ನಾಡಿನ ಮಠಗಳಿಂದ ನಿಸ್ವಾರ್ಥ ಸೇವೆ:ಲಕ್ಷ್ಮೀ ಹೆಬ್ಬಾಳಕರ್
ಮೈಸೂರು, 07 ಮಾರ್ಚ್ (ಹಿ.ಸ.): ಆ್ಯಂಕರ್: ನಾಡಿನ ಮಠ ಮಾನ್ಯಗಳಿಂದ ಗುರು ಪರಂಪರೆ ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ. ಮಠಗಳು ಸರ್ಕಾರಕ್ಕೆ ಸಮಾನವಾಗಿ, ಸಾಮಾಜಿಕ ಬದ್ಧತೆಯೊಂದಿಗೆ ಕೆಲಸ ಮಾಡುತ್ತಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಮೈಸ
Hebalkar


ಮೈಸೂರು, 07 ಮಾರ್ಚ್ (ಹಿ.ಸ.):

ಆ್ಯಂಕರ್:

ನಾಡಿನ ಮಠ ಮಾನ್ಯಗಳಿಂದ ಗುರು ಪರಂಪರೆ ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ. ಮಠಗಳು ಸರ್ಕಾರಕ್ಕೆ ಸಮಾನವಾಗಿ, ಸಾಮಾಜಿಕ ಬದ್ಧತೆಯೊಂದಿಗೆ ಕೆಲಸ ಮಾಡುತ್ತಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಮಾದಹಳ್ಳಿಯಲ್ಲಿ ನಡೆದ ಶ್ರೀ ಗುರು ಬೂದಿಸ್ವಾಮಿಗಳ 397ನೇ ಆರಾಧನೆ, 63 ಪ್ರಮಥರ ಪೂಜೆ ಶ್ರೀಮಠದ ನೂತನ ಕಟ್ಟಡ, ನವೀಕೃತ ಹದಿನಾರು ಗದ್ದುಗೆಗಳು, ಶತಾಯುಷಿ ಶ್ರೀ ಸಿದ್ಧಲಿಂಗ ಸ್ವಾಮಿಗಳ ಸಭಾಂಗಣ ಹಾಗೂ ಬಸವದ್ವಾರ ಉದ್ಘಾಟನಾ ಸಮಾರಂಭದಲ್ಲಿ ಸಚಿವರು ಮಾತನಾಡಿದರು.

ಹುಣಸೂರು ತಾಲೂಕಿನ ಪ್ರಶಾಂತವಾದ ಸ್ಥಳದಲ್ಲಿ ಶ್ರೀ ಮಠ ತಲೆ ಎತ್ತಿದೆ, ಸುಮಾರು 700 ವರ್ಷಕ್ಕೂ ಹೆಚ್ಚು ಇತಿಹಾಸ ಹೊಂದಿದೆ. ನಾಡಿನಲ್ಲಿ ಗುರು ಪರಂಪರೆಗೆ ಉಕ್ಕಿನಕಂತೆ ಮಠ ತನ್ನದೇ ಕೊಡುಗೆ ನೀಡಿದೆ ಎಂದರು.

ಗಾಳಿ, ನೀರು, ಮಣ್ಣು, ಕಲ್ಲು, ಗಿಡ, ಮರ, ವಾಹನ ಎಲ್ಲವನ್ನೂ ನಾವು ಪೂಜೆ ಮಾಡುತ್ತೇವೆ. ಆದರೆ, ಮನುಷ್ಯರನ್ನ ಮನುಷ್ಯರು ದ್ವೇಷಿಸುವಂತ ಪರಿಸ್ಥಿತಿಗೆ ತಲುಪಿದ್ದೇವೆ. ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಧರ್ಮವನ್ನು ಉಳಿಸಿ ಬೆಳೆಸಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಕರೆ ನೀಡಿದರು.

ಮಠ ಮಾನ್ಯಗಳ ಇಂಥ ಕೆಲಸವನ್ನು ನೋಡಿದರೆ ನನಗೆ ನನ್ನ ಧರ್ಮದ ಬಗ್ಗೆ ಬಹಳ ಹೆಮ್ಮೆ ಎನಿಸುತ್ತದೆ. ಅನ್ನ, ಅಕ್ಷರ, ಆರೋಗ್ಯ, ಕೃಷಿ ದಾಸೋಹವನ್ನು ನೀಡುತ್ತಿರುವುದನ್ನು ನೋಡಿದರೆ ಸಂತೋಷ ಎನಿಸುತ್ತದೆ. ರಾಜಕಾರಣಿಗಳು ರಾಜಕಾರಣದ ಹೆಸರಲ್ಲಿ ಸಮಾಜ ಸೇವೆ ಮಾಡುತ್ತಿದ್ದರೆ, ನಮ್ಮ ಮಠ ಮಾನ್ಯಗಳು ನಿಸ್ವಾರ್ಥ ಸೇವೆ ಮಾಡುತ್ತಾ ಬಂದಿವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ನಾವು ಇಂದಿಗೂ ಗುರುಗಳಿಗೆ ಉತ್ತಮ ಸ್ಥಾನಮಾನವನ್ನು ನೀಡಿದ್ದೇವೆ. ತ್ರೇತಾಯುಗ ಹಾಗೂ ದ್ವಾಪರ ಯುಗದಲ್ಲಿ ಗುರುಗಳು ಅತ್ಯಂತ ಕಠಿಣ ಶಿಕ್ಷೆಯನ್ನು ಕೊಡುತ್ತಿದ್ದರು. ಆದರೆ, ಇವತ್ತಿನ ಕಲಿಯುಗದಲ್ಲಿ ಶಿಕ್ಷಕರೆ ವಿದ್ಯಾರ್ಥಿಗಳಿಗೆ ಕೈಮುಗಿಯುವ ಸಮಯ ಬಂದಿದೆ. ಇಂಥ ಕಲಿಯುಗದಲ್ಲೂ ಮಠ ಮಾನ್ಯಗಳು ವಿವಿಧ ದಾಸೋಹಗಳನ್ನು ಕೊಡುತ್ತಾ ಬಂದಿವೆ. ನೊಂದು ಬೆಂದಂತಹ ಮನಸ್ಸುಗಳಿಗೆ ಸಾಂತ್ವನ ಹೇಳುವ ಕೆಲಸ ಮಾಡುತ್ತಿದ್ದು, ನಿತ್ಯ ನಿರಂತರವಾಗಿ ದಾಸೋಹ ಕಾರ್ಯಗಳನ್ನು ಮಠ ಮಾನ್ಯಗಳು ಮಾಡಿಕೊಂಡು ಬರುತ್ತಿವೆ. ನಾವು ನಮ್ಮ ಧರ್ಮವನ್ನು ಪೂಜಿಸುತ್ತೇವೆ ಬೇರೆ ಧರ್ಮವನ್ನು ಗೌರವಿಸುತ್ತೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಇವತ್ತು ರಾಜ್ಯ ಸರ್ಕಾರದಲ್ಲಿ ನನಗೆ ಕೊಟ್ಟಂತಹ ಜವಾಬ್ದಾರಿಯನ್ನು ನಿಷ್ಠೆಯಿಂದ, ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ, ಇದುವರೆಗೂ 62 ಸಾವಿರ ಕೋಟಿ ರೂಪಾಯಿಗಳನ್ನು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. ಪ್ರತಿ ಫಲಾನುಭವಿಗಳಿಗೆ 54 ಸಾವಿರ ರೂಪಾಯಿಯನ್ನು ಹಾಕಲಾಗಿದೆ. ಇದು ನನಗೆ ಹೆಮ್ಮೆ ಎನಿಸಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಮಾದಹಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವ ಸ್ವಾಮಿಗಳು ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದರೆ, ಸುತ್ತೂರು ಶ್ರೀಕ್ಷೇತ್ರ ಮಠದ ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ತುಮಕೂರು ಶ್ರೀ ಸಿದ್ಧಲಿಂಗಾ ಮಠದ ಪರಮಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ಹುಣಸೂರು ಶಾಸಕ ಜಿ.ಡಿ.ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಸಿ.ಎನ್. ಮಂಜೇಗೌಡ, ಮಾಜಿ ಸಚಿವರಾದ ಸಾ.ರಾ ಮಹೇಶ್, ಮಾಜಿ ಶಾಸಕ ಅಯನೂರು ಮಂಜುನಾಥ್ ಸೇರಿದಂತೆ ಹಲವು ಮುಖಂಡರು, ಅಪಾರ ಸಂಖ್ಯೆಯಲ್ಲಿ ಶ್ರೀ ಉಕ್ಕಿನಕಂತೆ ಮಠದ ಭಕ್ತರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande