
ಕೋಲಾರ, 19 ನವೆಂಬರ್ (ಹಿ.ಸ.)
ಇತಿಹಾಸದ ಪುಟಗಳಲ್ಲಿ ಮರೆಯಾಗಿದ್ದ ಪಶ್ಚಿಮ ಬಂಗಾಳದ ನೈಜ ಘಟನೆಯೊಂದನ್ನು ಆಧರಿಸಿ, ಸಂಪೂರ್ಣವಾಗಿ ಕೋಲಾರ ಜಿಲ್ಲೆಯ ಕಲಾವಿದರು ಮತ್ತು ತಂತ್ರಜ್ಞರೇ ಸೇರಿ ನಿರ್ಮಿಸಿರುವ ದಿ ೧೯೭೯ ಅನ್ಟೋಲ್ಡ್ ಸ್ಟೋರಿ ಚಲನಚಿತ್ರದ ಟ್ರೈಲರ್ ಇಲ್ಲಿನ ಟಿ. ಚನ್ನಯ್ಯ ರಂಗಮ0ದಿರದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಇತಿಹಾಸದ ಕಾಲಗರ್ಭದಲ್ಲಿ ಹುದುಗಿಹೋಗಿರುವ ಕಥೆಯನ್ನು ಸಂಶೋಧಿಸಿ ತೆರೆಗೆ ತಂದಿರುವುದು ಶ್ಲಾಘನೀಯ. ಹೊಸಬರೇ ಸೇರಿ ಮಾಡಿರುವ ಈ ಚಿತ್ರದಲ್ಲಿ ಕಲಾವಿದರು ಪಾತ್ರಗಳೊಳಗೆ ಪರಕಾಯ ಪ್ರವೇಶ ಮಾಡಿದಂತೆ ನಟಿಸಿದ್ದಾರೆ. ಛಾಯಾಗ್ರಹಣ ಮತ್ತು ನಿರೂಪಣೆ ವೃತ್ತಿಪರವಾಗಿ ಮೂಡಿಬಂದಿದ್ದು, ನಿರ್ಮಾಪಕ ಬಿ.ಎಂ. ಶ್ರೀನಿವಾಸ್ ಹಾಗೂ ನಿರ್ದೇಶಕ ಪುಷ್ಪರಾಜ್ ಅವರ ಪ್ರಯತ್ನಕ್ಕೆ ಜಿಲ್ಲೆಯ ಜನತೆ ಬೆಂಬಲ ನೀಡಿ ಚಿತ್ರವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ನಿರ್ದೇಶಕ ಪುಷ್ಪರಾಜ್ ಮಾತನಾಡಿ, ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ನಿರ್ಮಾಪಕ ಬೀರಮಾನಹಳ್ಳಿ ಬಿ.ಎಂ. ಶ್ರೀನಿವಾಸ್ ಈ ಚಿತ್ರ ನಿರ್ಮಾಣಕ್ಕೆ ಮುಂದಾದರು.
ಕೋಲಾರ ಜಿಲ್ಲೆಯಲ್ಲಿಯೇ ಚಿತ್ರೀಕರಣ ನಡೆದಿದ್ದು, ಇಲ್ಲಿ ಚಿತ್ರರಂಗವು ಒಂದು ಸಂಸ್ಥೆಯಾಗಿ ಬೆಳೆಯಲು ವಿಪುಲ ಅವಕಾಶಗಳಿವೆ. ಸ್ಥಳೀಯ ಪ್ರತಿಭೆಗಳಿಗೆ ಮತ್ತಷ್ಟು ಪ್ರೋತ್ಸಾಹ ದೊರೆಯಬೇಕಿದೆ ಎಂದರು.
ಚಿತ್ರದ ನಾಯಕ ನಟ, ಕೋಲಾರದ ಕೀಲಕೋಟೆಯ ರಾಜು ಮಾತನಾಡಿ, ಒಂಬತ್ತು ವರ್ಷಗಳ ಸಿನಿಮಾ ಪಯಣ ಮತ್ತು ಮೂರು ವರ್ಷಗಳ ಕಠಿಣ ಪರಿಶ್ರಮದ ಫಲವಾಗಿ ಈ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಹೊಸಬರ ಮೇಲೆ ನಂಬಿಕೆ ಇಟ್ಟು ಆರ್ಥಿಕ ಬೆಂಬಲ ನೀಡಿದ ನಿರ್ಮಾಪಕ ಬಿ.ಎಂ. ಶ್ರೀನಿವಾಸ್ ನಮ್ಮ ಪಾಲಿನ ಆಪತ್ಬಾಂಧವರು ಎಂದು ಕೃತಜ್ಞತೆ ಸಲ್ಲಿಸಿದರು.
ಚಿತ್ರದ ಪ್ರಚಾರದ ಭಾಗವಾಗಿ ಈಗಾಗಲೇ ಪ್ರವಾಸ ಕೈಗೊಳ್ಳಲಾಗಿದೆ. ಚಿತ್ರದ ಶೀರ್ಷಿಕೆ ಮತ್ತು ಕಥಾವಸ್ತುವಿನ ಬಗ್ಗೆ ಜನರಲ್ಲಿ ಕುತೂಹಲ ಮೂಡಿದ್ದು, ನವೆಂಬರ್ ೨೭ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಮೊದಲ ದಿನವೇ ಚಿತ್ರಮಂದಿರಕ್ಕೆ ಬಂದು ಹೊಸ ಪ್ರತಿಭೆಗಳನ್ನು ಹರಸುವಂತೆ ಚಿತ್ರತಂಡ ಮನವಿ ಮಾಡಿದೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್