ವಿದ್ಯಾರ್ಥಿಗಳಿಗೆ ಸೈಬರ್ ವಂಚನೆ: ಐವರ ಬಂಧನ
ಗದಗ, 24 ಮಾರ್ಚ್ (ಹಿ.ಸ.) ಆ್ಯಂಕರ್: ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಅವುಗಳನ್ನು ಪತ್ತೆಹಚ್ಚುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಆದರೆ, ಗದಗ ಜಿಲ್ಲೆಯಲ್ಲಿ ಸಂಭವಿಸಬಹುದಾಗಿದ್ದ ಭಾರೀ ಸೈಬರ್ ವಂಚನೆ ಪ್ರಕರಣವನ್ನು ಮುಂಚಿತವಾಗಿ ಭೇದಿಸಿ, ಅಮಾಯಕ ವಿದ್ಯಾರ್ಥಿಗ
ಫೋಟೋ


ಗದಗ, 24 ಮಾರ್ಚ್ (ಹಿ.ಸ.)

ಆ್ಯಂಕರ್: ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಅವುಗಳನ್ನು ಪತ್ತೆಹಚ್ಚುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಆದರೆ, ಗದಗ ಜಿಲ್ಲೆಯಲ್ಲಿ ಸಂಭವಿಸಬಹುದಾಗಿದ್ದ ಭಾರೀ ಸೈಬರ್ ವಂಚನೆ ಪ್ರಕರಣವನ್ನು ಮುಂಚಿತವಾಗಿ ಭೇದಿಸಿ, ಅಮಾಯಕ ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ಸೈಬರ್ ಕ್ರೈಮ್ ಪೊಲೀಸರು ಯಶಸ್ವಿಯಾಗಿದ್ದಾರೆ.

ವಿದ್ಯಾರ್ಥಿಗಳಿಗೆ ಹಣ ಹಾಗೂ ಸ್ಕಾಲರ್ಶಿಪ್ ಆಮಿಷ ಒಡ್ಡಿ, ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯಿಸಿ ಸೈಬರ್ ವಂಚನೆ ನಡೆಸುತ್ತಿದ್ದ ದೊಡ್ಡ ಜಾಲವನ್ನು ಗದಗ ಸೈಬರ್ ಕ್ರೈಮ್ ಪೊಲೀಸರು ಭೇದಿಸಿದ್ದು, ಐದು ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರನ್ನು ವಿಜಯನಗರ ಜಿಲ್ಲೆಯ ದಾಸರಹಳ್ಳಿ ತಾಂಡದ 23 ವರ್ಷದ ವಕ್ತೋಡ್ ವಕೀಲ ನಾಯಕ್, 24 ವರ್ಷದ ರಾಜಾ ರೇಖೆನಾಯಕ್, ಜಾರ್ಖಂಡ್ ರಾಜ್ಯದ ಜಮ್ಶೆಡ್ಪುರ ಮೂಲದ 22 ವರ್ಷದ ಜೀಷಾನ್ ಅನ್ಸಾರಿ, ಛತ್ತೀಸ್ಗಢದ ಬಿಲಾಸಪುರದ 22 ವರ್ಷದ ಸಾಹಿಲ್ ಹಾಗೂ 32 ವರ್ಷದ ಆಕಾಶ್ ಎಂದು ಗುರುತಿಸಲಾಗಿದೆ. ಈ ಆರೋಪಿಗಳ ವಿರುದ್ಧ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಒಟ್ಟು 268ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಮೆಟ್ರಿಕ್ ನಂತರ ಹಾಸ್ಟೆಲ್ನಲ್ಲಿ ವಾಸಿಸುತ್ತಿದ್ದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡ ಈ ತಂಡ, ಅವರಿಗೆ ಸ್ಕಾಲರ್ಶಿಪ್ ನೀಡುವ ನೆಪದಲ್ಲಿ ನಂಬಿಕೆ ಗಳಿಸುತ್ತಿತ್ತು. ಬಳಿಕ ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಪಡೆದು, ಬ್ಯಾಂಕ್ ಆಫ್ ಮಹಾರಾಷ್ಟ್ರ ಸೇರಿದಂತೆ ವಿವಿಧ ಬ್ಯಾಂಕ್ಗಳಲ್ಲಿ ಖಾತೆ ತೆರೆಯಿಸುತ್ತಿದ್ದರು. ಖಾತೆ ತೆರೆಯುವ ವೇಳೆ ರೂ.2000 ಠೇವಣಿ ಇಡಿಸುವ ಮೂಲಕ ವಿದ್ಯಾರ್ಥಿಗಳನ್ನು ಸೆಳೆಯುತ್ತಿದ್ದರು.

ಖಾತೆಗಳು ತೆರೆಯುತ್ತಿದ್ದಂತೆಯೇ ಪಾಸ್ಬುಕ್, ಎಟಿಎಂ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್ ವಿವರಗಳು, ಪಾಸ್ವರ್ಡ್ಗಳು ಸೇರಿದಂತೆ ಎಲ್ಲಾ ಮಾಹಿತಿಯನ್ನು ತಮ್ಮ ವಶಕ್ಕೆ ಪಡೆದು, ಅವುಗಳನ್ನು ಸೈಬರ್ ವಂಚನೆಗೆ ಬಳಸುತ್ತಿದ್ದರು. ಗದಗ ಜಿಲ್ಲೆಯಲ್ಲಿ ಮಾತ್ರವೇ ಇವರು ಕನಿಷ್ಠ 9 ಬ್ಯಾಂಕ್ ಖಾತೆಗಳ ಮೂಲಕ ವಂಚನೆ ನಡೆಸಿರುವುದು ಬೆಳಕಿಗೆ ಬಂದಿದೆ.

ಗೋವಾದ ಹೋಟೆಲ್ಗಳಲ್ಲಿ ಕೆಲಸ ಮಾಡುವಾಗ ಪರಸ್ಪರ ಪರಿಚಯಗೊಂಡ ಈ ತಂಡ, ನಂತರ ಒಗ್ಗೂಡಿ ಸೈಬರ್ ವಂಚನೆಗೆ ಇಳಿದಿತ್ತು. ವಿದ್ಯಾರ್ಥಿಗಳ ನಿರ್ಲಕ್ಷ್ಯ ಹಾಗೂ ಅಜ್ಞಾನವನ್ನು ದುರುಪಯೋಗಪಡಿಸಿಕೊಂಡು, ದೇಶಾದ್ಯಂತ 75ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಬಳಸಿ ಭಾರೀ ವಂಚನೆ ನಡೆಸಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.

ಗದಗ ಸೈಬರ್ ಕ್ರೈಮ್ ಠಾಣೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು, ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 11 ಮೊಬೈಲ್ ಫೋನ್ಗಳು, 9 ಬ್ಯಾಂಕ್ ಪಾಸ್ಬುಕ್ಗಳು, ಎಟಿಎಂ ಕಾರ್ಡ್ಗಳು ಹಾಗೂ ಇತರೆ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.

“ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಆಮಿಷ ಒಡ್ಡಿ ಬ್ಯಾಂಕ್ ಖಾತೆ ತೆರೆಯಿಸಿ, ಅದನ್ನು ಸೈಬರ್ ವಂಚನೆಗೆ ಬಳಸುತ್ತಿದ್ದ ಜಾಲವನ್ನು ಭೇದಿಸಿದ್ದೇವೆ. ಈ ಆರೋಪಿಗಳ ವಿರುದ್ಧ ದೇಶಾದ್ಯಂತ 268 ಪ್ರಕರಣಗಳಿವೆ. ಇನ್ನೂ ಹೆಚ್ಚಿನ ಆರೋಪಿಗಳನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ,” ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ತಿಳಿಸಿದ್ದಾರೆ.

ಚಿಕ್ಕ ವಯಸ್ಸಿನ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಈ ರೀತಿ ವಂಚನೆ ನಡೆಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ವಿದ್ಯಾರ್ಥಿಗಳು ಹಾಗೂ ಪಾಲಕರು ಎಚ್ಚರಿಕೆಯಿಂದ ಇರಬೇಕಾಗಿದೆ. ಅನಪೇಕ್ಷಿತ ಆಮಿಷಗಳಿಗೆ ಮರುಳಾಗದೇ, ತಮ್ಮ ಬ್ಯಾಂಕ್ ಖಾತೆಗಳ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂಬುದು ಪೊಲೀಸರ ಸಲಹೆಯಾಗಿದೆ. ಸದ್ಯ ಐದು ಮಂದಿಯನ್ನು ಬಂಧಿಸಿರುವ ಪೊಲೀಸರು, ಈ ಜಾಲದ ಹಿಂದೆ ಇರುವ ಪ್ರಮುಖ ಕಿಂಗ್ಪಿನ್ಗಳನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande