
ಮುಂಬಯಿ, 24 ಮಾರ್ಚ್ (ಹಿ.ಸ.):
ಆ್ಯಂಕರ್:
ಮಲಯಾಳಂ ಸಿನಿರಂಗದ ಸೂಪರ್‌ಸ್ಟಾರ್ ಮೋಹನ್ ಲಾಲ್ ಅಭಿನಯದ ಬಹುನಿರೀಕ್ಷಿತ ಚಿತ್ರ ದೃಶ್ಯಂ 3’ ಬಿಡುಗಡೆಯ ದಿನಾಂಕವನ್ನು ಬದಲಿಸಲಾಗಿದೆ. ಮೂಲತಃ ಏಪ್ರಿಲ್ 2 ರಂದು ತೆರೆಗೆ ಬರಬೇಕಿದ್ದ ಚಿತ್ರವು ಇದೀಗ ಮೇ 21, 2026 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.
ಈ ಕುರಿತು ಸ್ವತಃ ಮೋಹನ್ ಲಾಲ್ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಪೋಸ್ಟರ್ ಹಂಚಿಕೊಂಡು ಘೋಷಣೆ ಮಾಡಿದ್ದಾರೆ. ವಿಶೇಷವೆಂದರೆ, ಈ ಹೊಸ ದಿನಾಂಕವು ಅವರ ಜನ್ಮದಿನದಂದೇ ಇರಲಿದೆ. “ಭೂತಕಾಲ ಎಂದಿಗೂ ಮೌನವಾಗಿರುವುದಿಲ್ಲ... ಅದು ಕಾಯುತ್ತದೆ. ಜಾರ್ಜ್‌ಕುಟ್ಟಿ ಮೇ 21, 2026ರಂದು ವಿಶ್ವಾದ್ಯಂತ ಬರುತ್ತಾನೆ” ಎಂಬ ಕ್ಯಾಪ್ಷನ್ ಜೊತೆಗೆ ಪೋಸ್ಟ್ ಹಂಚಿಕೊಂಡಿದ್ದಾರೆ.
ಚಿತ್ರದ ಪೋಸ್ಟರ್‌ನಲ್ಲಿ ಮೋಹನ್ ಲಾಲ್ ಅವರು ತಮ್ಮ ಜನಪ್ರಿಯ ಪಾತ್ರ ‘ಜಾರ್ಜ್‌ಕುಟ್ಟಿ’ ಆಗಿ ಶಾಂತ ಮತ್ತು ಗಂಭೀರ ಭಾವದಲ್ಲಿ ಕಾಣಿಸಿಕೊಂಡಿದ್ದಾರೆ. ‘ದೃಶ್ಯಂ’ ಸರಣಿಯ ಹಿಂದಿನ ಭಾಗಗಳು ಭಾರೀ ಯಶಸ್ಸು ಕಂಡಿರುವ ಹಿನ್ನೆಲೆಯಲ್ಲಿ, ಮೂರನೇ ಭಾಗದ ಮೇಲೂ ಅಪಾರ ನಿರೀಕ್ಷೆಗಳು ಮೂಡಿವೆ.
ಬಿಡುಗಡೆ ದಿನಾಂಕ ಬದಲಾವಣೆಯ ನಿಖರ ಕಾರಣವನ್ನು ನಿರ್ಮಾಪಕರು ಬಹಿರಂಗಪಡಿಸಿಲ್ಲ. ಆದರೆ ಟ್ರೇಡ್ ವಿಶ್ಲೇಷಕರು ಗಲ್ಫ್ ರಾಷ್ಟ್ರಗಳಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಕಾರಣವಾಗಿ ಸೂಚಿಸುತ್ತಿದ್ದಾರೆ. ಮಲಯಾಳಂ ಸಿನಿಮಾಗಳಿಗೆ ಗಲ್ಫ್ ದೇಶಗಳು ದೊಡ್ಡ ಮಾರುಕಟ್ಟೆಯಾಗಿರುವುದರಿಂದ, ನಿರ್ಮಾಪಕರು ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಬಯಸಿಲ್ಲವೆಂದು ಹೇಳಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa