
ನವದೆಹಲಿ, 25 ಮಾರ್ಚ್ (ಹಿ.ಸ.):
ಆ್ಯಂಕರ್:
ದೇಶಾದ್ಯಂತ ಎಲ್‌ಪಿಜಿ ಪೂರೈಕೆಯ ಕುರಿತು ಚರ್ಚೆಗಳು ನಡೆಯುತ್ತಿರುವ ನಡುವೆಯೇ, ದೆಹಲಿ ಪೋಲಿಸ್ ಅಪರಾಧ ವಿಭಾಗವು ಸಂಗಮ್ ವಿಹಾರ್ ಪ್ರದೇಶದಲ್ಲಿ ಗ್ಯಾಸ್ ಸಿಲಿಂಡರ್‌ಗಳ ಕಪ್ಪು ಮಾರುಕಟ್ಟೆ ಜಾಲವನ್ನು ಬಯಲಿಗೆಳೆದಿದೆ. ದಾಳಿಯಲ್ಲಿ ಒಟ್ಟು 183 ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ.
ಪೊಲೀಸರ ಮಾಹಿತಿಯಂತೆ, ಅಕ್ರಮವಾಗಿ ಸಿಲಿಂಡರ್ ಸಂಗ್ರಹಿಸಿ ಮರುಪೂರಣ ಮಾಡಲಾಗುತ್ತಿದೆ ಎಂಬ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಸಹಾಯಕ ಪೊಲೀಸ್ ಆಯುಕ್ತ ಸತೇಂದ್ರ ಮೋಹನ್ ಮೇಲ್ವಿಚಾರಣೆಯಲ್ಲಿ ಇನ್ಸ್‌ಪೆಕ್ಟರ್ ಮಹಿಪಾಲ್ ಸಿಂಗ್ ನೇತೃತ್ವದ ತಂಡವು ಮೂರು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿತು.
ಈ ವೇಳೆ ಶೇರ್ ಸಿಂಗ್, ಸೂರಜ್ ಪರಿಹಾರ್, ರಘು ರಾಜ್ ಸಿಂಗ್ ಮತ್ತು ಜಿತೇಂದ್ರ ಶರ್ಮಾ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ದಾಳಿಯಲ್ಲಿ 154 ತುಂಬಿದ ಹಾಗೂ 29 ಖಾಲಿ ಸಿಲಿಂಡರ್‌ಗಳು ಸೇರಿದಂತೆ ಒಟ್ಟು 183 ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಕಬ್ಬಿಣದ ಪೈಪ್‌ಗಳು, ಎಲೆಕ್ಟ್ರಾನಿಕ್ ಉಪಕರಣಗಳು ಸೇರಿದಂತೆ ಅನಿಲ ವರ್ಗಾವಣೆ ಸಾಧನಗಳನ್ನು ಕೂಡ ಪೊಲೀಸರು ಜಪ್ತಿ ಮಾಡಿದ್ದಾರೆ.
ತನಿಖೆಯಲ್ಲಿ ಆರೋಪಿಗಳು ಇಂಡಿಯನ್ ಗ್ಯಾಸ್ ಏಜೆನ್ಸಿಯ ನೋಂದಾಯಿತ ವಿತರಕರಾಗಿದ್ದು, ಗ್ರಾಹಕರಿಗೆ ತಲುಪಿಸಬೇಕಾದ ಸಿಲಿಂಡರ್‌ಗಳನ್ನು ಗೋದಾಮುಗಳಲ್ಲಿ ಸಂಗ್ರಹಿಸಿ ಅಕ್ರಮವಾಗಿ ಅನಿಲವನ್ನು ತೆಗೆದು, ಖಾಲಿ ಸಿಲಿಂಡರ್‌ಗಳಿಗೆ ತುಂಬಿಸಿ ಹೆಚ್ಚುವರಿ ಬೆಲೆಗೆ ಮಾರಾಟ ಮಾಡುತ್ತಿದ್ದರೆಂದು ಬಹಿರಂಗವಾಗಿದೆ.
ಪೊಲೀಸರ ಪ್ರಕಾರ, ಈ ರೀತಿ ಅಕ್ರಮವಾಗಿ ಅನಿಲ ವರ್ಗಾವಣೆ ಮಾಡುವ ಪ್ರಕ್ರಿಯೆ ಅತ್ಯಂತ ಅಪಾಯಕಾರಿ ಆಗಿದ್ದು, ಯಾವುದೇ ಕ್ಷಣದಲ್ಲಿ ಭಾರೀ ಅಪಘಾತಕ್ಕೆ ಕಾರಣವಾಗಬಹುದಿತ್ತು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa