
ಕೋಲಾರ: ಮಾರ್ಚ್ ೩೧ (ಹಿ.ಸ):
ಆ್ಯಂಕರ್ : ಜಗತ್ತಿಗೆ ಶಾಂತಿ ಮತ್ತು ಅಹಿಂಸೆಯ ಪಾಠವನ್ನು ಬೋಧಿಸಿದ ಭಗವಾನ್ ಮಹಾವೀರರ ತತ್ವಗಳು ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿದ್ದು, ನಾವು ಅಹಿಂಸೆ ಮತ್ತು ಸಮಾನತೆಯ ಹಾದಿಯಲ್ಲಿ ಸಾಗುವುದರಿಂದ ಮಾತ್ರ ಪ್ರಬಲ ಸಮಾಜ ಕಟ್ಟಲು ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ಪ್ರವೀಣ್ ಪಿ. ಬಾಗೇವಾಡಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವರ್ಧಮಾನ ಮಹಾವೀರರ ಜೀವನದ ಕುರಿತು ಮಾತನಾಡಿದ ಅವರು ರಾಜಮನೆತನದಲ್ಲಿ ಜನಿಸಿದರೂ, ಜನಸಾಮಾನ್ಯರ ಕಷ್ಟಗಳನ್ನು ಕಂಡು ಮನನೊಂದ ಅವರು ಎಲ್ಲವನ್ನೂ ತ್ಯಜಿಸಿ ತಪಸ್ಸಿನ ಮೂಲಕ ಜ್ಞಾನೋದಯ ಪಡೆದು ಮಹಾವೀರರಾದರು. ಜೈನ ಧರ್ಮದ ೨೪ನೇ ಹಾಗೂ ಕೊನೆಯ ತೀರ್ಥಂಕರರಾಗಿ ಅವರು ಅಹಿಂಸೆ, ಸತ್ಯ ಮತ್ತು ಕದಿಯದಿರುವಂತಹ ಉನ್ನತ ತತ್ವಗಳನ್ನು ಬೋಧಿಸಿದರು.
ಮನುಷ್ಯ ತನ್ನೊಳಗಿನ ದೌರ್ಬಲ್ಯಗಳನ್ನು ಗೆಲ್ಲುವುದೇ ನಿಜವಾದ ವಿಜಯ. ಅಂತಹ ವಿಜೇತನನ್ನು 'ಜಿನ' ಎಂದು ಕರೆಯಲಾಗುತ್ತದೆ, ಇದರಿಂದಲೇ ಜೈನ ಧರ್ಮ ಎಂಬ ಹೆಸರು ಬಂದಿದೆ ಎಂದರು.
ಇಂದು ನಾವು ಚಲನಚಿತ್ರಗಳಲ್ಲೂ ಹಿಂಸೆಯನ್ನೇ ಹೆಚ್ಚು ಇಷ್ಟಪಡುವ ಮನಸ್ಥಿತಿ ಬೆಳೆಸಿಕೊಂಡಿದ್ದೇವೆ. ಆದರೆ, ಸಮಾಜದಲ್ಲಿ ಶಾಂತಿ ನೆಲೆಸಬೇಕಾದರೆ ಅಹಿಂಸೆ ಮತ್ತು ಸಮಾನತೆ ಅತ್ಯಗತ್ಯ. “ಮಹಾವೀರರು, ಬುದ್ಧ, ಬಸವಣ್ಣ, ಗಾಂಧೀಜಿ ಹಾಗೂ ಅಂಬೇಡ್ಕರ್ ಅವರಂತಹ ಮಹಾನ್ ಪುರುಷರು ಭಾರತದ ಇತಿಹಾಸವನ್ನು ಇಂತಹ ಉದಾತ್ತ ತತ್ವಗಳ ಮೂಲಕವೇ ರೂಪಿಸಿದ್ದಾರೆ ಎಂದರು.
ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಬೌದ್ಧ, ಜೈನ, ಹಿಂದೂ, ಸಿಖ್ ಹೀಗೆ ಎಲ್ಲಾ ಧರ್ಮಗಳ ಸಾರವೂ ಮನುಕುಲದ ಒಳಿತನ್ನೇ ಬಯಸುತ್ತವೆ. ಈ ಎಲ್ಲಾ ಧರ್ಮಗಳ ಉತ್ತಮ ಅಂಶಗಳನ್ನು ಅಳವಡಿಸಿಕೊಂಡು ಅನ್ಯೋನ್ಯವಾಗಿ ಬಾಳುವುದೇ ನಾವು ಆ ಮಹಾನ್ ಪುರುಷರಿಗೆ ನೀಡುವ ನಿಜವಾದ ಗೌರವ ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ರವಿಚಂದ್ರ, ಸಹಾಯಕ ಯೋಜನಾಧಿಕಾರಿ ವೆಂಕಟಾಚಲಪತಿ, ಮುಖ್ಯ ಲೆಕ್ಕಾಧಿಕಾರಿ ರಘುನಾಥ ರೆಡ್ಡಿ, ಯೋಜನಾ ನಿರ್ದೇಶಕ ಮಂಜುನಾಥ ಸ್ವಾಮಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್