
ಗದಗ, 29 ಮಾರ್ಚ್ (ಹಿ.ಸ.)
ಆ್ಯಂಕರ್:- ಹಿಂಸೆ, ಕ್ರೌರ್ಯ ಮತ್ತು ಯುದ್ಧಗಳಂತಹ ಜಾಗತಿಕ ಅಶಾಂತಿಯ ನಡುವೆ ಮಾನವೀಯ ಮೌಲ್ಯಗಳನ್ನು ಉಳಿಸಿ ಬೆಳೆಸುವಲ್ಲಿ ರಂಗಭೂಮಿ ಮಹತ್ವದ ಪಾತ್ರ ವಹಿಸುತ್ತಿದ್ದು, ಇಂತಹ ಸಂದರ್ಭಗಳಲ್ಲಿ ರಂಗಭೂಮಿ ಇನ್ನಷ್ಟು ಕ್ರಿಯಾಶೀಲವಾಗಬೇಕಾಗಿದೆ ಎಂದು ಹಿರಿಯ ರಂಗಕಲಾವಿದ ಪ್ರೊ. ಮುರಲೀಧರ ಸಂಕನೂರ ಅಭಿಪ್ರಾಯಪಟ್ಟರು.
ಬೆಟಗೇರಿ ನಗರದ ಹೊಸಪೇಟೆ ಚೌಕ್ ಓಣಿಯಲ್ಲಿರುವ ಶ್ರೀಕಾಳಿಕಾದೇವಿ ದೇವಸ್ಥಾನದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಚಿನ್ಮಯ ಸಾಂಸ್ಕೃತಿಕ ಅಕಾಡೆಮಿಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ವಿಶ್ವರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ‘ಸಶಕ್ತ ಸಮಾಜ ಕಟ್ಟುವಲ್ಲಿ ರಂಗಭೂಮಿ ಪಾತ್ರ’ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಇಂದಿನ ಸಮಾಜದಲ್ಲಿ ಜಾತಿ, ಮತ, ಲಿಂಗ ತಾರತಮ್ಯ, ನ್ಯಾಯ ಹಾಗೂ ಸಾಮಾಜಿಕ ಸ್ವಾಸ್ಥ್ಯದಂತಹ ಮಹತ್ವದ ವಿಷಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಶಕ್ತಿಶಾಲಿ ಮಾಧ್ಯಮವೇ ರಂಗಭೂಮಿ ಎಂದು ಅವರು ಹೇಳಿದರು. ಸಂವೇದನಾಶೀಲತೆ ಮತ್ತು ಸುಸಂಸ್ಕೃತ ಮನೋಭಾವ ಬೆಳೆಸುವಲ್ಲಿ ರಂಗಭೂಮಿ ಪ್ರಮುಖ ಸಾಧನವಾಗಿದ್ದು, ಇದಕ್ಕೆ ಸರ್ಕಾರ ಹಾಗೂ ಸಮಾಜದಿಂದ ಹೆಚ್ಚಿನ ಪ್ರೋತ್ಸಾಹ ಅಗತ್ಯವಿದೆ ಎಂದು ಒತ್ತಿಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಡಿ. ಕಡ್ಲಿಕೊಪ್ಪ ಮಾತನಾಡಿ, ನಾಡಿನ ರಂಗಭೂಮಿ ಕ್ಷೇತ್ರಕ್ಕೆ ಗದಗ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಆದರೆ ಇಂದಿನ ಪೀಳಿಗೆಯಲ್ಲಿ ರಂಗಾಸಕ್ತಿ ಕ್ಷೀಣಿಸುತ್ತಿರುವುದು ವಿಷಾದನೀಯ ಸಂಗತಿ ಎಂದು ಹೇಳಿದರು.
ಮಕ್ಕಳಲ್ಲಿ ರಂಗಾಸಕ್ತಿ ಬೆಳೆಸಲು ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಕೈಗೊಂಡಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು. ‘ಚಿನ್ಮಯ ಕಲಾಶ್ರೀ’ ಪ್ರಶಸ್ತಿ ಪ್ರದಾನ ಈ ಸಂದರ್ಭದಲ್ಲಿ ಹಿರಿಯ ರಂಗಕಲಾವಿದ ಬಸವರಾಜ ಶಿ. ಅಡವಳ್ಳಿ ಅವರಿಗೆ ‘ಚಿನ್ಮಯ ಕಲಾಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ತಮ್ಮ ರಂಗಸೇವೆಯನ್ನು ಗುರುತಿಸಿ ನೀಡಿದ ಈ ಗೌರವ ಮತ್ತಷ್ಟು ಸೇವೆ ಮಾಡಲು ಪ್ರೇರಣೆ ನೀಡಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.
ಹಿರಿಯ ದೊಡ್ಡಾಟ ಕಲಾವಿದ ಪ್ರಕಾಶ ಬಡಿಗೇರ ಹಾಗೂ ವರವಿ ಮೌನೇಶ್ವರ ದೇವಸ್ಥಾನ ಮತ್ತು ಮಠದ ವಿಕಾಸ ಟ್ರಸ್ಟ್ನ ನೂತನ ಸದಸ್ಯ ಶ್ರೀಧರ ಎಸ್. ಕೊಣ್ಣೂರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಾಡಿನ ಖ್ಯಾತ ರಂಗಕಲಾವಿದ ವಿಜಯಕುಮಾರ ಜಿತೂರಿ ಹಾಗೂ ತಂಡದವರಿಂದ ಪ್ರಸ್ತುತಗೊಂಡ ರಂಗಗೀತ ಗಾಯನ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಜನಮನ ಸೆಳೆದಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಧರ ಎಸ್. ಕೊಣ್ಣೂರ ವಹಿಸಿದ್ದರು. ಹಿರಿಯ ರಂಗನಿರ್ದೇಶಕ ಫಣೀಂದ್ರಾಚಾರ್ಯ ದ್ಯಾಮೇನಹಳ್ಳಿ ಹಾಗೂ ಸಾಂಸ್ಕೃತಿಕ ಸಂಚಾಲಕ ವಿಶ್ವನಾಥ ಯ. ಕಮ್ಮಾರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಸಾಕ್ಷಿ ವಿನಾಯಕ ಹುಯಿಲಗೋಳ ಪ್ರಾರ್ಥಿಸಿದರು. ವಿಶ್ವನಾಥ ಬೇಂದ್ರೆ ಸ್ವಾಗತಿಸಿದರು. ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಮೌನೇಶ ಸಿ. ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಅಕ್ಕಸಾಲಿ ಕಾರ್ಯಕ್ರಮ ನಿರೂಪಣೆ ನಡೆಸಿದರು. ಸತೀಶ ಹೊರಪೇಟೆ ವಂದಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಅಂದಾನೆಪ್ಪ ವಿಭೂತಿ ಸೇರಿದಂತೆ ಅನೇಕ ರಂಗಕಲಾವಿದರು, ಕಲೆಪ್ರೇಮಿಗಳು ಹಾಗೂ ಗಣ್ಯರು ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP