ಜನಪರ ಆಡಳಿತಕ್ಕೆ ಮತದಾರರ ಬೆಂಬಲ: ಅಶೋಕ ಮಂದಾಲಿ
ಗದಗ, 29 ಮಾರ್ಚ್ (ಹಿ.ಸ.) ಆ್ಯಂಕರ್:- ರಾಜ್ಯದ ಇತಿಹಾಸದಲ್ಲಿ ನಡೆದಿರುವ ವಿಧಾನಸಭಾ ಕ್ಷೇತ್ರಗಳ ಹಲವಾರು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಜನಪರ ಆಡಳಿತಕ್ಕೆ ಮತದಾರರು ಬೆಂಬಲ ಸೂಚಿಸುತ್ತಲೇ ಬಂದಿದ್ದು, ಕಾಂಗ್ರೆಸ್ ಮೇಲುಗೈ ಸಾಧಿಸುತ್ತಲೇ ಬಂದಿದೆ. ಪ್ರಸ್ತುತ ನಡೆಯುವ ಉಪಚುನಾವಣೆಯಲ್ಲಿಯೂ ಕಾಂಗ್ರೆ
ಫೋಟೋ


ಗದಗ, 29 ಮಾರ್ಚ್ (ಹಿ.ಸ.)

ಆ್ಯಂಕರ್:- ರಾಜ್ಯದ ಇತಿಹಾಸದಲ್ಲಿ ನಡೆದಿರುವ ವಿಧಾನಸಭಾ ಕ್ಷೇತ್ರಗಳ ಹಲವಾರು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಜನಪರ ಆಡಳಿತಕ್ಕೆ ಮತದಾರರು ಬೆಂಬಲ ಸೂಚಿಸುತ್ತಲೇ ಬಂದಿದ್ದು, ಕಾಂಗ್ರೆಸ್ ಮೇಲುಗೈ ಸಾಧಿಸುತ್ತಲೇ ಬಂದಿದೆ. ಪ್ರಸ್ತುತ ನಡೆಯುವ ಉಪಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಲಿದೆ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಅಶೋಕ ಮಂದಾಲಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, 2026ರ ಉಪ ಚುನಾವಣೆಯಲ್ಲಿ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಏಪ್ರಿಲ್ 9ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಸಮರ್ಥ್ ಶಾಮನೂರು ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಉಮೇಶ ಮೇಟಿ ಅವರನ್ನು ಅಭ್ಯರ್ಥಿಗಳನ್ನಾಗಿ ಕಾಂಗ್ರೆಸ್ ಘೋಷಣೆ ಮಾಡಿದ್ದು, 2024ರ ನಡೆದ ಉಪಚುನಾವಣೆ ರೀತಿಯಲ್ಲಿ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ.

1989ರಲ್ಲಿ ಮೊದಲ ಬಾರಿಗೆ ಯಾವ ಪಕ್ಷವು ಪಡೆಯದಂತಹ 178 ಸ್ಥಾನಗಳ ಗೆಲುವಿನ ಮೂಲಕ ದಾಖಲೆ ಬರೆದು ಸಂಪೂರ್ಣ 5 ವರ್ಷ ಕಾಂಗ್ರೆಸ್ ಸರ್ಕಾರ ಅಧಿಕಾರ ನಡಿಸಿತ್ತು. ನಂತರ 1999ರಲ್ಲಿ 132 ಸ್ಥಾನಗಳಿಂದ ಎಸ್.ಎಂ. ಕೃಷ್ಣ ನೇತೃತ್ವದ ಸರ್ಕಾರ ಬೆಂಗಳೂರನ್ನು ವಿಶ್ವದ ಐಟಿ ಹಬ್ ಮಾಡಿ ಕರ್ನಾಟಕದ ಅಭಿವೃದ್ಧಿಗೆ ಬುನಾದಿ ಹಾಕಿದರು.

2013ರಲ್ಲಿ 122 ಸ್ಥಾನಗಳಿಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅನ್ನಭಾಗ್ಯ ಯೋಜನೆಗಳಂತ ಬಡವರಿಗೆ ಸೌಭಾಗ್ಯ ನೀಡಿತ್ತು ಮತ್ತು 2023ರಲ್ಲಿ 135 ಸ್ಥಾನಗಳಿಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿಶ್ವದ ಅತಿ ದೊಡ್ಡ ಆರ್ಥಿಕತೆ ಪುನಶ್ಚತನೆಯ ಗ್ಯಾರಂಟಿ ಯೋಜನೆಗಳನ್ನು ನೀಡಿ ಜನರಿಗೆ ಆರ್ಥಿಕ ಭದ್ರತೆ ನೀಡಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರದ ಅವಧಿಯಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಬಹುಮತ ಸಾಧಿಸಿದ್ದು 2024ರ ಮೇನಲ್ಲಿ ಶೋರಾಪೂರ ವಿಧಾನಸಭೆ ಮತ್ತು ನವೆಂಬರ್ನಲ್ಲಿ ಶಿಗ್ಗಾಂವಿ, ಸಂಡೂರು, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳು ಸೇರಿ ಒಟ್ಟು 4 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.

2013-2018ರ ಸಿದ್ದರಾಮಯ್ಯನವರ ಮೊದಲ ಅವಧಿಯಲ್ಲಿ ನಡೆದ 10ಕ್ಕೂ ಹೆಚ್ಚು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಶೇ. 80ಕ್ಕಿಂತ ಹೆಚ್ಚು ಯಶಸ್ಸು ಗಳಿಸಿದೆ. 2017ರ ಉಪಚುನಾವಣೆಗಳಲ್ಲಿ ಬಿಜೆಪಿ ಪ್ರಬಲವಾಗಿದ್ದರೂ ಕಾಂಗ್ರೆಸ್ ನಂಜನಗೂಡು-21,000 ಮತ್ತು ಗುಂಡ್ಲುಪೇಟೆ- 10,000 ಮತಗಳ ಅಂತರದಿಂದ ಜಯಗಳಿಸಿತ್ತು.

2014ರಿಂದ 2024ರ ವರೆಗೆ ನಡೆದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಶೇ. 65ರಷ್ಟು ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ಉಪ ಚುನಾವಣೆಯ ಶೇ. 80ರಷ್ಟು ಸ್ಥಾನಗಳನ್ನು ಉಳಿಸಿಕೊಂಡಿದ್ದು 2024ರ ಅಂತ್ಯದಲ್ಲಿ ನಡೆದ ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಶೇ. 100ರಷ್ಟು ಯಶಸ್ಸು ಸಾಧಿಸಿ ಕನ್ನಡಿಗರ ಮನ ಗೆದ್ದಿದೆ.

ಕಳೆದ 10 ವರ್ಷಗಳಲ್ಲಿ ನಡೆದ 25 ಪ್ರಮುಖ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಸುಮಾರು 18 ಸ್ಥಾನಗಳನ್ನು (ಶೇ. 72) ಗೆದ್ದಿದೆ. ಕಾಂಗ್ರೆಸ್ ಗೆದ್ದ 18 ಉಪಚುನಾವಣೆಗಳಲ್ಲಿ ಮಹಿಳಾ ಮತದಾನದ ಪ್ರಮಾಣವು ಪುರುಷರಿಗಿಂತ ಸರಾಸರಿ ಶೇ. 2.5ರಿಂದ 4ರಷ್ಟು ಹೆಚ್ಚಾಗಿದೆ. 2024ರ ಚನ್ನಪಟ್ಟಣ ಮತ್ತು ಶಿಗ್ಗಾಂವಿ ಉಪಚುನಾವಣೆಗಳಲ್ಲಿ 'ಗೃಹಲಕ್ಷ್ಮಿ', ಅನ್ನಭಾಗ್ಯ, ಗೃಹಜ್ಯೋತಿ, 'ಶಕ್ತಿ' ಹಾಗೂ ಯುವನಿಧಿಯಂತಹ ಪಂಚ ಗ್ಯಾರಂಟಿ ಯೋಜನೆಗಳ ಫಲವಾಗಿ ಮಹಿಳಾ ಮತದಾರರ ಒಲವು ಕಾಂಗ್ರೆಸ್ ಪರ ಶೇ. 12ರಷ್ಟು ಹೆಚ್ಚಾಗಿದ್ದು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬೂತ್ಗಳಿಗೆ ಬಂದು ಕಾಂಗ್ರೆಸ್ ಪರ ಮತ ಚಲಾಯಿಸಿರುವುದು ಗೆಲುವಿನ ಅಂತರವನ್ನು 15,000 ದಾಟಿಸಲು ಸಹಕಾರಿಯಾಗಿದೆ.

ಸಾಮಾನ್ಯವಾಗಿ ಆಡಳಿತ ಪಕ್ಷವು ಉಪಚುನಾವಣೆಯಲ್ಲಿ ಗೆಲ್ಲುತ್ತದೆ ಎಂಬ ಕಲ್ಪನೆಯನ್ನು ಸುಳ್ಳು ಮಾಡಿ 2021ರಲ್ಲಿ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗಲೂ, ಹಾನಗಲ್ನಲ್ಲಿ ಕಾಂಗ್ರೆಸ್ ತನ್ನ ಮತದಾರರ ಪಾಲನ್ನು ಶೇ. 43ರಿಂದ ಶೇ. 48.5ಕ್ಕೆ ಹೆಚ್ಚಿಸಿಕೊಂಡು ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರು 7,373 ಮತಗಳ ಅಂತರದಿಂದ ಜಯಗಳಿಸಿ ಆಡಳಿತ ಪಕ್ಷಕ್ಕೆ ದೊಡ್ಡ ಆಘಾತ ನೀಡಿದ್ದರು.

2026ರ ಉಪಚುನಾವಣೆಯ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭೆ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರ ಮತಗಳು ಒಟ್ಟಾಗಿ ಈ ಎರಡೂ ಕ್ಷೇತ್ರಗಳಲ್ಲಿ ಸುಮಾರು ಶೇ. 65ಕ್ಕಿಂತ ಹೆಚ್ಚಿದ್ದು, ಇದು ಕಾಂಗ್ರೆಸ್ನ ಭದ್ರಕೋಟೆಯಾಗಿದೆ.

ಕಳೆದ 30 ವರ್ಷಗಳಲ್ಲಿ ಕಾಂಗ್ರೆಸ್ ಕನಿಷ್ಠ 3 ಬಾರಿ 120ಕ್ಕೂ ಹೆಚ್ಚು ಸ್ಥಾನಗಳು ಗೆದ್ದು ಸ್ಪಷ್ಟ ಬಹುಮತ (1999, 2013, 2023) ಪಡೆದಿದ್ದು ಕನ್ನಡಿಗರ ಮನ ಗೆದ್ದಿದು ಕಾಂಗ್ರೆಸ್ ಪಕ್ಷ ಮಾತ್ರ. ಆದರೆ ಬಿಜೆಪಿ ಅತೀ ಹೆಚ್ಚು ಸ್ಥಾನ ಗೆದ್ದಾಗಲೂ (2008ರಲ್ಲಿ 110 ಮತ್ತು 2018ರಲ್ಲಿ 104) ಬಹುಮತ ಸಾಧಿಸಲು 113 ಸ್ಥಾನ ದಾಟಲು ಸಾಧ್ಯವಾಗಿಲ್ಲ.

ಕಾಂಗ್ರೆಸ್ ಸರ್ಕಾರಗಳು ಬಹುಮತದೊಂದಿಗೆ ಅಧಿಕಾರಕ್ಕೆ ಬಂದಾಗ ಪೂರ್ಣಾವಧಿ ಪೂರೈಸುವಲ್ಲಿ ಯಶಸ್ವಿಯಾಗಿದೆ (1999 ರಿಂದ 2004 - ಎಸ್.ಎಂ. ಕೃಷ್ಣ, 2013ರಿಂದ 2018 - ಸಿದ್ದರಾಮಯ್ಯ). ಆದರೆ ಬಿಜೆಪಿ ಆಡಳಿತದಲ್ಲಿ ಭ್ರಷ್ಟಚಾರದಿಂದ ಸಾಲು ಸಾಲು ಮುಖ್ಯಮಂತ್ರಿಗಳ ಬದಲಾವಣೆ ಮಾಡಿರುವುದು ಗಮನಾರ್ಹ ವಿಷಯವಾಗಿದೆ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ:

2008ರ ಕ್ಷೇತ್ರ ಮರುವಿಂಗಡಣೆಯ ನಂತರ ಮೂಲ ದಾವಣಗೆರೆ ವಿಧಾನಸಭಾ ಕ್ಷೇತ್ರವನ್ನು ವಿಭಜಿಸಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವನ್ನು ರಚಿಸಲಾಯಿತು. ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಿಂದ ದಾವಣಗೆರೆಯನ್ನು ಪ್ರತ್ಯೇಕಿಸಿ ಹೊಸ ಜಿಲ್ಲೆಯನ್ನಾಗಿ ಮಾಡಲಾಗಿತ್ತು. ಮತ್ತು ಇದು ದಾವಣಗೆರೆ ಲೋಕಸಭಾ ಕ್ಷೇತ್ರದ ಭಾಗವಾಗಿದೆ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಸರಿಸುಮಾರು 2.10ರಿಂದ 2.15 ಲಕ್ಷ ಮತದಾರರಿದ್ದು 1.08 ಲಕ್ಷ ಪುರುಷರು, 1.02 ಲಕ್ಷ ಮಹಿಳೆಯರು ಮತ್ತು ಅಲ್ಪ ಪ್ರಮಾಣದಲ್ಲಿ ಇತರ ವರ್ಗದ ಮತದಾರರಿದ್ದಾರೆ.

2023ರ ಚುನಾವಣೆಯಲ್ಲಿ ಕಾಂಗ್ರೆಸ್ ಸುಮಾರು 27,888 ಮತಗಳ ಭರ್ಜರಿ ಅಂತರದಿಂದ ಜಯಗಳಿಸಿತ್ತು. ಚುನಾವಣೆಯಲ್ಲಿ ಸುಮಾರು ಶೇ. 69ರಷ್ಟು ಮತದಾನವಾಗಿದ್ದು ಕಾಂಗ್ರೆಸ್ ಅಭ್ಯರ್ಥಿಯು ಶೇ. 58ರಷ್ಟು ಮತಗಳನ್ನು ಪಡೆಯುವ ಮೂಲಕ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದರು.

2018ರ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷವು ಸುಮಾರು 15,884 ಮತಗಳ ಅಂತರದಿಂದ ಜಯಗಳಿಸಿತ್ತು. ಕಾಂಗ್ರೆಸ್ ಒಟ್ಟು ಶೇ. 52ರಷ್ಟು ಮತಗಳನ್ನು ಪಡೆದರೆ, ಬಿಜೆಪಿ ಪ್ರಬಲ ಪೈಪೋಟಿ ನೀಡಿತ್ತು.

2013ರ ಚುನಾವಣೆಯಲ್ಲಿ ಶ್ರೀ ಶಾಮನೂರು ಶಿವಶಂಕರಪ್ಪನವರು ತಮ್ಮ ವೃತ್ತಿಜೀವನದ ಅತಿದೊಡ್ಡ ಜಯವನ್ನು ದಾಖಲಿಸಿದ್ದರು. ಅವರು ಸುಮಾರು 40,158 ಮತಗಳ ಬೃಹತ್ ಅಂತರದಿಂದ ಜಯಗಳಿಸಿದ್ದರು.

ಬಾಗಲಕೋಟೆ ದಕ್ಷಿಣ ವಿಧಾನಸಭಾ ಕ್ಷೇತ್ರ:

ಬಾಗಲಕೋಟೆಯು ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿರುವ ಒಂದು ಸಾಮಾನ್ಯ ವಿಧಾನಸಭಾ ಕ್ಷೇತ್ರವಾಗಿದ್ದು, ಇದು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಭಾಗವಾಗಿದೆ. ಬಾಗಲಕೋಟೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ ಸರಿಸುಮಾರು 2.25ರಿಂದ 2.30 ಲಕ್ಷ ಇದ್ದು, ಸುಮಾರು 1.15 ಲಕ್ಷ ಪುರುಷರು ಮತ್ತು 1.10 ಲಕ್ಷ ಮಹಿಳೆಯರಿದ್ದಾರೆ.

2023ರ ಚುನಾವಣೆಯಲ್ಲಿ ಕಾಂಗ್ರೆಸ್ ಸುಮಾರು 15,000-18,000 ಮತಗಳ ಸ್ಪಷ್ಟ ಅಂತರದಿಂದ ಜಯಗಳಿಸಿತ್ತು. ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ಮತಗಳ ಕ್ರೋಢೀಕರಣದಿಂದಾಗಿ ಸುಮಾರು ಶೇ. 50-52ರಷ್ಟು ಮತಗಳನ್ನು ಪಡೆದು ಬಿಜೆಪಿಯನ್ನು ಸೋಲಿಸಿತ್ತು.

ಒಟ್ಟಿನಲ್ಲಿ ರಾಜ್ಯದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸುತ್ತ ಬಂದಿದ್ದು, ಪ್ರಸ್ತುತ ನಡೆಯುತ್ತಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳಾದ ಸಮರ್ಥ ಶಾಮನೂರ ಹಾಗೂ ಉಮೇಶ ಮೇಟಿ ಅವರು ಗೆಲ್ಲುವ ಮೂಲಕ ಕಾಂಗ್ರೆಸ್ ಮತ್ತೆ ಮೇಲುಗೈ ಸಾಧಿಸಲಿದೆ ಎಂದಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande