
ಹುಬ್ಬಳ್ಳಿ, 26 ಮಾರ್ಚ್ (ಹಿ.ಸ.):
ಆ್ಯಂಕರ್:
ಉತ್ಕೃಷ್ಟ ಮಟ್ಟದ ದೇಶಿ ಹಸುವಿನ ಹಾಲು ಜನರಿಗೆ ಲಭ್ಯವಾಗುವುದು ನಮ್ಮೆಲ್ಲರ ಭಾಗ್ಯ. ಹಾಲಿನೊಂದಿಗೆ ಗೋ ಉತ್ಪನ್ನಗಳ ಬಳಕೆ ಹೆಚ್ಚಾದರೆ ದೇಶಿ ಹಸುಗಳ ಸಂರಕ್ಷಣೆ ಸುಲಭವಾಗುತ್ತದೆ ಎಂದು ಡಾ.ಸಿ.ಎಚ್.ವಿ.ಎಸ್.ವಿ ಪ್ರಸಾದ್ ಹೇಳಿದರು.
ಹುಬ್ಬಳ್ಳಿ ಮಧುರಾ ಕಾಲೋನಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮನೆ ಮನೆಗೆ ದೇಶಿ ಹಸುವಿನ ಹಾಲು, ಗೋ-ಸೇವಾ ವಿಶಿಷ್ಟ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಿಂದೆ ರಾಜ ಮಹಾರಾಜರ ಕಾಲದಲ್ಲಿ ಯಾರ ಬಳಿ ಎಷ್ಟು ಗೋವುಗಳಿವೆ ಎಂಬುವುದರ ಮೇಲೆ ಆ ರಾಜನ ಹಿರಿಮೆ-ಗರಿಮೆ, ಸಂಪತ್ತನ್ನು ಅಳೆಯಲಾಗುತ್ತಿತ್ತು. ಪುರಾಣ ಕಾಲದಲ್ಲಿ ಋಷಿ-ಮುನಿಗಳೂ ಕೂಡ ಗೋವಿನ ಹಾಲನ್ನೇ ಸೇವಿಸಿ ಆರೋಗ್ಯಪೂರ್ಣರಾಗಿ ನೂರಾರುಕಾಲ ಬದುಕಿ ಜಗದೋದ್ಧಾರ ಕಾರ್ಯಮಾಡಿದ್ದಾರೆ.
ಹಿಂದೂ ಸಂಪ್ರದಾಯದಲ್ಲಿ ಗೋವಿನ ಪ್ರತಿ ಅಂಗದಲ್ಲಿಯೂ ಒಂದೊಂದು ದೇವರಿದ್ದು, ಮುಕ್ಕೋಟಿ ದೇವರುಗಳೂ ಗೋಮಾತೆಯಯಲ್ಲಿ ಅಡಕವಾಗಿದ್ದಾರೆ ಎಂಬ ನಂಬಿಕೆಯಿದೆ. ಇಂಥ ಶುದ್ಧ ದೇಶೀಯ ಗೋವಿನ ಹಾಲು ಅಮೃತಕ್ಕೆ ಸಮಾನ ವಾದದ್ದು, ಈ ಹಾಲಿನ ಸೇವನೆಯಿಂದ ಸ್ವಸ್ಥ ಆರೋಗ್ಯ ಪಡೆಯ ಬಹುದು. ಆದ್ದರಿಂದ ಎಲ್ಲರೂ ದೇಶೀಯ ಹಸುವಿನ ಹಾಲನ್ನು ಸೇವಿಸುವ ಮೂಲಕ ಸದೃಢ , ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡೋಣ ಎಂದರಲ್ಲದೇ ಈ ಯೋಜನೆ ಯಾವುದೇ ರೀತಿಯ ವ್ಯಾಪಾರದ ಉದ್ದೇಶ ಹೊಂದಿಲ್ಲ ಬದಲಾಗಿ ಸಂಪೂರ್ಣವಾಗಿ ದೇಶೀಯ ಗೋ ಸಂರಕ್ಷಣೆಯ ದೃಷ್ಟಿಯಿಂದಲೇ ಇದನ್ನು ರೂಪಿಸಲಾಗಿದೆ ಎಂದು ಡಾ.ಪ್ರಸಾದ ಸ್ಪಷ್ಟಪಡಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಅಭಿನವ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಹಾಲಿನ ಉತ್ಪಾದನೆ ಹೆಚ್ಚಿಸಲು ಇನ್ನಷ್ಟು ಹಸುಗಳನ್ನು ಸಾಕುವ ಮೂಲಕ ಬೇಡಿಕೆಯನ್ನು ಪೂರೈಸಲು ಪ್ರಯತ್ನಿಸಲಾಗುವುದು ಎಂದರು.
ಗೋ ಸೇವಾ ಗತಿವಿಧಿಯ ಉತ್ತರ ಕರ್ನಾಟಕ ಪ್ರಾಂತ ಸಂಯೋಜಕ ದತ್ತಾತ್ರೇಯ ಭಟ್ಟ ಅವರು ಯೋಜನೆಯ ಕುರಿತು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ದುದಾರಾಮಜಿ ಚೌಧರಿ, ಬಾಬರಾವ್ ಘಂಟಸಾಲ, ಹರಿಭಾಯಿ ಸುತಾರ್ ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ತೇಜಸ್ ಗೋಕಾಕ ಅವರು ಯೋಜನೆಗೆ ಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಗೋ ಸೇವಾ ಗತಿವಿಧಿಯ ಖಜಾಂಚಿ ಭರತ ಜೈನ್ ಕಾರ್ಯಕ್ರಮ ನಿರೂಪಿಸಿದರು. ಧಾರವಾಡ ವಿಭಾಗ ಸಂಯೋಜಕ ರಾಮ ಪಾರೀಕ ವಂದಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa