ರಭುಲಿಂಗ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.
ಹಾನಗಲ್ ಶ್ರೀಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಬಾಣಾಪುರ ಜಡೆಸಿದ್ದನಗೌಡ, ಚಂದ್ರಶೇಖರ ಪಾಶ್ಚಾಪುರ್ ಅವರು ವೇದಿಕೆಯಲ್ಲಿದ್ದರು.
ಶಂಕ್ರಣ್ಣ - ಸುಂಕಣ್ಣ ಹಾಗೂ ಸಂಗಡಿಗರ ಅರುಣೋದಯ ಕಲಾ ತಂಡವು `ಜಾನಪದ ವೈವಿದ್ಯಮಯ’ ಪ್ರದರ್ಶನ ಮಾಡಿತು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್