
ನವದೆಹಲಿ, 25 ಮಾರ್ಚ್ (ಹಿ.ಸ.):
ಆ್ಯಂಕರ್:
ಪ್ರಸಿದ್ಧ ಅಸ್ಸಾಮಿ ಗಾಯಕ ಜುಬೀನ್ ಗಾರ್ಗ್ ಅವರ ಸಾವಿನ ಕುರಿತು ಮಹತ್ವದ ತೀರ್ಪು ನೀಡಿರುವ ಸಿಂಗಾಪುರದ ಕೊರೋನರ್ ನ್ಯಾಯಾಲಯ, ಅವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಅಂತಿಮವಾಗಿ ಘೋಷಿಸಿದೆ.
ನ್ಯಾಯಾಲಯದ ಪರಿಶೀಲನೆಯ ಪ್ರಕಾರ, ಪ್ರಕರಣದ ಸಮಗ್ರ ತನಿಖೆ ಮತ್ತು ಲಭ್ಯವಿದ್ದ ಪುರಾವೆಗಳು ಸಾವು ಮುಳುಗುವಿಕೆಯಿಂದ ಸಂಭವಿಸಿದೆ ಎಂಬುದನ್ನು ದೃಢಪಡಿಸಿವೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯಾಧಿಕಾರಿಯೂ ಸಾವು ಆಕಸ್ಮಿಕ ಎಂದು ಸ್ಪಷ್ಟಪಡಿಸಿರುವುದಾಗಿ ತಿಳಿದುಬಂದಿದೆ.
ಈ ತೀರ್ಪಿನಿಂದಾಗಿ ಪ್ರಕರಣದ ಸುತ್ತಲೂ ಹರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ಯಾವುದೇ ಪಿತೂರಿ ಅಥವಾ ಅಪರಾಧ ಕೋನ ಇಲ್ಲವೆಂದು ಅಧಿಕಾರಿಗಳು ಹೇಳಿದ್ದಾರೆ.
ಇದಕ್ಕೂ ಮೊದಲು, ಅಸ್ಸಾಂ ಅಪರಾಧ ತನಿಖಾ ವಿಭಾಗ (ಸಿಐಡಿ) ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ, ಡಿಸೆಂಬರ್ 2025ರಲ್ಲಿ ಗುವಾಹಟಿ ನ್ಯಾಯಾಲಯಕ್ಕೆ ವಿವರವಾದ ಆರೋಪಪಟ್ಟಿ ಸಲ್ಲಿಸಿತ್ತು.
ಗಮನಾರ್ಹವಾಗಿ, 2025ರ ಸೆಪ್ಟೆಂಬರ್ 19ರಂದು ಸಿಂಗಾಪುರದಲ್ಲಿ ಸಂಭವಿಸಿದ ಗಾರ್ಗ್ ಅವರ ನಿಗೂಢ ಸಾವಿನ ನಂತರ ತನಿಖೆ ಆರಂಭಗೊಂಡಿತ್ತು. ಈಶಾನ್ಯ ಭಾರತ ಉತ್ಸವದಲ್ಲಿ ಭಾಗವಹಿಸಲು ತೆರಳಿದ್ದ ಸಂದರ್ಭದಲ್ಲಿ ಸಮುದ್ರ ಪ್ರಯಾಣದ ವೇಳೆ ಈ ಘಟನೆ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿತ್ತು.
ಗುವಾಹಟಿಯ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಲ್ಲಿಸಲಾದ ಆರೋಪಪಟ್ಟಿಯಲ್ಲಿ ಉತ್ಸವ ಆಯೋಜಕ ಶ್ಯಾಮಕಾನು ಮಹಾಂತ, ವ್ಯವಸ್ಥಾಪಕ ಸಿದ್ಧಾರ್ಥ್ ಶರ್ಮಾ, ಬ್ಯಾಂಡ್ ಸದಸ್ಯ ಶೇಖರಜ್ಯೋತಿ ಗೋಸ್ವಾಮಿ ಹಾಗೂ ಸಹಗಾಯಕಿ ಅಮೃತಪ್ರಭಾ ಮಹಾಂತ ಸೇರಿದಂತೆ ಕೆಲವರ ವಿರುದ್ಧ ಗಂಭೀರ ಆರೋಪಗಳು ದಾಖಲಾಗಿದ್ದವು. ಅಲ್ಲದೆ, ಗಾರ್ಗ್ ಅವರ ಸಂಬಂಧಿ ಸಂದೀಪನ್ ಗಾರ್ಗ್ ವಿರುದ್ಧ “ಕೊಲೆಗೆ ಸಮಾನವಲ್ಲದ ಅಪರಾಧಿಕ ನರಹತ್ಯೆ” ಆರೋಪವೂ ಹೊರಿಸಲಾಗಿತ್ತು.
ಈಗ ಸಿಂಗಾಪುರ ನ್ಯಾಯಾಲಯದ ಅಂತಿಮ ತೀರ್ಪಿನಿಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳ ಮೇಲೆ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa