ವೇಮಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಶೇಕಡ ೧೦೦ರಷ್ಟು ಫಲಿತಾಂಶ
ವೇಮಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಶೇಕಡ ೧೦೦ರಷ್ಟು ಫಲಿತಾಂಶ
ಶೇಕಡ ೧೦೦ರಷ್ಟು ಫಲಿತಾಂಶ ಬಂದಿರುವ ಕೋಲಾರ ತಾಲ್ಲೂಕು ವೇಮಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.


ಕೋಲಾರ, ೧೦ ಏಪ್ರಿಲ್ (ಹಿ.ಸ) :

ಆ್ಯಂಕರ್ : ಕಾಲೇಜಿನ ಇತಿಹಾಸದಲ್ಲೇ ಮೊದಲೆನ್ನುವಂತೆ ತಾಲ್ಲೂಕಿನ ವೇಮಗಲ್ ಪಟ್ಟಣದ ಸರ್ಕಾರಿ ಕಾಲೇಜಿಗೆ ಈ ಬಾರಿಯ ದ್ವಿತೀಯ ಪಿಯುಸಿಯಲ್ಲಿ ಶೇ.೧೦೦ ಫಲಿತಾಂಶ ಬಂದಿದೆ ಎಂದು ಕಾಲೇಜಿನ ಪ್ರಾಂಶುಪಾಲ ಎನ್.ವಾಸು ಹರ್ಷ ವ್ಯಕ್ತಪಡಿಸಿದರು. ಶುಕ್ರವಾರ ಅತ್ಯುನ್ನತ ಶ್ರೇಣಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ೨೦೨೬ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ಮೂರು ವಿಭಾಗಗಳಲ್ಲಿ ಶೇ.೧೦೦ ಫಲಿತಾಂಶ ಸಾಧಿಸಿರುವುದು ನಮಗೆ ಅತ್ಯಂತ ಸಂತೋಷ ಮತ್ತು ಹೆಮ್ಮೆಯ ವಿಷಯವಾಗಿದೆ. ಒಟ್ಟು ೯೧ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ, ಇದು ನಮ್ಮ ಕಾಲೇಜಿನ ಶೈಕ್ಷಣಿಕ ಸಾಧನೆಯನ್ನೇ ಪ್ರತಿಬಿಂಬಿಸುತ್ತದೆ ಎಂದ ಅವರು ಇದಕ್ಕೆ ಕಾರಣರಾದ ಎಲ್ಲಾ ಉಪನ್ಯಾಸಕರು,ಸಿಬ್ಬಂದಿಗೆ ಈ ಸಂದರ್ಭದಲ್ಲಿ ಧನ್ಯವಾದ ಸಲ್ಲಿಸುತ್ತಿದ್ದೇನೆ ಎಂದರು.

ಗ್ರಾಮೀಣ ಭಾಗದ ಸರ್ಕಾರಿ ಕಾಲೇಜೊಂದರಲ್ಲಿ ಶೇ.೧೦೦ ಫಲಿತಾಂಶದ ಸಾಧನೆ ಸುಲಭದ ಮಾತಲ್ಲ ಎಂದ ಪ್ರಾಂಶುಪಾಲ ವಾಸು, ವಿದ್ಯಾರ್ಥಿಗಳು ಈ ಸಾಧನೆಯೊಂದಿಗೆ ನಿಮ್ಮ ಬದುಕು ಉಜ್ವಲಗೊಳಿಸಿಕೊಂಡಿದ್ದೀರಿ, ನಿಮ್ಮ ಬದುಕಿನ ಮುಂದಿನ ಹಾದಿ ಮತ್ತಷ್ಟು ಸುಲಭವಾಗಲಿ, ಉನ್ನತ ಶಿಕ್ಷಣದಲ್ಲಿ ಉತ್ತಮ ಅವಕಾಶಗಳು ಒದಗಿ ಬರಲಿ ಎಂದು ಹಾರೈಸಿದರು. ದುಶ್ಚಟಗಳಿಂದ ದೂರಿವಿರಿ, ನಿಮ್ಮ ಮುಂದಿನ ಬದುಕಿನಲ್ಲಿ ಉತ್ತಮ ಗುರಿಯೊಂದಿಗೆ ಮುನ್ನಡೆದು ಪೋಷಕರ ಆಶಯ ಈಡೇರಿಸಿ, ಉತ್ತಮ ಬದುಕು ಕಟ್ಟಿಕೊಳ್ಳಿ ಎಂದು ತಿಳಿಸಿ, ವೈದ್ಯಕೀಯ, ಇಂಜಿಯರಿAಗ್ ಮಾತ್ರವಲ್ಲ ಇತರೆ ಅರೆ ವೈದ್ಯಕೀಯ,ತಾಂತ್ರಿಕವಾದ ಅನೇಕ ಕಲಿಕೆಯ ಹಾದಿಗಳಿದ್ದು, ಬಳಸಿಕೊಳ್ಳಿ ಎಂದರು.

ಕಾಲೇಜಿನ ಫಲಿತಾಂಶ ವಿಶ್ಲೇಷಿಸಿದ ಅವರು, ಅತ್ಯುನ್ನತ ಶ್ರೇಣಿಯಲ್ಲಿ ೮ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಇದರಲ್ಲಿ ವಿಜ್ಞಾನ ವಿಭಾಗದಿಂದ ೩, ವಾಣಿಜ್ಯ ವಿಭಾಗದಿಂದ ೩ ಹಾಗೂ ಕಲಾ ವಿಭಾಗದಿಂದ ೨ ವಿದ್ಯಾರ್ಥಿಗಳಿದ್ದಾರೆ. ಉಳಿದಂತೆ ಪ್ರಥಮ ಶ್ರೇಣಿಯಲ್ಲಿ ೫೯ ವಿದ್ಯಾರ್ಥಿಗಳು, ದ್ವಿತೀಯ ಶ್ರೇಣಿಯಲ್ಲಿ ೧೯ ಹಾಗೂ ಐವರು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶಾಲೆಯ ಎನ್.ಭವ್ಯ ೫೬೧ ಅಂಕ ಗಳಿಸಿ ಕಾಲೇಜಿಗೆ ಮೊದಲಿಗಳಾಗಿದ್ದಾಳೆ ಎಂದರು.

ಅತ್ಯುನ್ನತ ಶ್ರೇಣಿ ಪಡೆದ ಸಾಧಕರೆಂದರೆ ಭವ್ಯ ಎನ್-೫೬೧, ಪಾವನಾ ಕೆಸಿ-೫೫೩, ಯಶಸ್ವಿನಿ ಸಿಎಸ್-೫೩೩, ಕಸ್ತೂರಿ ಹೆಚ್ಎಂ -೫೩೨, ಧನ್ಯಶ್ರೀ ಎಸ್- ೫೨೯, ನಂದಿತಾ ಸಿ- ೫೨೬, ಶೈಲಾ ಎಂಎ -೫೨೩ ಹಾಗೂ ಹರ್ಷಿಣಿ ಸಿಆರ್-೫೧೮ ಅಂಕಗಳ ಸಾಧನೆ ಮಾಡಿದ್ದು, ಈ ಮಕ್ಕಳನ್ನು ಕಾಲೇಜಿನ ವತಿಯಿಂದ ಸನ್ಮಾನಿಸಿ ಶುಭ ಹಾರೈಸಲಾಯಿತು. ಈ ಸಾಧನೆಗೆ ವಿದ್ಯಾರ್ಥಿಗಳ ಪರಿಶ್ರಮ, ದೃಢ ನಿರ್ಧಾರಗಳು, ಪೋಷಕರ ಸಹಕಾರ ನಮ್ಮ ಎಲ್ಲಾ ಉಪನ್ಯಾಸಕರ ನಿರಂತರ ಪ್ರಯತ್ನ ಶ್ರಮ ಕಾರಣವಾಗಿದ್ದು, ನಮ್ಮ ಸಮರ್ಪಿತ ಉಪನ್ಯಾಸಕರು ಮತ್ತು ಸಿಬ್ಬಂದಿಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಅವರ ನಿರಂತರ ಪರಿಶ್ರಮ, ಸೂಕ್ತ ಮಾರ್ಗದರ್ಶನ ಮತ್ತು ಪ್ರೋತ್ಸಾಹವೇ ಈ ಸಾಧನೆಗೆ ಮುಖ್ಯ ಕಾರಣವಾಗಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿರುವ ವೇಮಗಲ್ ಸರ್ಕಾರಿ ಪಿಯು ಕಾಲೇಜು ಈ ಮಟ್ಟದ ಶೇ.೧೦೦ ಫಲಿತಾಂಶ ಸಾಧಿಸಿರುವುದು ಅತ್ಯಂತ ಶ್ಲಾಘನೀಯವಾಗಿದೆ. ಈ ಸಾಧನೆ ನಮ್ಮೆಲ್ಲರಿಗೂ ಮತ್ತಷ್ಟು ಪ್ರೇರಣೆಯಾಗಲಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಗುರಿಗಳನ್ನು ಸಾಧಿಸೋಣ ಎಂದು ತಿಳಿಸಿ, ತಮ್ಮ ಪ್ರಯತ್ನಕ್ಕೆ ನಿರಂತರವಾಗಿ ಮಾರ್ಗದರ್ಶನ ನೀಡಿದ ಮಾಜಿಸಭಾಪತಿ ವಿ.ಆರ್.ಸುದರ್ಶನ್ ಅವರಿಗೂ ಧನ್ಯವಾದ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕರಾದ ಟಿ.ಕೆ. ನಟರಾಜ್, ಭಾರತೀ ಕೆ ಎಂ ಸತೀಶ್ ಬಿ, ವೊಲ್ಗ ಶ್ರುತಿ, ನಿರ್ಮಲಾ ಕೆ, ಆನಂದ ಎನ್, ಮನೋಜ್ ಪಿ, ನಳಿನ ಆರ್, ರವಿಚಂದ್ರ ಎಂ, ವಿಶ್ವನಾಥ್, ಗಂಗಾಧರ್ ಮತ್ತು ವಿ.ಎಸ್.ಇನಾಯತ್ ಪಾಷಾ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande