
ನವದೆಹಲಿ, 27 ಮಾರ್ಚ್ (ಹಿ.ಸ.):
ಆ್ಯಂಕರ್:
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇಂದ್ರ ವಿದ್ಯುತ್ ಎಂಜಿನಿಯರಿಂಗ್ ಸೇವೆ ಮತ್ತು ಭಾರತೀಯ ಆರ್ಥಿಕ ಸೇವೆ ಅಧಿಕಾರಿಗಳಿಗೆ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಕರೆ ನೀಡಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಅಧಿಕಾರಿಗಳು ದೇಶದ ಒಟ್ಟಾರೆ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದು, ಅವರ ನಿರ್ಧಾರಗಳು ಭಾರತವನ್ನು ಬಲಿಷ್ಠ ಮತ್ತು ಸ್ವಾವಲಂಬಿಯನ್ನಾಗಿ ರೂಪಿಸುವಲ್ಲಿ ಮಹತ್ವದ್ದಾಗಿವೆ ಎಂದು ಹೇಳಿದರು. ಸಮರ್ಪಣಾಭಾವ, ಉತ್ಸಾಹ ಮತ್ತು ನಾವೀನ್ಯತೆಯೊಂದಿಗೆ ಕೆಲಸ ಮಾಡುವಂತೆ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ವಿದ್ಯುತ್ ಕ್ಷೇತ್ರವು ಕೈಗಾರಿಕಾ ಬೆಳವಣಿಗೆ, ನಾವೀನ್ಯತೆ ಮತ್ತು ಉತ್ತಮ ಜೀವನಮಟ್ಟಕ್ಕೆ ಆಧಾರವಾಗಿದ್ದು, ಉತ್ಪಾದನೆ, ಪ್ರಸರಣ ಮತ್ತು ವಿತರಣಾ ಕ್ಷೇತ್ರಗಳಲ್ಲಿ ಸಿಪಿಈಎಸ್ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಅವರು ಹೇಳಿದರು. ದೇಶದ ಇಂಧನ ಮೂಲಸೌಕರ್ಯವನ್ನು ಬಲಪಡಿಸುವಲ್ಲಿ ಈ ಸೇವೆಯ ಪಾತ್ರ ನಿರ್ಣಾಯಕವಾಗಿದೆ ಎಂದು ಹೇಳಿದರು.
ಇದೇ ವೇಳೆ, ಬದಲಾಗುತ್ತಿರುವ ಜಾಗತಿಕ ಹಾಗೂ ದೇಶೀಯ ಪರಿಸ್ಥಿತಿಯಲ್ಲಿ ಆರ್ಥಿಕ ನೀತಿ ರೂಪಣೆ ಮತ್ತು ಅದರ ಪರಿಣಾಮಕಾರಿ ಅನುಷ್ಠಾನ ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದರು. ಹಣದುಬ್ಬರ ನಿಯಂತ್ರಣ, ಉದ್ಯೋಗ ಸೃಷ್ಟಿ, ಅಸಮಾನತೆ ಕಡಿತ ಮತ್ತು ಸುಸ್ಥಿರ ಬೆಳವಣಿಗೆ ಸಾಧನೆಯಲ್ಲಿ ಐಇಎಸ್ ಅಧಿಕಾರಿಗಳ ಪಾತ್ರ ಮಹತ್ತರವಾಗಿದೆ ಎಂದು ಅವರು ವಿವರಿಸಿದರು.
ಪ್ರತಿಯೊಂದು ಅಂಕಿಅಂಶದ ಹಿಂದೆ ಮಾನವ ಕಥೆ ಅಡಗಿದೆ ಎಂಬುದನ್ನು ಮರೆಯಬಾರದು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದ ರಾಷ್ಟ್ರಪತಿಗಳು, ಆರ್ಥಿಕ ನೀತಿಯ ಯಶಸ್ಸು ಸಂಖ್ಯೆಗಳಲ್ಲ, ಜನರ ಜೀವನದಲ್ಲಿ ಆಗುವ ನಿಜವಾದ ಬದಲಾವಣೆಯಲ್ಲಿ ಅಳೆಯಬೇಕು ಎಂದು ಹೇಳಿದರು
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa