

ಗದಗ, 17 ಮಾರ್ಚ್ (ಹಿ.ಸ.)
ಆ್ಯಂಕರ್:- ಒಂದೇ ಹುಡುಗಿಯ ಮೇಲಿನ ಆಸೆ, ಒಡಹುಟ್ಟಿದ ಸಹೋದರರ ನಡುವಿನ ಸ್ನೇಹವನ್ನೇ ರಕ್ತಸಿಕ್ತ ವೈಮನಸ್ಸಾಗಿ ಮಾರ್ಪಡಿಸಿದ ದಾರುಣ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ತಮ್ಮನಿಗೆ ನಿಶ್ಚಯವಾಗಿದ್ದ ಹುಡುಗಿಯನ್ನು ಪಡೆಯಬೇಕೆಂಬ ಹಂಬಲದಿಂದ ಅಣ್ಣನೇ ತಮ್ಮನನ್ನು ಕೊಲೆ ಮಾಡಿದ ಘಟನೆ ನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದ ಹೊರವಲಯದಲ್ಲಿ ಇಂದು ನಡೆದಿದೆ
ಮೃತರನ್ನು ಫಕ್ಕೀರಪ್ಪ ಎಂದು ಗುರುತಿಸಲಾಗಿದ್ದು, ಆರೋಪಿ ಅಣ್ಣ ಅಶೋಕನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆಯಲ್ಲಿ ಆರಂಭದಲ್ಲಿ ಮೂಡಿದ ಅನುಮಾನಗಳು, ನಂತರ ಪೊಲೀಸರ ಚಾಕಚಕ್ಯದಿಂದ ಬಯಲಾಗಿರುವ ನಿಜಾಂಶಗಳು ಈ ಪ್ರಕರಣಕ್ಕೆ ತೀವ್ರತೆ ತಂದಿವೆ.
ಘಟನೆ ವಿವರ:
ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚಿಕ್ಕಮೂಲಂಗಿ ಗ್ರಾಮದ ನಿವಾಸಿಗಳಾದ ಅಶೋಕ ಮತ್ತು ಫಕ್ಕೀರಪ್ಪ ಇಬ್ಬರೂ ಕುರಿಗಾಯಿಗಳಾಗಿದ್ದು, ದಿನನಿತ್ಯ ಜಮೀನು ಪ್ರದೇಶಗಳಲ್ಲಿ ಕುರಿಗಳನ್ನು ಮೇಯಿಸುವ ಕೆಲಸ ಮಾಡುತ್ತಿದ್ದರು. ಮಕ್ಕಳ ಮದುವೆ ಮಾಡುವ ಉದ್ದೇಶದಿಂದ ಪೋಷಕರು ಮುಂದಾಗಿದ್ದು, ಇಬ್ಬರಿಗೂ ಪ್ರತ್ಯೇಕವಾಗಿ ಹುಡುಗಿಯರನ್ನು ನೋಡಲಾಗಿತ್ತು. ಅಶೋಕನಿಗೆ ಒಂದು ಹುಡುಗಿ ನಿಶ್ಚಯವಾಗಿದ್ದರೂ, ಆಕೆಯ ಮೇಲೆ ಅವನಿಗೆ ಆಸಕ್ತಿ ಇರಲಿಲ್ಲ. ಆದರೆ ತಮ್ಮ ಫಕ್ಕೀರಪ್ಪನಿಗೆ ನಿಶ್ಚಯವಾಗಿದ್ದ ಹುಡುಗಿಯ ಮೇಲೆ ಅಶೋಕನ ಮನಸ್ಸು ನೆಟ್ಟಿತ್ತು. ಇದೇ ವಿಷಯವಾಗಿ ಇಬ್ಬರ ನಡುವೆ ಮನೆಯಲ್ಲಿ ಗಲಾಟೆಯೂ ನಡೆದಿತ್ತು ಎಂದು ಗದಗ ಎಸ್ಪಿ ರೋಹನ್ ಜಗದೀಶ್ ತಿಳಿಸಿದ್ದಾರೆ.
ಕೊಲೆಗಾಗಿ ರೂಪಿಸಿದ ಕುತಂತ್ರ
ತಮ್ಮನನ್ನು ದೂರ ಮಾಡಿಬಿಟ್ಟರೆ, ಆ ಹುಡುಗಿ ತಾನೇ ಮದುವೆಯಾಗಬಹುದು ಎಂಬ ಕ್ರೂರ ಯೋಚನೆ ಅಶೋಕನ ಮನಸ್ಸಿನಲ್ಲಿ ಮೂಡಿತ್ತು. ಈ ಹಿನ್ನೆಲೆ, ಹಿರೇಕೊಪ್ಪ ಗ್ರಾಮದ ಹೊರವಲಯದ ಜಮೀನಿನಲ್ಲಿ ಕುರಿಗಳನ್ನು ಮೇಯಿಸಲು ಹೋದ ವೇಳೆ, ರಾತ್ರಿ ಸಮಯದಲ್ಲಿ ಫಕ್ಕೀರಪ್ಪನ ಮೇಲೆ 25 ಕಿಲೋ ತೂಕದ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ, ಯಾರಿಗೂ ಅನುಮಾನ ಬರದಂತೆ ಕಲ್ಲನ್ನು ಸ್ಥಳದಲ್ಲೇ ಬಿಟ್ಟು, ರಕ್ತದ ಕಲೆಗಳನ್ನು ಅಳಿಸಿ, ಏನು ಗೊತ್ತಿಲ್ಲದ ಹಾಗೇ ವರ್ತಿಸಲು ಯತ್ನಿಸಿದ್ದಾನೆ.
ಪೊಲೀಸರ ತನಿಖೆಯಿಂದ ಬಯಲು
ಕೊಲೆ ಮಾಡಿದ ನಂತರವೇ ಅಶೋಕ ಮುಂಜಾನೆ ಪೊಲೀಸರಿಗೆ ಕರೆ ಮಾಡಿ, “ಯಾರೋ ದುಷ್ಕರ್ಮಿಗಳು ತಮ್ಮನನ್ನು ಕೊಲೆ ಮಾಡಿದ್ದಾರೆ” ಎಂದು ನಾಟಕವಾಡಲು ಯತ್ನಿಸಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ, ಶ್ವಾನ ದಳ ನೇರವಾಗಿ ಅಶೋಕನತ್ತ ಸೂಚನೆ ನೀಡಿದೆ.
ಇದರಿಂದ ಅನುಮಾನಗೊಂಡ ಪೊಲೀಸರು ಅಶೋಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೊನೆಗೂ ಅವನು ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಹುಡುಗಿ ವಿಚಾರವಾಗಿ ಉಂಟಾದ ವೈಮನಸ್ಸೇ ಕೊಲೆಗೆ ಕಾರಣ ಎಂದು ತಿಳಿದುಬಂದಿದೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮಾತನಾಡಿ, “ಆರಂಭದಲ್ಲಿ ಹೊರಗಿನವರ ಕೃತ್ಯ ಎಂದು ಭಾವನೆ ಮೂಡಿದರೂ, ತನಿಖೆಯಲ್ಲಿ ನಿಜಾಂಶ ಬಯಲಾಗಿದೆ. ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.
ಒಂದೇ ಕುಟುಂಬದಲ್ಲಿ ಹುಟ್ಟಿದ ಸಹೋದರರು, ಅಲ್ಪ ಕಾರಣಕ್ಕೆ ಜೀವಹರಣದ ಮಟ್ಟಕ್ಕೆ ಇಳಿದಿರುವುದು ಸಮಾಜಕ್ಕೆ ಆತಂಕಕಾರಿ ಬೆಳವಣಿಗೆಯಾಗಿದೆ. ಕ್ಷಣಿಕ ಆಸೆ ಮತ್ತು ತಪ್ಪು ನಿರ್ಧಾರಗಳು ಜೀವವನ್ನೇ ಹಾಳುಮಾಡುವಂತಿವೆ ಎಂಬುದಕ್ಕೆ ಈ ಘಟನೆ ಸ್ಪಷ್ಟ ಉದಾಹರಣೆಯಾಗಿದೆ. ಹೆಣ್ಣಿಗಾಗಿ ತಮ್ಮನನ್ನೇ ಕೊಲೆ ಮಾಡಿದ ಅಣ್ಣನ ಕ್ರೂರ ಕೃತ್ಯ, ಕುಟುಂಬ ಮೌಲ್ಯಗಳು ಮತ್ತು ಮಾನವೀಯತೆಯ ಮೇಲಿನ ಪ್ರಶ್ನೆಗಳನ್ನು ಎಬ್ಬಿಸಿದೆ. ಕೊನೆಗೆ, ತಾನು ಕಟ್ಟಿದ ನಾಟಕವೇ ತನ್ನನ್ನು ಸೆರೆಮನೆಗೆ ಕೊಂಡೊಯ್ದಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP