ದಿಕ್ಕು ದಿಸೆಯಿಲ್ಲದ ಬಜೆಟ್, ಮಾಜಿ ಸಚಿವ ಸಿ ಸಿ ಪಾಟೀಲ್
ಗದಗ, 07 ಮಾರ್ಚ್ (ಹಿ.ಸ.) ಆ್ಯಂಕರ್:- ರಾಜ್ಯವನ್ನು ಮತ್ತಷ್ಟು ಸಾಲದ ಹೊರೆಗೆ ತಳ್ಳುವ ಆಯವ್ಯಯವಾಗಿದೆ ಎಂದು ಮಾಜಿ ಸಚಿವರು ಹಾಗೂ ನರಗುಂದ ಶಾಸಕ ಸಿ ಸಿ ಪಾಟೀಲ್ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, 72 ಸಾವಿರ ಕೋಟಿ ರೂಪಾಯಿ ಕೊರತೆಯ ಬಜೆಟ್ ಮಂಡಿಸಿರುವ ಮುಖ್ಯಮಂತ್
ಫೋಟೋ


ಗದಗ, 07 ಮಾರ್ಚ್ (ಹಿ.ಸ.)

ಆ್ಯಂಕರ್:- ರಾಜ್ಯವನ್ನು ಮತ್ತಷ್ಟು ಸಾಲದ ಹೊರೆಗೆ ತಳ್ಳುವ ಆಯವ್ಯಯವಾಗಿದೆ ಎಂದು ಮಾಜಿ ಸಚಿವರು ಹಾಗೂ ನರಗುಂದ ಶಾಸಕ ಸಿ ಸಿ ಪಾಟೀಲ್ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, 72 ಸಾವಿರ ಕೋಟಿ ರೂಪಾಯಿ ಕೊರತೆಯ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿ ಸುಮಾರು 1.32 ಲಕ್ಷ ಕೋಟಿ ರೂಪಾಯಿ ಸಾಲ ಮಾಡುವುದನ್ನೇ ಸಾಧನೆಯಂತೆ ಒತ್ತಿ ಹೇಳುತ್ತಿದ್ದಾರೆ. ಆದರೆ ಇದು ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಿದ ಬಜೆಟ್ ಅಲ್ಲದೆ ದಿಕ್ಕು ದಿಸೆಯಿಲ್ಲದ ಬಜೆಟ್ ಆಗಿದೆ ಎಂದು ಅವರು ಆರೋಪಿಸಿದರು.

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಭಾರದಿಂದ ಈಗಾಗಲೇ ಒತ್ತಡಕ್ಕೆ ಒಳಗಾಗಿದ್ದು, ಕೃಷಿ ವಲಯಕ್ಕೆ ಕೇವಲ 17,780 ಕೋಟಿ ರೂಪಾಯಿ ಮಾತ್ರ ಮೀಸಲಿಟ್ಟಿರುವುದು ಕೃಷಿ ಕ್ಷೇತ್ರದ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಪಾಟೀಲ ಅಭಿಪ್ರಾಯಪಟ್ಟರು. ಅನ್ನದಾತರು ಮತ್ತು ಕೃಷಿ ಕಾರ್ಮಿಕರು ರಾಜ್ಯದ ಆರ್ಥಿಕತೆಯ ಬೆನ್ನೆಲುಬಾಗಿದ್ದರೂ, ಅವರ ಸಮಸ್ಯೆಗಳಿಗೆ ಸ್ಪಂದಿಸುವಂತಹ ಯಾವುದೇ ಸ್ಪಷ್ಟ ಯೋಜನೆಗಳನ್ನು ಸರ್ಕಾರ ಬಜೆಟ್ನಲ್ಲಿ ಘೋಷಿಸಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಅದೇ ರೀತಿ ಉತ್ತರ ಕರ್ನಾಟಕ ಭಾಗದ ಬಹುಕಾಲದ ಪ್ರಮುಖ ನೀರಾವರಿ ಯೋಜನೆಗಳಾದ ಕೃಷ್ಣಾ ಮೇಲ್ದಂಡೆ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಮಹದಾಯಿ ಯೋಜನೆಗಳ ಕುರಿತು ಬಜೆಟ್ನಲ್ಲಿ ಯಾವುದೇ ಸ್ಪಷ್ಟತೆ ನೀಡದಿರುವುದು ಜನರಲ್ಲಿ ನಿರಾಸೆ ಮೂಡಿಸಿದೆ. ಈ ಭಾಗದ ಅಭಿವೃದ್ಧಿಗೆ ಸರ್ಕಾರ ವಿಶೇಷ ಆದ್ಯತೆ ನೀಡಬೇಕಾಗಿದ್ದರೂ ಅದು ಕಾಣಿಸದೇ ಇರುವುದರಿಂದ ಉತ್ತರ ಕರ್ನಾಟಕದ ಜನತೆ ತೀವ್ರ ಅಸಮಾಧಾನಗೊಂಡಿದ್ದಾರೆ ಎಂದು ಹೇಳಿದರು.

ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇಂದಿರಾ ಕಿಟ್ ಹಾಗೂ ಕ್ಯಾಂಟೀನ್ಗಳಂತಹ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಆದರೆ ಉದ್ಯಮಿಗಳು, ರೈತರು ಮತ್ತು ಕೃಷಿ ಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸುವಂತಹ ಯಾವುದೇ ಕ್ರಮಗಳು ಬಜೆಟ್ನಲ್ಲಿ ಕಾಣಿಸಿಲ್ಲ ಎಂದು ಅವರು ಟೀಕಿಸಿದರು.

ಇದಲ್ಲದೆ ಬಜೆಟ್ ಭಾಷಣದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸುವುದು ಮತ್ತು ದೂಷಿಸುವುದಕ್ಕೆ ಹೆಚ್ಚು ಆದ್ಯತೆ ನೀಡಿರುವುದು ಸರಿಯಲ್ಲ. ಬಜೆಟ್ ಅನ್ನು ರಾಜಕೀಯ ವೇದಿಕೆಯನ್ನಾಗಿ ಬಳಸುವ ಮೂಲಕ ಕೆಟ್ಟ ಸಂಪ್ರದಾಯವನ್ನು ಆರಂಭಿಸಿದ ದೇಶದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾತ್ರರಾಗಿದ್ದಾರೆ ಎಂದು ಪಾಟೀಲ ವ್ಯಂಗ್ಯವಾಡಿದರು.

ಉತ್ತರ ಕರ್ನಾಟಕ ಭಾಗಕ್ಕೆ ಹೇಳಿಕೊಳ್ಳುವಂತಹ ಯಾವುದೇ ಹೊಸ ಯೋಜನೆಗಳನ್ನು ಈ ಬಜೆಟ್ನಲ್ಲಿ ಘೋಷಿಸದಿರುವುದು ಈ ಭಾಗದ ಸಚಿವರು ಹಾಗೂ ಕಾಂಗ್ರೆಸ್ ಶಾಸಕರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಉಂಟುಮಾಡಿದೆ. ಜನರ ನಿರೀಕ್ಷೆಗಳಿಗೆ ತಕ್ಕಂತೆ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕಾಗಿದ್ದ ಸರ್ಕಾರ ಅದರಲ್ಲಿ ವಿಫಲವಾಗಿದೆ ಎಂದು ಅವರು ಹೇಳಿದರು.

ಇದುವರೆಗೆ ಕರ್ನಾಟಕ ರಾಜ್ಯದ ಒಟ್ಟು ಸಾಲ ಸುಮಾರು 8 ಲಕ್ಷ 25 ಸಾವಿರ ಕೋಟಿ ರೂಪಾಯಿಗಳಷ್ಟಿದ್ದು, ಅದರಲ್ಲಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಮಾತ್ರ ಸುಮಾರು 5 ಲಕ್ಷ 55 ಸಾವಿರ ಕೋಟಿ ರೂಪಾಯಿ ಸಾಲ ಮಾಡಲಾಗಿದೆ ಎಂದು ಆರೋಪಿಸಿದರು. ಈ ಬಜೆಟ್ ರಾಜ್ಯದ ಸಮಗ್ರ ಅಭಿವೃದ್ಧಿಗೆ ದಾರಿ ತೋರಿಸುವುದಕ್ಕಿಂತಲೂ ತೃಷ್ಟೀಕರಣ ಹಾಗೂ ಅಲ್ಪಸಂಖ್ಯಾತರನ್ನು ಓಲೈಸುವ ಉದ್ದೇಶದಿಂದ ರೂಪಿಸಲಾಗಿದೆ ಎಂದು ಸಿ.ಸಿ. ಪಾಟೀಲ ಟೀಕಿಸಿದರು.

ರಾಜ್ಯದ ಜನತೆ ಈ ಬಜೆಟ್ ಕುರಿತು ಭಾರೀ ನಿರಾಸೆ ವ್ಯಕ್ತಪಡಿಸುತ್ತಿದ್ದು, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿರುವ ಜನತೆ ಕೂಡ ಈ ಬಜೆಟ್ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande