
ನವದೆಹಲಿ, 22 ಮಾರ್ಚ್ (ಹಿ.ಸ.):
ಆ್ಯಂಕರ್:
ದೇಶದ ಖನಿಜ ಸಂಪತ್ತಿನ ಬಳಕೆ ಮತ್ತು ಹೂಡಿಕೆಗೆ ಉತ್ತೇಜನ ನೀಡುವ ದಿಶೆಯಲ್ಲಿ ಮಹತ್ವದ ಹೆಜ್ಜೆಯಾಗಿ, ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಜಿ.ಕಿಶನ್ ರೆಡ್ಡಿ ಅವರು ಮಾರ್ಚ್ 23 ರಂದು 7ನೇ ಸುತ್ತಿನ ಖನಿಜ ಹರಾಜಿಗೆ ಚಾಲನೆ ನೀಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸತೀಶ್ ಚಂದ್ರ ದುಬೆ ಸಹ ಭಾಗವಹಿಸಲಿದ್ದಾರೆ ಎಂದು ಗಣಿ ಸಚಿವಾಲಯ ತಿಳಿಸಿದೆ.
ಖನಿಜಗಳ ತಂತ್ರಜ್ಞಾನ ಮತ್ತು ಕಾರ್ಯತಂತ್ರದ ಮಹತ್ವವನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಗಣಿ ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ), 1957 ಕಾಯ್ದೆಗೆ 2023ರ ಆಗಸ್ಟ್ 17ರಂದು ತಿದ್ದುಪಡಿ ಮಾಡಿತ್ತು. ಈ ತಿದ್ದುಪಡಿಯಡಿ 24 ಖನಿಜಗಳನ್ನು ನಿರ್ಣಾಯಕ ಮತ್ತು ಕಾರ್ಯತಂತ್ರದ ವರ್ಗಗಳಿಗೆ ಸೇರಿಸಲಾಗಿದ್ದು, ಈ ಖನಿಜಗಳ ಹರಾಜು ನಡೆಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ. ಹರಾಜಿನಿಂದ ಲಭಿಸುವ ಆದಾಯವು ಸಂಬಂಧಿತ ರಾಜ್ಯ ಸರ್ಕಾರಗಳಿಗೆ ಸೇರುತ್ತದೆ.
ಇಲ್ಲಿಯವರೆಗೆ ಆರು ಹಂತಗಳ ಹರಾಜು ಪ್ರಕ್ರಿಯೆಯ ಮೂಲಕ 46 ಖನಿಜ ಬ್ಲಾಕ್‌ಗಳನ್ನು ಯಶಸ್ವಿಯಾಗಿ ಹಂಚಿಕೆ ಮಾಡಲಾಗಿದೆ. ಇದೀಗ 7ನೇ ಹಂತದಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 19 ಬ್ಲಾಕ್‌ಗಳನ್ನು ಹರಾಜು ಮಾಡಲಾಗುತ್ತಿದೆ. ಈ ಬ್ಲಾಕ್‌ಗಳು ಶುದ್ಧ ಇಂಧನ, ಸುಧಾರಿತ ತಂತ್ರಜ್ಞಾನ, ರಸಗೊಬ್ಬರ ಹಾಗೂ ಕಾರ್ಯತಂತ್ರದ ಕೈಗಾರಿಕೆಗಳಿಗೆ ಅಗತ್ಯವಾದ ಖನಿಜಗಳಿಗೆ ಸಂಬಂಧಿಸಿದವು.
ಹರಾಜು ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಮತ್ತು ವೇಗವಂತರಾಗಿಸಲು ಸರ್ಕಾರವು ಹಲವು ಸುಧಾರಣೆಗಳನ್ನು ಜಾರಿಗೆ ತಂದಿದೆ. ಖನಿಜ (ಹರಾಜು) ಎರಡನೇ ತಿದ್ದುಪಡಿ ನಿಯಮಗಳು, 2025 ಹಾಗೂ ಖನಿಜ (ಹರಾಜು) ತಿದ್ದುಪಡಿ ನಿಯಮಗಳು, 2026 ಮೂಲಕ ಹರಾಜಿನ ನಂತರದ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ಬ್ಯಾಂಕ್ ಗ್ಯಾರಂಟಿಗಳಿಗೆ ಪರ್ಯಾಯವಾಗಿ ವಿಮಾ ಶ್ಯೂರಿಟಿ ಬಾಂಡ್ ವ್ಯವಸ್ಥೆಯನ್ನೂ ಪರಿಚಯಿಸಲಾಗಿದೆ.
ಹರಾಜು ಸಂಪೂರ್ಣವಾಗಿ ಆನ್‌ಲೈನ್ ಮೂಲಕ, ಎರಡು ಹಂತದ ಪಾರದರ್ಶಕ ವಿಧಾನದಲ್ಲಿ ನಡೆಯಲಿದ್ದು, ಅತಿ ಹೆಚ್ಚು ಬಿಡ್ ಸಲ್ಲಿಸುವವರಿಗೆ ಬ್ಲಾಕ್ ಹಂಚಿಕೆ ಮಾಡಲಾಗುತ್ತದೆ.
ಜಾಗತಿಕ ಮಟ್ಟದಲ್ಲಿ ಶುದ್ಧ ಇಂಧನ ಮತ್ತು ಮುಂದುವರಿದ ತಂತ್ರಜ್ಞಾನಗಳತ್ತ ಸಾಗುತ್ತಿರುವ ಹಿನ್ನೆಲೆ, ಲಿಥಿಯಂ, ಗ್ರ್ಯಾಫೈಟ್, ಅಪರೂಪದ ಭೂಮಿಯ ಅಂಶಗಳು, ಟಂಗ್‌ಸ್ಟನ್, ವನಾಡಿಯಮ್ ಮತ್ತು ಟೈಟಾನಿಯಂ ಮೊದಲಾದ ಖನಿಜಗಳ ಬೇಡಿಕೆ ವೇಗವಾಗಿ ಏರಿಕೆಯಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa