ಕೆ .ಸಿ. ಪದ್ಮಾವತಿಯವರಿಗೆ ‘ಅನಿತಾ ಕೌಲ್ ಉತ್ತಮ ಶಿಕ್ಷಕಿ’ ಪ್ರಶಸ್ತಿ ಪ್ರದಾನ
ಶಿಕ್ಷಕಿ ಕೆ.ಸಿ. ಪದ್ಮಾವತಿಯವರಿಗೆ ‘ಅನಿತಾ ಕೌಲ್ ಉತ್ತಮ ಶಿಕ್ಷಕಿ’ ಪ್ರಶಸ್ತಿ ಪ್ರದಾನ
ಕರ್ನಾಟಕ ಜ್ಞಾನ ವಿಜ್ಞಾನ ಜಿಲ್ಲಾ ಸಮಿತಿಯಿಂದ ಅನಿತಾ ಕೌಲ್ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಕೋಲಾರದಲ್ಲಿ ಕೆ.ಸಿ. ಪದ್ಮಾವತಿಯವರಿಗೆ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಪ್ರದಾನ ಮಾಡಿದರು.


ಕೋಲಾರ, ಮಾರ್ಚ್ ೦೭ (ಹಿ.ಸ)

ಆಂಕರ್ : ಸಮಾಜದ ಸ್ವಾಸ್ಥ್ಯ ಮತ್ತು ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ನಿಸ್ವಾರ್ಥ ಸೇವೆಯ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದವರನ್ನು ಗುರುತಿಸಿ ಗೌರವಿಸುವುದು ಶ್ಲಾಘನೀಯ ಎಂದು ವಿಧಾನ ಪರಿಷತ್ತಿನ ಸದಸ್ಯರಾದ ಇಂಚರ ಗೋವಿಂದರಾಜು ಅಭಿಪ್ರಾಯಪಟ್ಟರು.

ನಗರದ ನಾರಾಯಣಿ ಅರಮನೆಯಲ್ಲಿಂದು ಕರ್ನಾಟಕ ಜ್ಞಾನ ವಿಜ್ಞಾನ ಜಿಲ್ಲಾ ಸಮಿತಿ ಏರ್ಪಡಿಸಿದ್ದ ಅನಿತಾ ಕೌಲ್ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಬಂಗಾರಪೇಟೆಯ ದೊಡ್ಡಚಿನ್ನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಕೆ.ಸಿ.ಪದ್ಮಾವತಿ ರವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಶಿಕ್ಷಕರು ಕೇವಲ ಪಾಠ ಪ್ರವಚನಗಳಿಗೆ ಸೀಮಿತವಾಗದೆ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಮತ್ತು ನೈತಿಕ ಮೌಲ್ಯಗಳನ್ನು ಬಿತ್ತುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ವಿದ್ಯಾರ್ಥಿಗಳ, ಶಾಲೆಯ ಪ್ರಗತಿಗೆ ಪೂರಕವಾಗಿ ಶ್ರಮಿಸುವ ಶಿಕ್ಷಕರನ್ನು ಗೌರವಿಸುವುದು ನಮ್ಮ ಕರ್ತವ್ಯ ಆಗಬೇಕು ಎಂದರು.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಜಿ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಅನಿತಾ ಕೌಲ್ ಅವರು ಶಿಕ್ಷಣ ಕ್ಷೇತ್ರದಲ್ಲಿ ತಂದ ಸುಧಾರಣೆಗಳು ಅಪಾರ. ಅವರ ಹೆಸರಿನಲ್ಲಿ ನೀಡಲಾಗುತ್ತಿರುವ ಈ ಪ್ರಶಸ್ತಿಯು ಅರ್ಹ ಶಿಕ್ಷಕರಿಗೆ ಸಂದ ಗೌರವವಾಗಿದೆ. ಜಿಲ್ಲೆಯಲ್ಲಿ ಶಿಕ್ಷಣ ಮತ್ತು ವಿಜ್ಞಾನದ ಪ್ರಸಾರಕ್ಕೆ ಸಮಿತಿ ನಿರಂತರವಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದರು.

ಪ್ರಶಸ್ತಿ ಸ್ವೀಕರಿಸಿದ ಕೆ.ಸಿ. ಪದ್ಮಾವತಿ ಮಾತನಾಡಿ, ಈ ಪ್ರಶಸ್ತಿಯು ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ನಾನು ಶ್ರಮಿಸುತ್ತಿದ್ದು, ಈ ಗೌರವವು ನನ್ನ ಶಾಲೆಯ ಮಕ್ಕಳಿಗೆ ಮತ್ತು ಸಹೋದ್ಯೋಗಿಗಳಿಗೆ ಅರ್ಪಿತವಾಗಿದೆ ಎಂದರು.

ಸಮಾರಂಭದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಪದಾಧಿಕಾರಿಗಳಾದ ರಾಜ್ಯ ಮುಖಂಡ ಕೆ.ವಿ.ಜಗನ್ನಾಥ್, ಜಿಲ್ಲಾ ಮುಖಂಡರುಗಳಾದ ಕಾರ್ಯದರ್ಶಿ ವಿ.ಮಂಜುಳ, ಮುಕುಂದ, ಉಪನ್ಯಾಸಕ ಶ್ರೀನಿವಾಸ ಪ್ರಸಾದ್, ಕೊಂಡರಾಜನಹಳ್ಳಿ ಮಂಜುಳ ಮುಂತಾದವರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande