ಮತಗಟ್ಟೆಗಳಲ್ಲಿ ಸುಧಾರಿತ ಸೌಲಭ್ಯಗಳು ಕಡ್ಡಾಯ: ಚುನಾವಣಾ ಆಯೋಗದ ಮಹತ್ವದ ನಿರ್ಧಾರ
ನವದೆಹಲಿ, 22 ಮಾರ್ಚ್ (ಹಿ.ಸ.): ಆ್ಯಂಕರ್: ವಿಧಾನಸಭಾ ಚುನಾವಣೆ ಹಾಗೂ ಉಪಚುನಾವಣೆಗಳ ವೇಳೆ ಮತದಾರರಿಗೆ ಸುಗಮ ಮತ್ತು ಸುಲಭ ಅನುಭವ ಕಲ್ಪಿಸಲು ಚುನಾವಣಾ ಆಯೋಗ ಮಹತ್ವದ ಕ್ರಮಗಳನ್ನು ಘೋಷಿಸಿದೆ. ಮತಗಟ್ಟೆಗಳಲ್ಲಿ ‘ಕನಿಷ್ಠ ಸೌಲಭ್ಯಗಳು’ ಹಾಗೂ ‘ಮತದಾರರ ನೆರವು’ ವ್ಯವಸ್ಥೆಗಳನ್ನು ಕಟ್ಟುನಿಟ್ಟಾಗಿ ಜಾರಿ
ECI


ನವದೆಹಲಿ, 22 ಮಾರ್ಚ್ (ಹಿ.ಸ.):

ಆ್ಯಂಕರ್:

ವಿಧಾನಸಭಾ ಚುನಾವಣೆ ಹಾಗೂ ಉಪಚುನಾವಣೆಗಳ ವೇಳೆ ಮತದಾರರಿಗೆ ಸುಗಮ ಮತ್ತು ಸುಲಭ ಅನುಭವ ಕಲ್ಪಿಸಲು ಚುನಾವಣಾ ಆಯೋಗ ಮಹತ್ವದ ಕ್ರಮಗಳನ್ನು ಘೋಷಿಸಿದೆ.

ಮತಗಟ್ಟೆಗಳಲ್ಲಿ ‘ಕನಿಷ್ಠ ಸೌಲಭ್ಯಗಳು’ ಹಾಗೂ ‘ಮತದಾರರ ನೆರವು’ ವ್ಯವಸ್ಥೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಆಯೋಗ ಮಾರ್ಗಸೂಚಿಗಳನ್ನು ಹೊರಡಿಸಿದೆ. ಒಟ್ಟು 2,18,807 ಮತಗಟ್ಟೆಗಳಲ್ಲಿ ಎಲ್ಲಾ ಮೂಲಭೂತ ಸೌಲಭ್ಯಗಳು ಕಡ್ಡಾಯವಾಗಿ ಲಭ್ಯವಿರುವಂತೆ ಕ್ರಮ ಕೈಗೊಳ್ಳಲು ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಮತಗಟ್ಟೆಗಳಲ್ಲಿ ಕುಡಿಯುವ ನೀರು, ನೆರಳಿನ ಕಾಯುವ ಸ್ಥಳ, ಶೌಚಾಲಯ, ಸಮರ್ಪಕ ಬೆಳಕು, ಅಂಗವಿಕಲರಿಗೆ ಅನುಕೂಲವಾಗುವ ರ‍್ಯಾಂಪ್‌ಗಳು, ಪ್ರಮಾಣಿತ ಮತದಾನ ವಿಭಾಗಗಳು ಹಾಗೂ ಸ್ಪಷ್ಟ ಸೂಚನಾ ಫಲಕಗಳ ವ್ಯವಸ್ಥೆ ಮಾಡುವುದು ಕಡ್ಡಾಯವಾಗಿದೆ. ಮತದಾರರು ಸರದಿಯಲ್ಲಿ ಕಾಯುವ ವೇಳೆ ಕುಳಿತುಕೊಳ್ಳಲು ನಿಯಮಿತ ಅಂತರದಲ್ಲಿ ಬೆಂಚುಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಇದರ ಜೊತೆಗೆ, ಮತದಾರರ ಜಾಗೃತಿಗಾಗಿ ಪ್ರತಿಯೊಂದು ಮತಗಟ್ಟೆಯಲ್ಲೂ ಪ್ರಮಾಣೀಕೃತ ‘ಮತದಾರರ ಸೌಲಭ್ಯ ಪೋಸ್ಟರ್‌’ಗಳನ್ನು ಪ್ರದರ್ಶಿಸಲಾಗುವುದು. ಇವುಗಳಲ್ಲಿ ಮತಗಟ್ಟೆ ವಿವರಗಳು, ಅಭ್ಯರ್ಥಿಗಳ ಪಟ್ಟಿ, ಮಾಡಬೇಕಾದ ಮತ್ತು ಮಾಡಬಾರದ ನಿಯಮಗಳು, ಮಾನ್ಯ ಗುರುತಿನ ಚೀಟಿಗಳ ಪಟ್ಟಿ ಹಾಗೂ ಮತದಾನದ ವಿಧಾನಗಳ ಮಾಹಿತಿ ನೀಡಲಾಗುತ್ತದೆ.

ತಂತ್ರಜ್ಞಾನ ಮತ್ತು ಸಹಾಯ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಪ್ರತಿ ಮತಗಟ್ಟೆಯಲ್ಲಿ ‘ಮತದಾರರ ಸಹಾಯ ಬೂತ್‌’ಗಳನ್ನು ಸ್ಥಾಪಿಸಲಾಗುತ್ತದೆ. ಇಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮತದಾರರಿಗೆ ತಮ್ಮ ಹೆಸರು, ಸರಣಿ ಸಂಖ್ಯೆ ಮತ್ತು ಮತಗಟ್ಟೆ ವಿವರಗಳನ್ನು ಪತ್ತೆಹಚ್ಚಲು ಸಹಾಯ ಮಾಡಲಿದ್ದಾರೆ.

ಇನ್ನು ಮತದಾರರ ಅನುಕೂಲಕ್ಕಾಗಿ ಮತಗಟ್ಟೆ ಪ್ರವೇಶದ್ವಾರದ ಹೊರಗೆ ಮೊಬೈಲ್ ಫೋನ್ ಠೇವಣಿ ವ್ಯವಸ್ಥೆಯನ್ನೂ ಒದಗಿಸಲಾಗುತ್ತದೆ. ಮತದಾರರು ತಮ್ಮ ಮೊಬೈಲ್‌ಗಳನ್ನು ಸ್ವಿಚ್‌ ಆಫ್ ಮಾಡಿ ಸ್ವಯಂಸೇವಕರ ಬಳಿ ಇಟ್ಟು, ಮತದಾನದ ನಂತರ ಮರಳಿ ಪಡೆಯಬಹುದಾಗಿದೆ.

ಈ ಎಲ್ಲಾ ಸೌಲಭ್ಯಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದ್ದು, ಮತದಾನದ ದಿನಾಂಕಕ್ಕೂ ಮುನ್ನವೇ ಎಲ್ಲಾ ವ್ಯವಸ್ಥೆಗಳು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande