

ಗದಗ, 24 ಮಾರ್ಚ್ (ಹಿ.ಸ.)
ಆ್ಯಂಕರ್:- ಹಳೆ ವೈಷಮ್ಯ ಹಾಗೂ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ಎಸ್ಸಿ ಹಾಗೂ ಎಸ್ಟಿ ಸಮುದಾಯಗಳ ನಡುವೆ ಭಾರೀ ಗುಂಪು ಘರ್ಷಣೆ ಸಂಭವಿಸಿದ್ದು, ಘಟನೆಯಲ್ಲಿ 33 ಜನರು ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು 21 ಜನರನ್ನು ವಶಕ್ಕೆ ಪಡೆಯಲಾಗಿದೆ.
ಎಸ್ಸಿ ಸಮುದಾಯದ ಸ್ವಾರಪ್ಪ ಎಂಬ ಯುವಕ ಎಸ್ಟಿ ಸಮುದಾಯದ ಜಮೀನಿನಲ್ಲಿರುವ ಬೋರವೆಲ್ ಬಳಿ ನೀರು ಕುಡಿಯಲು ಹೋಗಿದ್ದ ವೇಳೆ ಮಾತಿನ ಚಕಮಕಿ ಆರಂಭಗೊಂಡಿದೆ ಎನ್ನಲಾಗಿದೆ. ಬಳಿಕ ವಿಷಯ ಗ್ರಾಮದಲ್ಲಿ ಎರಡೂ ಸಮುದಾಯದವರಿಗೆ ತಿಳಿದು, ಗುಂಪು ಗುಂಪಾಗಿ ಸೇರಿ ಕಲ್ಲು ತೂರಾಟ, ದೊಣ್ಣೆ ಹಾಗೂ ಮಾರಕಾಸ್ತ್ರಗಳಿಂದ ಪರಸ್ಪರ ಹಲ್ಲೆ ನಡೆಸಿದ್ದಾರೆ.
ಘರ್ಷಣೆಯಲ್ಲಿ ಎಸ್ಟಿ ಸಮುದಾಯದ 9 ಜನರು ಮುಂಡರಗಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರೆ, ಎಸ್ಸಿ ಸಮುದಾಯದ 24 ಜನರು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಾಳುಗಳನ್ನು ಗದಗ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದು, ಸಂಬಂಧಿತ ಇಲಾಖೆಗೆ ಘಟನೆಯ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಘಟನೆ ನಂತರ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತಿರುವ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಡಿವೈಎಸ್ಪಿ ನೇತೃತ್ವದಲ್ಲಿ ಕಠಿಣ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಗ್ರಾಮದಲ್ಲಿ ಪೊಲೀಸರು ತೀವ್ರ ನಿಗಾವಹಿಸಿದ್ದು, ಅನೇಕ ಯುವಕರು ಬಂಧನ ಭೀತಿಯಿಂದ ಗ್ರಾಮ ತೊರಿದಿದ್ದಾರೆ.
ಮುಂಡರಗಿ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯಿಂದ ದೂರು ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 21 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿದ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಗ್ರಾಮದಲ್ಲಿ ಈ ಹಿಂದೆ ಜಾತ್ರೆ ಸಮಯದಲ್ಲಿಯೂ ಎರಡು ಸಮುದಾಯಗಳ ಯುವಕರ ನಡುವೆ ಗಲಾಟೆ ನಡೆದಿತ್ತು. ಆದರೆ ಆ ಸಂದರ್ಭದಲ್ಲಿ ಯಾವುದೇ ಅಧಿಕೃತ ದೂರು ದಾಖಲಾಗಿರಲಿಲ್ಲ. ಇದೀಗ ಹಳೆ ವೈಷಮ್ಯ ಮತ್ತೆ ಮೆಲುಕು ಹಾಕಿ, ನೀರಿನಂತಹ ಕ್ಷುಲ್ಲಕ ಕಾರಣಕ್ಕೆ ಗಲಾಟೆ ತೀವ್ರಗೊಂಡಿರುವುದು ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ.
ಸಣ್ಣ ವಿಷಯದಿಂದ ಆರಂಭವಾದ ಗಲಾಟೆ ದೊಡ್ಡ ಮಟ್ಟದ ಘರ್ಷಣೆಗೆ ತಿರುಗಿ, ಹಲವು ಮಂದಿ ಗಾಯಗೊಂಡಿರುವುದು ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಸಾಮಾಜಿಕ ಸಂವೇದನೆ ಎಷ್ಟು ಸೂಕ್ಷ್ಮವಾಗಿದೆಯೆಂಬುದನ್ನು ತೋರಿಸುತ್ತದೆ. ಪ್ರಸ್ತುತ ಗ್ರಾಮದಲ್ಲಿ ಪೊಲೀಸ್ ಕಾವಲು ಮುಂದುವರಿದಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP