
ಕೋಲಾರ, ಮಾರ್ಚ್ (ಹಿ.ಸ):
ಆ್ಯಂಕರ್ : ತೃತೀಯ ಭಾಷೆ ಹಿಂದಿಯನ್ನು ರದ್ದು ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಮಕ್ಕಳು ಕಲಿಯುವ ಜ್ಞಾನವನ್ನು ಕಿತ್ತುಕೊಳ್ಳವ ಕೆಲಸ ಮಾಡಿದೆ ಎಂದು ಕರ್ನಾಟಕ ಮಾವು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ವಾಸುದೇವ ಟೀಕಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಿಕ್ಷಣ ಇಲಾಖೆಯಿಂದ ಏಕಾಏಕಿ ತೃತೀಯ ಭಾಷೆ ಹಿಂದಿಯನ್ನು ತೆಗೆದುಹಾಕಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿರುವ ಸಮಯದಲ್ಲೇ ಹಿಂದೆ ಭಾಷೆ ವಿರೋಧಿ ನಡೆ ಅನುಸರಿಸಿರುವುದು ಬೇಕಾಗಿರಲಿಲ್ಲ. ಲಕ್ಷಾಂತರ ವಿದ್ಯಾರ್ಥಿಗಳು ಹಿಂದಿ ಪಾಠ ಓದಿ ಅಭ್ಯಾಸ ಮಾಡಿದ್ದಾರೆ. ಈಗ ದಿಢೀರನೆ ಈ ತೀರ್ಮಾನ ಕೈಗೊಂಡಿರುವುದು ಮಕ್ಕಳಿಗೆ ದೊಡ್ಡ ನಷ್ಟವಾಗಿದೆ. ವರ್ಷಪೂರ್ತಿ ಕಲಿಸಿದ ಗುರುಗಳ ಹಾಗೂ ವಿದ್ಯಾರ್ಥಿಗಳ ಪಾಡೇನು, ಶಿಕ್ಷಕರ ಶ್ರಮಕ್ಕೆ ಹಾಗೂ ಮಕ್ಕಳ ಕಲಿಕೆಗೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿರುವ ಅವರು ನಮ್ಮ ಕನ್ನಡದ ಮಕ್ಕಳನ್ನು ಬರೀ ಕನ್ನಡಕ್ಕೆ ಸೀಮಿತಗೊಳಿಸಬಾರದು ಹಿಂದಿ ಕಲಿತರೆ ರಾಷ್ಟ್ರ ಮಟ್ಟದಲ್ಲಿ ಮಕ್ಕಳು ಪ್ರತಿ ನಿಧಿಸಲು, ಬೆಳೆಯಲು ಸಹಾಯವಾಗುತ್ತದೆ.
ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ಇರಬೇಕು. ಕನ್ನಡ ನಮ್ಮ ಮಣ್ಣಿನ ಭಾಷೆ ಆದರೆ ಹಿಂದಿ ನಮ್ಮ ದೇಶದಲ್ಲಿ ಅತಿ ಹೆಚ್ಚು ಜನರು ಮಾತನಾಡುವ ಭಾಷೆಯಾಗಿದೆ. ನಮ್ಮ ರಾಜ್ಯದಲ್ಲಿ ಹಲವಾರು ದಶಕಗಳಿಂದ ಹಿಂದಿಯನ್ನು ತೃತೀಯ ಭಾಷೆಯನ್ನಾಗಿ ಕಲಿಸಲಾಗುತ್ತಿದೆ. ಹೀಗಾಗಿ ನಮ್ಮ ಕನ್ನಡ ಮಕ್ಕಳು ಆ ಭಾಷೆಯನ್ನು ಇಷ್ಟಪಟ್ಟು ಕಲಿಯುವುದರಲ್ಲಿ ತಪ್ಪೇನೂ ಇಲ್ಲ. ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಮಕ್ಕಳಿಗೆ ನಿತ್ಯ ಹಿಂದಿ ಕಲಿಸುತ್ತಿರುವ ರಾಜ್ಯದಲ್ಲಿನ ಸಾವಿರಾರು ಶಿಕ್ಷಕರ ಭವಿಷ್ಯವನ್ನು ಸರ್ಕಾರ ಹಾಳುಗೇಡವಿದೆ. ಸರ್ಕಾರ ಏಕಾಏಕಿ ದ್ವಿಭಾಷಾ ಸೂತ್ರ ಅಳವಡಿಸುವ ಮುಂಚೆ ಶಿಕ್ಷಣ ತಜ್ಞರ ಜೊತೆ ಸಮಾಲೋಚನೆ ನಡೆಸಿ ಸಾಧಕಭಾದಕಗಳ ಬಗ್ಗೆ ಚರ್ಚೆ ನಡೆಸಬೇಕಿತ್ತು. ರಾಜ್ಯದಲ್ಲಿ ಖಾಲಿ ಇರುವ ಹಿಂದಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕಿತ್ತು. ದ್ವಿಭಾಷಾ ಸೂತ್ರದಿಂದ ಬಡವರ ಮಕ್ಕಳು ಉನ್ನತ ವಿಧ್ಯಾಭ್ಯಾಸ ಹಾಗೂ ಉದ್ಯೋಗಗಳಿಂದ ವಂಚಿತರಾಗುತ್ತಾರೆ ಎಂದು ಸರ್ಕಾರದ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್