
ಕೋಲಾರ, ೩೧ ಮಾರ್ಚ್ (ಹಿ.ಸ):
ಆ್ಯಂಕರ್ : ಕರ್ನಾಟಕ ಹ್ಯಾಂಡ್ ಬಾಲ್ ಅಸೋಸಿಯೇಷನ್ (ರಿ ) ಬೆಂಗಳೂರು ವತಿಯಿಂದ ರಾಮನಗರದ ಕೇಂಬ್ರಿಡ್ಜ್ ಸ್ಕೂಲ್ ಆಫ್ ಎಜುಕೇಶನ್ ಆಟದ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ಕೋಲಾರ ತಾಲೂಕಿನ ವಕ್ಕಲೇರಿಯ ಜವಾಹರ್ ನವೋದಯ ವಿದ್ಯಾಸಂಸ್ಥೆಯ ೧೫ ವರ್ಷ ವಯೋಮಿತಿ ಒಳಗಿನ ಬಾಲಕರ ತಂಡ ಟ್ರೋಫಿ ಮುಡಿಗೇರಿಸಿಕೊಂಡು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಯಿತು.
ರಾಜ್ಯದ ವಿವಿಧ ಶಾಲೆಗಳ ತಂಡಗಳ ವಿರುದ್ದ ಸೆಣಸಿದ ಕೋಲಾರದ ತಂಡ ಇಡೀ ಪಂದ್ಯದಲ್ಲಿ ಸೋಲರಿಯದೇ ಗೆಲ್ಲುತ್ತಲೇ ಮುಂದೆ ಸಾಗಿದ್ದು ವಿಶೇಷವಾಗಿದ್ದು, ಕೊನೆಗೆ ಟ್ರೋಫಿ ಜತೆಗೆ ರಾಷ್ಟ್ರ ಮಟ್ಟದ ಪಂದ್ಯದಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿತು.ಕರ್ನಾಟಕ ಹ್ಯಾಂಡ್ ಬಾಲ್ ಅಸೋಸಿಯೇಷನ್ನ ಇತಿಹಾಸದಲ್ಲೇ ಇದು ಅಪ್ರತಿಮ ಸಾಧನೆಯಾಗಿದ್ದು, ಒಂದೂ ತಂಡದ ಮೇಲೆ ಸೋಲು ಕಾಣದ ಆಟಗಾರರ ಸಾಧನೆಗೆ ಅಭಿನಂದನೆಯ ಮಹಾಪೂರವೇ ಹರಿಯಿತು.
ರಾಷ್ಟ್ರ ಮಟ್ಟದ ಹ್ಯಾಂಡ್ ಬಾಲ್ ಸ್ಪರ್ಧೆಗೆ ಆಯ್ಕೆಯಾಗಿರುವ ಈ ತಂಡದ ತಂಡದ ನಾಯಕನಾಗಿ ರೋಹನ್ ಅತಿ ಹೆಚ್ಚು ಗೋಲ್ ಹಾಕಿದ ಕೀರ್ತಿಗೆ ಪಾತ್ರರಾದರೆ ಪಂಕಜ್ ಗೌಡ ಎಂ ಸಹಾ ಅವರ ಹಾದಿಯಲ್ಲೇ ಸಾಗಿ ತಂಡವನ್ನು ಗೆಲುವಿನ ಹಾದಿನಲ್ಲಿ ಮುನ್ನಡೆಸಿದರು. ವಿಜೇತ ತಂಡದ ಸ್ಪರ್ಧಾಳುಗಳು, ತರಬೇತಿದಾರ ಬಾಬು, ತಂಡದ ಮೇಲ್ವಿಚಾರಕ ಸುನೀಲ್ ಅವರಗಳನ್ನು ಕರ್ನಾಟಕ ಹ್ಯಾಂಡ್ ಬಾಲ್ ಅಸೋಸಿಯೇಷನ್ ಅಧ್ಯಕ್ಷ ರವಿ, ಕೋಲಾರ ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯೇಷನ್ ಅಧ್ಯಕ್ಷ ನಾಸಿರ್ ಪಾಷ, ಕಾರ್ಯದರ್ಶಿ ಲಕ್ಷ್ಮೀಕಾಂತ್, ಜವಾಹರ್ ನವೋದಯ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಉಮಾಪತಿ ರೆಡ್ಡಿ, ಉಪ ಪ್ರಾಂಶುಪಾಲರಾದ ಉಮಾ ಅಲ್ಲಿನ ಶಿಕ್ಷಕರು ಹಾಗೂ ಪೋಷಕರವರ್ಗ ಅಭಿನಂದಿಸಿದ್ದಾರೆ.
ಪ್ರಾಂಶುಪಾಲ ಉಮಾಪತಿ ರೆಡ್ಡಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ರಾಷ್ಟ್ರ ಮಟ್ಟದಲ್ಲೂ ಸಾಧನೆ ಮಾಡಿ ರಾಜ್ಯ ಹಾಗೂ ಜಿಲ್ಲೆಯ ಕೀರ್ತಿ ಬೆಳಗಲಿ ಎಂದು ಹಾರೈಸಿ, ಈ ಸಾಧನೆಗಾಗಿ ತರಬೇತಿ ನೀಡಿದ ತರಬೇತುದಾರರನ್ನು ಅಭಿನಂದಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್