
ಬೆಂಗಳೂರು, 09 ನವೆಂಬರ್ (ಹಿ.ಸ.):
ನಟ ಉಪೇಂದ್ರ ಅವರ ಪುತ್ರ ಆಯುಷ್ ಉಪೇಂದ್ರ ಅಭಿನಯದ ಚೊಚ್ಚಲ ಸಿನಿಮಾ ಇದೀಗ ವಿವಾದದ ಕೇಂದ್ರಬಿಂದುವಾಗಿದೆ.
ಸಿನಿಮಾದಿಂದ ನಿರ್ದೇಶಕರನ್ನು ಹೊರಗಿಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಹಾಗೂ ನಿರ್ಮಾಪಕಿ ಪ್ರಿಯಾಂಕಾ ಉಪೇಂದ್ರ ಸ್ಪಷ್ಟನೆ ನೀಡಿದ್ದಾರೆ.
ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸುದೀರ್ಘ ಪತ್ರ ಬರೆದಿರುವ ಅವರು, ನಿರ್ಮಾಪಕರ ಹಣವನ್ನು ಉಳಿಸುವುದರ ಜೊತೆಗೆ ಸಿನಿಮಾದ ಗುಣಮಟ್ಟ ಮತ್ತು ಮಗನ ಭವಿಷ್ಯದ ಹಿತದೃಷ್ಟಿಯಿಂದ ಕಠಿಣ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ತಿಳಿಸಿದ್ದಾರೆ.
ಸಿನಿಮಾದ ಚಿತ್ರೀಕರಣದ ವೇಳಾಪಟ್ಟಿ ಹಾಗೂ ತಂಡದ ನಡುವಿನ ಸಂವಹನದಲ್ಲಿ ಗಂಭೀರ ಸಮಸ್ಯೆಗಳು ಎದುರಾಗಿದ್ದವು. ನಿರ್ದೇಶಕರ ಕಾರ್ಯವೈಖರಿ ಬಗ್ಗೆಯೂ ಅಸಮಾಧಾನವಿತ್ತು.
ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ನಿರ್ದೇಶಕರನ್ನು ಸಿನಿಮಾದಿಂದ ಹೊರಗಿಡುವ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಪ್ರಿಯಾಂಕಾ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ ಎನ್ನಲಾಗಿದೆ.
ಸಿನಿಮಾ ನಿರ್ಮಾಣದ ಸಂದರ್ಭದಲ್ಲಿ ನಿರ್ಮಾಪಕರ ಹಣ ಮತ್ತು ಸಮಯ ಎರಡೂ ಮಹತ್ವದ್ದಾಗಿದ್ದು, ಯೋಜನೆಯನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವುದು ಅಗತ್ಯವಾಗಿದೆ.
ಯಾವುದೇ ಕಾರಣಕ್ಕೂ ಸಿನಿಮಾದ ಗುಣಮಟ್ಟದಲ್ಲಿ ರಾಜಿಯಾಗಲು ಸಾಧ್ಯವಿಲ್ಲ. ಅದರಲ್ಲೂ ಆಯುಷ್ ಅವರ ಮೊದಲ ಸಿನಿಮಾ ಆಗಿರುವುದರಿಂದ ಅವರ ಭವಿಷ್ಯ ಹಾಗೂ ವೃತ್ತಿಜೀವನದ ದೃಷ್ಟಿಯಿಂದ ಹೆಚ್ಚಿನ ಜವಾಬ್ದಾರಿಯಿಂದ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂಬುದು ಪ್ರಿಯಾಂಕಾ ಅವರ ನಿಲುವಾಗಿದೆ.
ಇದೇ ವೇಳೆ, ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವ ಉದ್ದೇಶದಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಧ್ಯಸ್ಥಿಕೆ ವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ವಿವಾದ ಏನೇ ಇದ್ದರೂ ಆಯುಷ್ ಅವರ ಮೊದಲ ಸಿನಿಮಾವನ್ನು ಪೂರ್ಣಗೊಳಿಸುವ ಬದ್ಧತೆ ತಮ್ಮಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಒಟ್ಟಿನಲ್ಲಿ, ಆಯುಷ್ ಉಪೇಂದ್ರ ಅವರ ಚೊಚ್ಚಲ ಸಿನಿಮಾ ಸುತ್ತ ಎದ್ದಿರುವ ನಿರ್ದೇಶಕ ವಿವಾದಕ್ಕೆ ಪ್ರಿಯಾಂಕಾ ಉಪೇಂದ್ರ ಅವರ ಸ್ಪಷ್ಟನೆ ಹೊಸ ತಿರುವು ನೀಡಿದ್ದು,
ಇದೀಗ ಫಿಲ್ಮ್ ಚೇಂಬರ್ ಈ ವಿಚಾರದಲ್ಲಿ ಯಾವ ರೀತಿಯ ಮಧ್ಯಸ್ಥಿಕೆ ವಹಿಸಲಿದೆ ಎಂಬ ಕುತೂಹಲ ಮೂಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R