ಕೈಗಾರಿಕಾ ಕಾರಿಡಾರ್ ವೇಮಗಲ್ನಲ್ಲಿ ಸಾರಿಗೆ ಸೌಲಭ್ಯದ ಕೊರತೆ
ಕೈಗಾರಿಕಾ ಕಾರಿಡಾರ್ ವೇಮಗಲ್ನಲ್ಲಿ ಸಾರಿಗೆ ಸೌಲಭ್ಯದ ಕೊರತೆ
ಕೋಲಾರ ಜಿಲ್ಲೆಯ ವೇಮಗಲ್ ಪಟ್ಟಣದಲ್ಲಿ ಸಮರ್ಪಕವಾದ ಸಾರಿಗೆ ಸೌಲಭ್ಯ ಇಲ್ಲದ ಕಾರಣ ಪ್ರತಿನಿತ್ಯ ಪ್ರಯಾಣಿಕರು ಪರದಾಡಬೇಕಾಗಿದೆ.


ಕೋಲಾರ, ೦೮ ಮಾರ್ಚ್ (ಹಿ.ಸ)

ಆಂಕರ್ : ಕೋಲಾರ ಜಿಲ್ಲೆಯ ವೇಮಗಲ್ ಪಟ್ಟಣ ಪಂಚಾಯಿತಿ ರಾಜ್ಯದಲ್ಲೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರಮುಖ ಕೈಗಾರಿಕಾ ಕೇಂದ್ರವಾಗಿ ಗುರುತಿಸಿಕೊಂಡಿದೆ. ವೇಮಗಲ್ ಇಂಡಸ್ಟ್ರಿಯಲ್ ಏರಿಯಾ ದಿನೇದಿನೇ ವಿಸ್ತರಿಸುತ್ತಿದ್ದು ದೇಶದ ವಿವಿಧ ಭಾಗಗಳಿಂದ ಕೈಗಾರಿಕೆಗಳು ಇಲ್ಲಿ ಹರಿದು ಬರುತ್ತಿವೆ.ಆದರೆ, ಸಮರ್ಪಕವಾದ ಸಾರಿಗೆ ವ್ಯವಸ್ಥೆಯಿಲ್ಲ.

ಸಾವಿರಾರು ಕಾರ್ಮಿಕರು ಪ್ರತಿದಿನ ಈ ಪ್ರದೇಶಕ್ಕೆ ಉದ್ಯೋಗಕ್ಕಾಗಿ ಆಗಮಿಸುತ್ತಿದ್ದಾರೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಈ ಪ್ರದೇಶದ ಮೂಲಕ ಸಾಗುತ್ತಿರುವುದರಿಂದ ವೇಮಗಲ್ನ ಪ್ರಾಮುಖ್ಯತೆ ಇನ್ನಷ್ಟು ಹೆಚ್ಚಾಗಿದೆ. ದೇಶಕ್ಕೆ ವಿಮಾನ ನಿರ್ಮಾಣ ಮಾಡುವ ಕೈಗಾರಿಕೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿರುವುದು ಈ ಪ್ರದೇಶದ ಕೈಗಾರಿಕಾ ಸಾಮರ್ಥ್ಯವನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಅವರ ಸ್ವಂತ ಊರಾಗಿರುವ ವೇಮಗಲ್ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದ್ದರೂ, ಮೂಲಭೂತ ಸೌಲಭ್ಯಗಳ ಕೊರತೆ ಇದೆ. ವಿಶೇಷವಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಕೊರತೆ ಜನರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ.

ವಿಜಯಪುರ, ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ಭಾಗಗಳಿಂದ ಬರುವ ಬಸ್ಸುಗಳಿಗೆ ಸಾರ್ವಜನಿಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಪ್ರತಿದಿನ ಕೈಗಾರಿಕೆಗಳಿಗೆ ತೆರಳುವ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಜನರು ಸಾರಿಗೆ ಸೌಲಭ್ಯಗಳ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೈಗಾರಿಕಾ ಪ್ರದೇಶವಾಗಿರುವುದರಿಂದ ದಿನೇದಿನೇ ಜನಸಂದಣಿ ಹೆಚ್ಚುತ್ತಿದ್ದು, ಪ್ರತ್ಯೇಕ ಸಾರಿಗೆ ವ್ಯವಸ್ಥೆಯ ಅಗತ್ಯತೆಯು ಮತ್ತಷ್ಟು ಸ್ಪಷ್ಟವಾಗುತ್ತಿದೆ.

ಇಷ್ಟೊಂದು ಮಹತ್ವ ಹೊಂದಿರುವ ವೇಮಗಲ್ ಪಟ್ಟಣ ಪಂಚಾಯಿತಿಗೆ ಪ್ರತ್ಯೇಕ ಸಾರಿಗೆ ವ್ಯವಸ್ಥೆ ಇಲ್ಲದಿರುವುದು ವಿಷಾದನೀಯ ಸಂಗತಿಯಾಗಿದೆ. ಅಭಿವೃದ್ಧಿಯ ಹೆಜ್ಜೆಯಲ್ಲಿ ಸಾಗುತ್ತಿರುವ ಈ ಪ್ರದೇಶದ ಜನರ ಸಮಸ್ಯೆಯನ್ನು ಸಂಬAಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸುವ ಸಮಯ ಬಂದಿದೆ.

ಹೀಗಾಗಿ ಜನಪ್ರತಿನಿಧಿಗಳು ಹಾಗೂ ಸಂಬAಧಪಟ್ಟ ಕೆಎಸ್ಆರ್ಟಿಸಿ ವಿಭಾಗಾಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ವೇಮಗಲ್ ಪಟ್ಟಣಕ್ಕೆ ಪ್ರತ್ಯೇಕ ಬಸ್ ಡಿಪೋ ಅಥವಾ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸುವತ್ತ ಕ್ರಮ ಕೈಗೊಳ್ಳಬೇಕು. ಇದರಿಂದ ಕೈಗಾರಿಕೆಗಳಿಗೆ ತೆರಳುವ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗುತ್ತದೆ. ಅಭಿವೃದ್ಧಿಯ ದಾರಿಗೆ ಹೆಜ್ಜೆ ಹಾಕಿರುವ ವೇಮಗಲ್ ಪಟ್ಟಣಕ್ಕೆ ಸಮರ್ಪಕ ಸಾರಿಗೆ ಸೌಲಭ್ಯ ಒದಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande