
ಪಾಟ್ನಾ, 05 ಮಾರ್ಚ್ (ಹಿ.ಸ.):
ಆ್ಯಂಕರ್:
ಬಿಹಾರ ರಾಜಕೀಯದಲ್ಲಿ ನಡೆಯುತ್ತಿದ್ದ ಊಹಾಪೋಹಗಳಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ತೆರೆ ಎಳೆದಿದ್ದಾರೆ. ಅವರು ತಮ್ಮ ಎಕ್ಸ ಖಾತೆಯಲ್ಲಿ ರಾಜ್ಯಸಭೆಗೆ ಸ್ಪರ್ಧಿಸುವ ಇಂಗಿತವನ್ನು ಸ್ಪಷ್ಟಪಡಿಸಿದ್ದಾರೆ.
“ಎರಡು ದಶಕಗಳಿಗೂ ಹೆಚ್ಚು ಕಾಲ ನೀವು ನನ್ನ ಮೇಲಿನ ನಂಬಿಕೆ ಮತ್ತು ಬೆಂಬಲವನ್ನು ಉಳಿಸಿಕೊಂಡಿದ್ದೀರಿ. ಆ ಶಕ್ತಿಯಿಂದಲೇ ನಾನು ಬಿಹಾರ ಮತ್ತು ನಿಮ್ಮೆಲ್ಲರಿಗೂ ಸಂಪೂರ್ಣ ಸೇವೆ ಸಲ್ಲಿಸಿದ್ದೇನೆ. ನಿಮ್ಮ ಬೆಂಬಲದಿಂದ ಬಿಹಾರ ಇಂದು ಅಭಿವೃದ್ಧಿ ಮತ್ತು ಗೌರವದ ಹೊಸ ಆಯಾಮವನ್ನು ತಲುಪಿದೆ. ಇದಕ್ಕಾಗಿ ನಾನು ಹಲವಾರು ಬಾರಿ ನಿಮ್ಮೆಲ್ಲರಿಗೂ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದೇನೆ,” ಎಂದು ಅವರು ಹೇಳಿದ್ದಾರೆ.
ತಮ್ಮ ಸಂಸದೀಯ ಜೀವನದ ಕುರಿತು ಮಾತನಾಡಿದ ಅವರು, ಆರಂಭದಿಂದಲೇ ಬಿಹಾರ ವಿಧಾನಸಭೆಯ ಎರಡೂ ಸದನಗಳು ಹಾಗೂ ಸಂಸತ್ತಿನ ಎರಡೂ ಸದನಗಳ ಸದಸ್ಯರಾಗಬೇಕೆಂಬ ಆಸೆ ಹೊಂದಿದ್ದೆ ಎಂದು ತಿಳಿಸಿದ್ದಾರೆ. “ಈ ನಿಟ್ಟಿನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ರಾಜ್ಯಸಭೆಯ ಸದಸ್ಯನಾಗಲು ಪ್ರಯತ್ನಿಸುತ್ತಿದ್ದೇನೆ. ನಿಮ್ಮೊಂದಿಗಿನ ನನ್ನ ಬಾಂಧವ್ಯ ಮುಂದುವರಿಯುತ್ತದೆ. ಅಭಿವೃದ್ಧಿ ಹೊಂದಿದ ಬಿಹಾರ ನಿರ್ಮಾಣಕ್ಕಾಗಿ ನನ್ನ ಸಂಕಲ್ಪ ಅಚಲವಾಗಿರುತ್ತದೆ,” ಎಂದು ಭರವಸೆ ನೀಡಿದ್ದಾರೆ.
ರಚನೆಯಾಗಲಿರುವ ಹೊಸ ಸರ್ಕಾರಕ್ಕೆ ತಮ್ಮ ಸಂಪೂರ್ಣ ಬೆಂಬಲ ಮತ್ತು ಮಾರ್ಗದರ್ಶನ ಇರಲಿದೆ ಎಂದು ತಿಳಿಸಿದ್ದಾರೆ. ರಾಜ್ಯಸಭಾ ಚುನಾವಣೆಗೆ ಅವರು ಶೀಘ್ರದಲ್ಲೇ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa