
ಗದಗ, 07 ಮಾರ್ಚ್ (ಹಿ.ಸ.)
ಆ್ಯಂಕರ್:- ಹೋಳಿ ಹಬ್ಬದ ಅಂಗವಾಗಿ ರಂಗಪಂಚಮಿ ದಿನ ಗದಗ-ಬೆಟಗೇರಿ ಅವಳಿ ನಗರದಲ್ಲಿ ಬಣ್ಣದೋಕುಳಿ ಸಂಭ್ರಮ ಜೋರಾಗಿ ನಡೆಯಿತು. ಯುವಕರು, ಮಹಿಳೆಯರು, ಮಕ್ಕಳು ಸೇರಿ ಪರಸ್ಪರ ಬಣ್ಣ ಎರಚಿಕೊಂಡು ಹಬ್ಬವನ್ನು ಉತ್ಸಾಹಭರಿತವಾಗಿ ಆಚರಿಸಿದರು.
ನಗರದ ವಿವಿಧ ಬಡಾವಣೆಗಳಲ್ಲಿ ಕಾಮರತಿ ಮೆರವಣಿಗೆಗಳು ನಡೆದಿದ್ದು, ಸಂಪ್ರದಾಯಿಕ ವಾದ್ಯಗಳಾದ ಹಲಗೆ ಮತ್ತು ರಗ್ಗುಗಳ ಧ್ವನಿಯ ನಡುವೆ ಸಂಭ್ರಮ ಕಳೆಗಟ್ಟಿತು.
ನಗರದ ಗಂಜಿ ಬಸವೇಶ್ವರ ದೇವಸ್ಥಾನ ಬಳಿಯಿರುವ ಸುಮಾರು 200 ವರ್ಷಗಳ ಇತಿಹಾಸ ಹೊಂದಿರುವ ಕಾಮರತಿ ವಿಶೇಷ ಆಕರ್ಷಣೆಯಾಗಿತ್ತು. ಸ್ಥಳೀಯರು ಸಂಪ್ರದಾಯಬದ್ಧವಾಗಿ ಹಲಗೆ ಮತ್ತು ರಗ್ಗು ಬಾರಿಸುತ್ತಾ ಕಾಮರತಿಯ ಮೆರವಣಿಗೆ ನಡೆಸಿದರು. ಮೆರವಣಿಗೆಯ ವೇಳೆ ಯುವಕರು ಬಣ್ಣಗಳನ್ನು ಎರಚಿಕೊಂಡು ಕುಣಿದು ಕುಪ್ಪಳಿಸುತ್ತಾ ಸಂಭ್ರಮಿಸಿದರು.
ಮುಳ್ಳಗಸಿ ಕಾಮರತಿ ದಹನ ಕಾರ್ಯಕ್ರಮವೂ ಸಂಪ್ರದಾಯದಂತೆ ನಡೆಯಿತು. ಕಾಮರತಿ ದಹನದ ಮೂಲಕ ಕೆಡುಕುಗಳ ನಾಶ ಮತ್ತು ಒಳಿತಿನ ಆರಂಭವಾಗಲಿ ಎಂಬ ನಂಬಿಕೆಯಿಂದ ಈ ಆಚರಣೆ ನಡೆಯುತ್ತದೆ ಎಂದು ಹಿರಿಯರಾದ ಮುತ್ತಣ್ಣ ತಿಳಿಸಿದರು.
ನಗರದ ಕಿಲ್ಲಾ ಓಣಿ, ಶಹಾಪುರ ಪೇಟೆ, ಗಂಗಾಪುರ ಸೇರಿದಂತೆ ಹಲವು ಬಡಾವಣೆಗಳಲ್ಲಿ ಕೂಡ ರಂಗಪಂಚಮಿ ಸಂಭ್ರಮ ಕಳೆಗಟ್ಟಿತ್ತು. ಯುವಕರು ವಿವಿಧ ಬಣ್ಣಗಳ ಪುಡಿಗಳನ್ನು ಪರಸ್ಪರ ಎರಚಿಕೊಂಡು, ಡೊಳ್ಳು-ಹಲಗೆಗಳ ಸದ್ದು ನಡುವೆ ಮೆರವಣಿಗೆ ನಡೆಸಿದರು. ಕೆಲವೆಡೆ ಸಾಂಪ್ರದಾಯಿಕ ನೃತ್ಯಗಳೂ ನಡೆದವು.
ಪುಟಾಣಿ ಮಕ್ಕಳು ಕೂಡ ಬಣ್ಣಗಳಲ್ಲಿ ಮಿಂದೆದ್ದು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಮಹಿಳೆಯರು ಸಹ ಕುಟುಂಬ ಸದಸ್ಯರೊಂದಿಗೆ ಸೇರಿ ಬಣ್ಣದಾಟದಲ್ಲಿ ಭಾಗವಹಿಸಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು. ಆರಾಧ್ಯ, ಆಧ್ಯಾ, ಲಲಿತಾ, ಅನುಷ್ಯಾ, ವಿರಾಟ್, ರಾಣಿ, ವಿರಾಜ್, ಶ್ರದ್ಧಾ, ಸೇರಿದಂತೆ ಹಲವರು ಭಾಗಿಯಾಗಿದ್ದರು
ಒಟ್ಟಿನಲ್ಲಿ ಗದಗ-ಬೆಟಗೇರಿ ಅವಳಿ ನಗರದಲ್ಲಿ ರಂಗಪಂಚಮಿ ಹಬ್ಬವು ಸಡಗರ-ಸಂಭ್ರಮದಿಂದ ನಡೆಯಿದ್ದು, ಬಣ್ಣದ ಹಬ್ಬದ ಕಳೆ ನಗರದೆಲ್ಲೆಡೆ ಮೆರೆದಿತು. ಸಂಪ್ರದಾಯ ಮತ್ತು ಸಂಭ್ರಮ ಒಂದಾಗಿದ್ದ ಈ ಹಬ್ಬ ಜನರಲ್ಲಿ ಹರ್ಷೋದ್ಗಾರ ಮೂಡಿಸಿತು.
---------------
ಹಿಂದೂಸ್ತಾನ್ ಸಮಾಚಾರ್ / lalita MP