
ನವದೆಹಲಿ, 30 ಮಾರ್ಚ್ (ಹಿ.ಸ.):
ಆ್ಯಂಕರ್:
ಬಿಜೆಪಿ ನಿಯೋಗವು ಸೋಮವಾರ ದೆಹಲಿಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ಟಿಎಂಸಿ ವಿರುದ್ಧ ಗಂಭೀರ ಆರೋಪಗಳೊಂದಿಗೆ ದೂರು ಸಲ್ಲಿಸಿದೆ.
ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಟಿಎಂಸಿ “ಚುನಾವಣೆ ಪ್ರಕ್ರಿಯೆಯನ್ನು ಹೈಜಾಕ್ ಮಾಡುತ್ತಿದೆ” ಎಂದು ಬಿಜೆಪಿ ತನ್ನ ಆರು ಪುಟಗಳ ದೂರಿನಲ್ಲಿ ಉಲ್ಲೇಖಿಸಿದೆ. ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನೆಮನೆಗೆ ತೆರಳಿ ಮತದಾರರನ್ನು ಬೆದರಿಸುತ್ತಿದ್ದಾರೆ ಹಾಗೂ ಬಿಜೆಪಿಗೆ ಮತ ಹಾಕಿದರೆ ಪರಿಣಾಮಗಳು ಗಂಭೀರವಾಗಿರುತ್ತವೆ ಎಂದು ಎಚ್ಚರಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಚುನಾವಣಾ ಆಯೋಗವನ್ನು ಭೇಟಿ ಮಾಡಿದ ಬಿಜೆಪಿ ನಿಯೋಗದಲ್ಲಿ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಕಿರಣ್ ರಿಜಿಜು,, ರಾಜ್ಯ ಘಟಕದ ಅಧ್ಯಕ್ಷ ಸುಕಾಂತ ಮಜುಂದಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಸಭೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಿಜಿಜು, “ರಾಜ್ಯದ ಆಡಳಿತ ಯಂತ್ರ ಸಂಪೂರ್ಣವಾಗಿ ಟಿಎಂಸಿಯ ಪ್ರಭಾವದಲ್ಲಿದೆ. ಪ್ರಜಾಪ್ರಭುತ್ವದ ಪ್ರಕ್ರಿಯೆಯ ಮೇಲೆ ಅವರ ನಿಯಂತ್ರಣ ಹೆಚ್ಚಾಗಿದೆ” ಎಂದು ಆರೋಪಿಸಿದರು.
ಬಿಜೆಪಿ, ಪಶ್ಚಿಮ ಬಂಗಾಳದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ಖಚಿತಪಡಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಆಯೋಗವನ್ನು ಒತ್ತಾಯಿಸಿದೆ. “ಬಲವಂತದ ಮೂಲಕ ಚುನಾವಣೆಯನ್ನು ಗೆಲ್ಲುವ ಹಳೆಯ ಪ್ರವೃತ್ತಿ ಈ ಬಾರಿ ಮರುಕಳಿಸಬಾರದು” ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ಚುನಾವಣಾ ಆಯೋಗವು ದೂರನ್ನು ಗಂಭೀರವಾಗಿ ಪರಿಗಣಿಸಿ, ರಾಜ್ಯದಲ್ಲಿ ಸ್ವತಂತ್ರ ಮತ್ತು ನ್ಯಾಯಯುತ ಚುನಾವಣೆ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದೆ ಎಂದು ತಿಳಿದುಬಂದಿದೆ.
ಬಿಜೆಪಿ ಹೇಳಿಕೆಯ ಪ್ರಕಾರ, ರಾಜ್ಯದ ಜನರು ಈ ಬಾರಿ ಟಿಎಂಸಿಯನ್ನು ಬಹಿರಂಗವಾಗಿ ವಿರೋಧಿಸುತ್ತಿದ್ದು, ಚುನಾವಣಾ ಫಲಿತಾಂಶದಲ್ಲಿ ಅದರ ಪ್ರತಿಫಲ ಕಾಣಿಸಿಕೊಳ್ಳಲಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa