ಚೀನಾ ಚಲನಚಿತ್ರೋತ್ಸವದಲ್ಲಿ ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಪ್ರದರ್ಶನ
39ನೇ ಗೋಲ್ಡನ್ ರೂಸ್ಟರ್ ಮತ್ತು ಹಂಡ್ರೆಡ್ ಫ್ಲವರ್ಸ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆ
ಚಿತ್ರ ತಂಡ


ಬೆಂಗಳೂರು, 09 ನವೆಂಬರ್ (ಹಿ.ಸ.):

ನಟ ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಕನ್ನಡ ಚಿತ್ರವು ಚೀನಾದ ಪ್ರತಿಷ್ಠಿತ 39ನೇ ಗೋಲ್ಡನ್ ರೂಸ್ಟರ್ ಮತ್ತು ಹಂಡ್ರೆಡ್ ಫ್ಲವರ್ಸ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ. ಈ ಮೂಲಕ ಈ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿ ಪ್ರದರ್ಶನಗೊಂಡ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ‘ಶಂಕರಾಭರಣ’ ಪಾತ್ರವಾಗಿದೆ.

‘ರೈಡ್’ ಮತ್ತು ‘ಮಹಾರಾಜ’ ಚಿತ್ರಗಳ ಬಳಿಕ ಇದೀಗ ‘ಶಂಕರಾಭರಣ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಗುರುತಿಸಿಕೊಳ್ಳುವ ಅವಕಾಶ ದೊರೆತಿದೆ.

ಜಗತ್ತಿನ ವಿವಿಧ ದೇಶಗಳ ಚಿತ್ರಗಳ ನಡುವೆ ಭಾರತೀಯ ಚಿತ್ರರಂಗವನ್ನು ಪ್ರತಿನಿಧಿಸುವ ಅವಕಾಶ ಈ ಚಿತ್ರಕ್ಕೆ ಲಭಿಸಿದೆ. ಚಿತ್ರೋತ್ಸವದಲ್ಲಿ ‘ಶಂಕರಾಭರಣ’ ಚಿತ್ರದ ವಿಶೇಷ ಪ್ರಥಮ ಪ್ರದರ್ಶನವೂ ನಡೆದಿದೆ.

ವಿಶೇಷವೆಂದರೆ, ವಿಶ್ವದ ವಿವಿಧ ಭಾಗಗಳಿಂದ ಆಗಮಿಸಿರುವ ಪ್ರೇಕ್ಷಕರು ಕನ್ನಡ ಭಾಷೆಯಲ್ಲಿಯೇ ಚಿತ್ರವನ್ನು ವೀಕ್ಷಿಸಿದ್ದಾರೆ. ಕನ್ನಡ ಚಿತ್ರವೊಂದು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತನ್ನದೇ ಭಾಷೆಯಲ್ಲಿ ಪ್ರದರ್ಶನಗೊಂಡಿರುವುದು ಕನ್ನಡ ಚಿತ್ರರಂಗದ ಪಾಲಿಗೆ ಮಹತ್ವದ ಬೆಳವಣಿಗೆಯಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande