
ಕೋಲಾರ,೨೬ ಮಾರ್ಚ್ (ಹಿ.ಸ):
ಆ್ಯಂಕರ್ : ಎಸ್ಸೆಸ್ಸೆಲ್ಸಿ ಮುಗಿದ ನಂತರ ನಿಮ್ಮ ಶೈಕ್ಷಣಿಕ ಭವಿಷ್ಯದ ಜತೆಗೆ ಬದುಕು ಕಟ್ಟಿಕೊಳ್ಳುವ ಕೌಶಲ್ಯಾಧಾರಿತ ಜಿಟಿಟಿಸಿ, ಐಟಿಐ, ಡಿಪ್ಲೋಮೋ, ಅರೆ ವೈದ್ಯಕೀಯ ಕೋರ್ಸುಗಳ ಕಲಿಕೆ ಮೂಲಕ ಬದುಕು ಕಟ್ಟಿಕೊಳ್ಳಲು ಮುಂದಾಗಿ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಂಶುಪಾಲ ಹಾಗೂ ಶಾಲಾ ಶಿಕ್ಷಣ ಇಲಾಖೆ ಅಭಿವೃದ್ದಿ ಉಪನಿರ್ದೇಶಕ ಕೃಷ್ಣಮೂರ್ತಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಗುರುವಾರ ನಗರದ ಟಿ.ಚನ್ನಯ್ಯ ರಂಗಮ0ದಿರದಲ್ಲಿ ಜಿಲ್ಲಾ ವೃತ್ತಿಪರ ಮತ್ತು ವೃತ್ತಿ ಮಾರ್ಗದರ್ಶನ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವೃತ್ತಿಶಿಕ್ಷಣ ವಸ್ತುಪ್ರದರ್ಶನ ಮತ್ತು ಕೆರಿಯರ್ ಮೇಳ-೨೦೨೬ಕ್ಕೆ ಚಾಲನೆ ನೀಡಿ ಮಾತನಾಡಿದರು. ಎಸ್ಸೆಸ್ಸೆಲ್ಸಿ ಮುಗಿದ ನಂತರ ಮುಂದೇನು ಎಂಬ ಪ್ರಶ್ನೆ ಕಾಡುವುದು ಸಹಜ, ವೈದ್ಯಕೀಯ, ಇಂಜಿನಿಯರಿಂಗ್ ಕೋರ್ಸ್ಗಳಿಗೆ ಮಾತ್ರ ಪ್ರಾಧಾನ್ಯತೆಯಲ್ಲ ಮತ್ತು ಅದು ಕಲಿಕಾ ಸಾಧನೆಯಲ್ಲಿನ ಎಲ್ಲಾ ಹಂತದ ವಿದ್ಯಾರ್ಥಿಗಳಿಗೂ ಎಟುಕುವುದು ಇಲ್ಲ ಎಂಬುದು ಸತ್ಯವಾಗಿದ್ದು, ವಿದ್ಯಾರ್ಥಿಗಳು ಕೌಶಲ್ಯಾಭಿವೃದ್ದಿ ಶಿಕ್ಷಣದ ಜತೆಗೆ ಬದುಕು ಕಟ್ಟಿಕೊಳ್ಳುವ ಕಡೆ ಆಲೋಚಿಸುವುದು ಸೂಕ್ತ ಎಂದರು.
ಈ ಬಾರಿ ಎಸ್ಸೆಸ್ಸೆಲ್ಸಿ ಶೇ.೯೫ಕ್ಕೂ ಹೆಚ್ಚಿನ ಫಲಿತಾಂಶದ ನಿರೀಕ್ಷೆ ಇದೆ ಎಂದ ಅವರು,ಎಸ್ಸೆಸ್ಸೆಲ್ಸಿ ನಂತರ ಮುಂದೇನು ಎಂಬುದರ ಕುರಿತು ಇರುವ ಗೊಂದಲ ನಿವಾರಣೆಗೆ ಇಂತಹ ವಸ್ತುಪ್ರದರ್ಶನಗಳು ಮತ್ತು ಕೆರಿಯರ್ ಮೇಳಗಳು ಸಹಕಾರಿಯಾಗಿವೆ. ವಿದ್ಯಾರ್ಥಿಗಳು ವೃತ್ತಿ ಕೌಶಲ್ಯದ ಜತೆಗೆ ಇಂಗ್ಲೀಷ್ ಸಂವಹನ ಕೌಶಲ್ಯ ಪಡೆದರೆ ಅತಿ ಶೀಘ್ರ ನಿಮ್ಮ ಬದುಕಿಗೆ ದಾರಿ ಸಿಗಲಿದೆ, ನೀವು ಆರ್ಥಿಕವಾಗಿ ಸಬಲಗೊಳ್ಳಬಹುದು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆ. ಶ್ರೀನಿವಾಸ್ ಮಾತನಾಡಿ, ರಾಜ್ಯ ಸರ್ಕಾರ ಜಿಲ್ಲೆಯ ಹಲವು ಐಟಿಐಗಳಲ್ಲಿ `ಟಾಟಾ ಉದ್ಯೋಗ್' ಯೋಜನೆ ಜಾರಿಗೆ ತಂದಿದ್ದು, ಇದರಡಿ ಪ್ರಸ್ತುತ ಉದ್ಯೋಗಕ್ಕೆ ಅಗತ್ಯವಿರುವ ಕೌಶಲ್ಯಗಳನ್ನು ಪಡೆಯಲು ಅಗತ್ಯವಾದ ಕೋರ್ಸುಗಳನ್ನು ಆರಂಭಿಸಲಾಗಿದೆ. ಪ್ರತಿ ಜಿಲ್ಲೆಯಲ್ಲೂ ಇರುವ ಜಿಟಿಡಿಸಿ ಆಶ್ರಯದಲ್ಲಿ ೩ ವರ್ಷದ ಡಿಪ್ಲೋಮೋ ಕೋರ್ಸುಗಳನ್ನು ವ್ಯಾಸಂಗ ಮಾಡಿದರೆ ಶೇ.೧೦೦ ರಷ್ಟು ಉದ್ಯೋಗ ಖಾತರಿ ಇದೆ ಎಂದು ತಿಳಿಸಿದರು.
ಎಸ್ಸೆಸ್ಸೆಲ್ಸಿ ನಂತರ ಶೀಘ್ರದಲ್ಲಿಯೇ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಏನು ಮಾಡಬೇಕು ಎಂದು ಯೋಚಿಸುವ ಯುವಕ/ಯುವತಿಯರಿಗೆ ಅತಿ ಕಡಿಮೆ ಅವಧಿಯಲ್ಲಿ ಹಾಗೂ ಕಡಿಮೆ ಖರ್ಚಿನಲ್ಲಿ ತಾಂತ್ರಿಕ ಕೌಶಲ್ಯಗಳನ್ನು ಗಳಿಸಿಕೊಂಡು ಉದ್ಯೋಗಸ್ಧರಾಗಲು ಕೈಗಾರಿಕಾ ತರಬೇತಿ ಸಂಸ್ಧೆಗಳು ಹಾಗೂ ಜಿ.ಟಿ.ಟಿ.ಸಿ ಸಂಸ್ಧೆಗಳಲ್ಲಿ ಭೋದಿಸಲಾಗುತ್ತಿರುವ ಕೋರ್ಸ್ಗಳು ದಾರಿದೀಪವಾಗಿದೆ.
ಕೋಲಾರ,ವೇಮಗಲ್, ನರಸಾಪುರ,ಮಾಲೂರು ಕೈಗಾರಿಕಾ ವಲಯಗಳಲ್ಲಿ ಇಂದು ಅನೇಕ ದೊಡ್ಡ ದೊಡ್ಡ ಉದ್ಯಮಗಳು ತಲೆಯೆತ್ತಿವೆ. ಮುಂದಿನ ದಿನಗಳಲ್ಲಿ ಕೆಜಿಎಫ್,ಮುಳಬಾಗಿಲುಗಳಲ್ಲೂ ಕೈಗಾರಿಕೆಗಳ ಬರುತ್ತಿವೆ, ಅಲ್ಲಿ ಇಂಜಿನಿಯರಿ0ಗ್ ಕೋರ್ಸ್ ಮಾಡಿದವರಿಗಿಂತಲೂ ಡಿಪ್ಲೋಮೋ,ಐಟಿಐ, ಜಿಟಿಡಿಸಿ ಕೋರ್ಸು ಮುಗಿಸಿದ ವಿದ್ಯಾರ್ಥಿಗಳಿಗೆರ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಇಂದು ಸಾವಿರಾರು ಮಂದಿ ತಮ್ಮ ಬದುಕು ರೂಪಿಸಿಕೊಂಡಿದ್ದಾರೆ ಎಂದರು.
ಕೌಶಲ್ಯ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಜಿಲ್ಲೆಯಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ಲಭ್ಯವಿದ್ದು, ಕೈಗಾರಿಕಾ ತರಬೇತಿ ಸಂಸ್ಧೆ ಹಾಗೂ ಜಿ.ಟಿ.ಟಿ.ಸಿ ಸಂಸ್ಧೆಗಳಿಗೆ ದಾಖಲಾಗಲು ಎಸ್ಸೆಸ್ಸೆಲ್ಸಿ ಉತ್ತೀರ್ಣ ಹಾಗೂ ದ್ವಿತೀಯ ಪಿ.ಯು.ಸಿ. ಅನುತ್ತೀರ್ಣರಾದ ಅಭ್ಯರ್ಥಿಗಳು ತಮಗೆ ಹತ್ತಿರವಾದ ಜಿ.ಟಿ.ಟಿ.ಸಿ. ಕೇಂದ್ರ ಹಾಗೂ ಕೈಗಾರಿಕಾ ತರಬೇತಿ ಸಂಸ್ಧೆಗಳನ್ನು ದಾಖಲಾತಿಗಾಗಿ ಸಂಪರ್ಕಿಸಲು ಕಿವಿಮಾತು
ಕೆರಿಯರ್ ಗೈಡೆನ್ಸ್ನ ಡಾ.ಶ್ರೀನಿವಾಸ್ ಉಪನ್ಯಾಸ ನೀಡಿ, ಕೋಲಾರ ಜಿಲ್ಲೆಯಲ್ಲಿ ೦೭ ಸರ್ಕಾರಿ ಐ.ಟಿ.ಐಗಳು, ೦೬ ಅನುದಾನಿತ ಸೇರಿ ೩೭ ಐ.ಟಿ.ಐ ಗಳು ಹಾಗೂ ಜಿಲ್ಲಾ ಕೇಂದ್ರದಲ್ಲಿ ಜಿ.ಟಿ.ಟಿ.ಸಿ ತರಬೇತಿ ಸಂಸ್ಧೆಯಿದ್ದು ಹಲವಾರು ವೃತ್ತಿ ಕೌಶಲ್ಯಗಳನ್ನು ಬೋಧಿಸಲಾಗುತ್ತಿದೆ ಮತ್ತು ತರಬೇತಿ ಮುಗಿದ ನಂತರ ಎಲ್ಲಾ ಅಭ್ಯರ್ಥಿಗಳಿಗೂ ಉದ್ಯೋಗ ಅವಕಾಶ ಲಭ್ಯವಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಬಹುಕೌಶಲ್ಯವನ್ನು ಹೊಂದಿದ್ದರೆ ಮುಂದಿನ ದಿನಗಳಲ್ಲಿ ಉದ್ಯೋಗಾವಕಾಶ ಲಭಿಸುವುದು ಸುಲಭವೆಂದು ತಿಳಿಸಿದ ಅವರು, ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾದ ನಂತರ ತಾವು ಗಳಿಸಿದ ಅಂಕ ಹಾಗೂ ತಮ್ಮ ಆಸಕ್ತಿಗೆ ಅನುಗುಣವಾಗಿ ವಿವಿಧ ಕೋರ್ಸ್ಗಳನ್ನು ಆಯ್ಕೆಮಾಡಿಕೊಳ್ಳಲು ಸೂಚಿಸಿದರು.
ಕೋಲಾರ ಜಿಲ್ಲೆಯ ಕೈಗಾರಿಕಾ ತರಬೇತಿ ಸಂಸ್ಧೆಗಳಲ್ಲಿ ೨ ವರ್ಷ ಅವಧಿಯ ಕೋರ್ಸ್ಗಳಾದ ಎಲೆಕ್ಟಿçಷಿಯನ್, ಎಲೆಕ್ಟಾçನಿಕ್ ಮೆಕಾನಿಕ್, ಫಿಟ್ಟರ್ ಮೆಶಿನಿಷ್ಟ್, ಮೆಕಾನಿಕ್ ಮೋಟಾರ್ ವೆಹಿಕಲ್, ಟರ್ನರ್, ಟೂಲ್ & ಡೈ ಮೆಕಿಂಗ್ ಮುಂತಾದ ಕೋರ್ಸ್ಗಳು ಹಾಗೂ ಎಸ್.ಎಸ್.ಎಲ್.ಸಿ ಅನುತ್ತೀರ್ಣರಾದ ಅಭ್ಯರ್ಥಿಗಳಿಗೂ ಸಹ ೧ ವರ್ಷದ ಕೋರ್ಸ್ಗಳಾದ ವೆಲ್ಡರ್ ಹಾಗೂ ವುಡ್ ವರ್ಕ್ ಟಿಕ್ನಿಷಿಯನ್ ಕೋರ್ಸ್ಗಳ ಲಭ್ಯವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಿಯು ಉಪನಿರ್ದೇಶಕ ರಾಜಶೇಖರ್ ಪಟ್ಟಣ ಶೆಟ್ಟಿ, ಶಿಕ್ಷಣಾಧಿಕಾರಿ ಡಾ.ಎಸ್.ಆರ್.ವೀಣಾ,ಡಿವೈಪಿಸಿಗಳಾದ ರಾಜೇಶ್ವರಿ, ನಹೀದ್ ಫಾತಿಮಾ, ಜಿಲ್ಲಾ ಗ್ರಂಥಾಲಯಾಧಿಕಾರಿ ಗಣೇಶ್, ಐಟಿಐ ಗಳ ಪ್ರಾಂಶುಪಾಲರಾದಗೋಪಾಲ್,ವೆ0ಕಟೇಶ್, ಕಾಲೇಜು ಪ್ರಾಂಶುಪಾಲ ಸುಬ್ರಮಣಿ,ಡಯಟ್ ಉಪ ಪ್ರಾಂಶುಪಾಲ ನಂಜು0ಡಯ್ಯ, ಹಿರಿಯ ಉಪನ್ಯಾಸಕ ನಾಗರಾಜ್, ಬಿಆರ್ಪಿ ರಶ್ಮಿ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್