ಅರಾಭಿಕೊತ್ತನೂರು ಪ್ರೌಢಶಾಲೆಯಲ್ಲಿ ಶಿಕ್ಷಕ-ಪೋಷಕರ ಸಭೆ
ಅರಾಭಿಕೊತ್ತನೂರು ಪ್ರೌಢಶಾಲೆಯಲ್ಲಿ ಶಿಕ್ಷಕ-ಪೋಷಕರ ಸಭೆ
ಕೋಲಾರ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಅಲ್ಮಾಸ್ ಫರ್ವೀನ್ ತಾಜ್ ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಶೈಕ್ಷಣಿಕ ಸಾಲಿನ ಕೊನೆಯ ಪೋಷಕ-ಶಿಕ್ಷಕರ ಮಹಾಸಭೆಗೆ ಚಾಲನೆ ನೀಡಿ ಮಾತನಾಡಿದರು.


ಕೋಲಾರ, ೦೭ ಮಾರ್ಚ್ (ಹಿ.ಸ):

ಆಂಕರ್ : ಜಿಲ್ಲೆಗೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ೧೬ ಕರ್ನಾಟಕ ಪಬ್ಲಿಕ್ ಶಾಲೆಗಳು ಮಂಜೂರಾಗಿವೆ ಮತ್ತು ಎಲ್ಲಾ ಪ್ರಾಥಮಿಕ ಶಾಲೆಗಳಲ್ಲೂ ದ್ವಿಭಾಷಾ ಮಾಧ್ಯಮದಲ್ಲಿ ಶಿಕ್ಷಣ ಜಾರಿಗೊಳ್ಳಲಿದ್ದು, ಮಕ್ಕಳು,ಪೋಷಕರ ಇಚ್ಚೆಗೆ ತಕ್ಕಂತೆ ಗುಣಮಟ್ಟದ ಹಾಗೂ ಕನ್ನಡ-ಇಂಗ್ಲೀಷ್ ಎರಡೂ ಮಾಧ್ಯಮಗಳಲ್ಲಿ ಶಿಕ್ಷಣ ಸಿಗಲಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಅಲ್ಮಾಸ್ ಫರ್ವೀನ್ ತಾಜ್ ತಿಳಿಸಿದರು.

ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾಮಟ್ಟದ ಕಾರ್ಯಕ್ರಮವಾಗಿ ನಡೆದ ಈ ಶೈಕ್ಷಣಿಕ ಸಾಲಿನ ಕೊನೆಯ ಪೋಷಕ-ಶಿಕ್ಷಕರ ಮಹಾಸಭೆಗೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳನ್ನು ಶಾಲೆಗೆ ದಾಖಲಿಸಿದರೆ ನಮ್ಮ ಜವಾಬ್ದಾರಿ ಮುಗಿಯಿತು ಎಂಬ ಮನೋಭಾವದಿಂದ ಹೊರಬನ್ನಿ, ನಿಮ್ಮ ಮಕ್ಕಳ ಕಲಿಕಾ ಪ್ರಗತಿ ಅರಿಯಲು ಕನಿಷ್ಟ ತಿಂಗಳಿಗೆ ಎರಡು ಬಾರಿಯದರೂ ಶಾಲೆಗೆ ಬನ್ನಿ ಎಂದು ಪೋಷಕರಿಗೆ ಸಲಹೆ ನೀಡಿದರು. ಸರ್ಕಾರಿ ಶಾಲೆಗಳನ್ನು ಉಳಿಸಲು ಪೋಷಕರು ಸಹಕಾರ ನೀಡಿ, ಶಾಲೆಯಲ್ಲಿ ಓದಿ ಸಾಧಕರಾಗಿ ಉತ್ತಮ ಸ್ಥಾನಕ್ಕೆ ಹೋಗಿರುವ ಹಳೆಯ ವಿದ್ಯಾರ್ಥಿಗಳ ನೆರವನ್ನು ಶಾಲೆಗೆ ಹರಿಸಲು ಎಸ್ಡಿಎಂಸಿ ಗಮನಹರಿಸಬೇಕು,ದಾಖಲಾತಿ ಹೆಚ್ಚಿಸಬೇಕು ಎಂದು ಹೇಳಿದರು.

ಶಿಕ್ಷಕರು ಶಾಲಾಭಿವೃದ್ದಿ ಸಮಿತಿಯ ಸಹಕಾರ ಪಡೆದು ದಾಖಲಾತಿ ಆಂದೋಲನ ನಡೆಸಲು ಸಲಹೆ ನೀಡಿದ ಅವರು, ಸರ್ಕಾರಿ ಶಾಲೆಗಳ ದಾಖಲಾತಿ ಕುಸಿತ ಆತಂಕಕಾರಿಯಾಗಿದ್ದು, ಪೋಷಕರ ಮನವೊಲಿಸಿ ಮಕ್ಕಳನ್ನು ಇಲ್ಲೇ ದಾಖಲಿಸಲು ಮಾರ್ಗದರ್ಶನ ನೀಡಬೇಕು ಎಂದರು.

ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಶೇ.೧೦೦ರ ಗುರಿ ತಲುಪಿಸಲು ಶ್ರಮಿಸಲಾಗುತ್ತಿದೆ, ಶಿಕ್ಷಕರು, ಪೋಷಕರ ಸಹಕಾರ ಪಡೆದು ಗುಣಾತ್ಮಕ ಫಲಿತಾಂಶಕ್ಕಾಗಿ ರೂಪಿಸಿರುವ ಕ್ರಿಯಾ ಯೋಜನೆಯ ಸಮರ್ಪಕ ಅನುಷ್ಟಾನಕ್ಕೆ ಕ್ರಮವಹಿಸಲಾಗಿದೆ ಎಂದು ತಿಳಿಸಿದ ಅವರು, ಜಿಲ್ಲೆಯ ಶಾಸಕರೂ ಸಹಾ ಇದಕ್ಕೆ ಸಹಕಾರ ನೀಡಿ ಪೋಷಕರ ಮನೆ ಭೇಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳ ಕಲಿಕೆ ಸದೃಢಗೊಳ್ಳಲು ಸಹಕಾರ ನೀಡಿದ್ದಾರೆ ಎಂದು ಧನ್ಯವಾದ ಸಲ್ಲಿಸಿದರು.

ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ರಾಜೇಶ್ವರಿ ಮಾತನಾಡಿ, ಮನೆಯಲ್ಲೂ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಿ, ಶಿಕ್ಷಕರ ಪರಿಶ್ರಮ ಸಾರ್ಥಕಗೊಳ್ಳಲು ಪೋಷಕರು ಸಹಕರಿಸಬೇಕು, ಮಕ್ಕಳ ಕೈಗೆ ಮೊಬೈಲ್ ನೀಡದೇ ಅವರನ್ನು ಓದಿನತ್ತ ಗಮನಹರಿಸಲು ಮಾರ್ಗದರ್ಶನ ನೀಡಬೇಕು ಎಂದರು.

ಜಿಲ್ಲಾ ಶಿಕ್ಷಣಾಧಿಕಾರಿ ಡಾ.ಎಸ್.ಆರ್.ವೀಣಾ ಮಾತನಾಡಿ,ಮಕ್ಕಳು ಶಾಲೆಗೆ ಗೈರಾಗುವುದನ್ನು ತಪ್ಪಿಸಿ ಸಹಕರಿಸಲು ಪೋಷಕರಿಗೆ ಮನವಿ ಮಾಡಿದ ಅವರು, ಉತ್ತಮ ಫಲಿತಾಂಶದ ದೃಷ್ಟಿಯಿಂದ ಶಿಕ್ಷಕರು ತರಗತಿ ಜತೆಗೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಆದರೆ ಮಕ್ಕಳು ಶಾಲೆಗೆ ಗೈರಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಇದು ಮಕ್ಕಳ ಶೈಕ್ಷಣಿಕ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು.

ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಶಂಕರೇಗೌಡ ಮಾತನಾಡಿ, ಶಾಲಾ ಶಿಕ್ಷಣ ಇಲಾಖೆ ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಕಾರ್ಯಗತಗೊಳಿಸುತ್ತಿದೆ, ಯಾವುದೇ ಮಗು ಅನುತ್ತೀರ್ಣವಾಗಬಾರದು ಎಂಬ ದೃಷ್ಟಿಕೋನದಿಂದ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದ್ದೇವೆ ಎಂದರು.

ಎಸ್ಸೆಸ್ಸೆಲ್ಸಿ ಮಕ್ಕಳ ಪೋಷಕರು ಇಂದಿನಿ0ದ ಏ.೨ ರವರೆಗೂ ಹೆಚ್ಚಿನ ಜವಾಬ್ದಾರಿ ವಹಿಸಬೇಕು, ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿ, ಮಕ್ಕಳ ಚಲನವಲನಗಳ ಕಡೆ ಗಮನಹರಿಸಬೇಕು,ಈ ನಿಟ್ಟಿನಲ್ಲಿ ತಾಯಂದಿರ ಜವಾಬ್ದಾರಿ ಅತಿ ಮುಖ್ಯವಾದುದು ಎಂದರು.

ಶಾಲೆಯ ಮುಖ್ಯಶಿಕ್ಷಕಿ ತಾಹೇರಾನುಸ್ರತ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಿಡಿಪಿಐ ಕಚೇರಿಯ ತಾಂತ್ರಿಕ ಸಹಾಯಕ ಶರಣಪ್ಪ ಜಮಾದಾರ್, ಎಸ್ಡಿಎಂಸಿ ಅಧ್ಯಕ್ಷ ರಾಘವೇಂದ್ರ, ನಿಕಟಪೂರ್ವ ಅಧ್ಯಕ್ಷ ಮಹೇಂದ್ರ, ಎಸ್ಡಿಎಂಸಿ ಉಪಾಧ್ಯಕ್ಷ ವೆಂಕಟೇಶಪ್ಪ , ಶಿಕ್ಷಕರಾದ ಸಿದ್ದೇಶ್ವರಿ, ಎಂ.ಆರ್.ಗೋಪಾಲಕೃಷ್ಣ, ಭವಾನಿ, ವೆಂಕಟರೆಡ್ಡಿ,ಸುಗುಣಾ, ಶ್ವೇತಾ, ಶ್ರೀನಿವಾಸಲು, ರಮಾದೇವಿ, ಚೈತ್ರಾ,ಪೋಷಕರಾದ ನೇತ್ರಾವತಿ, ಜಮುನಾ, ಪವಿತ್ರ, ಆಶಾ, ವಸಂತ, ಸುರೇಶ್, ಬಾಬು,ಜಯಲಕ್ಷ್ಮಮ್ಮ, ರಮೇಶ್, ಪೃಥ್ವಿ, ಗಾಯತ್ರಿ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande