ಕುರಿಗಾಯಿ ಮೇಲೆ ಕಾಡುಹಂದಿ ದಾಳಿ
ಗದಗ, 21 ಮಾರ್ಚ್ (ಹಿ.ಸ.) ಆ್ಯಂಕರ್:- ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಜಲ್ಲಿಗೇರಿ ತಾಂಡಾ ಸಮೀಪದ ಕಪ್ಪತ್ತಗುಡ್ಡ ಅರಣ್ಯದ ಅಂಚಿನ ಜಮೀನಿನಲ್ಲಿ ಕುರಿ ಕಾಯುವ ವೇಳೆ ಕುರಿಗಾಯಿಯ ಮೇಲೆ ಕಾಡುಹಂದಿ ದಾಳಿ ಮಾಡಿದೆ. ದಾಳಿಯಲ್ಲಿ ಕುರಿಗಾಯಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಶಿರಹಟ್ಟಿ ತಾಲೂಕ ಆಸ್ಪತ್
ಫೋಟೋ


ಗದಗ, 21 ಮಾರ್ಚ್ (ಹಿ.ಸ.)

ಆ್ಯಂಕರ್:- ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಜಲ್ಲಿಗೇರಿ ತಾಂಡಾ ಸಮೀಪದ ಕಪ್ಪತ್ತಗುಡ್ಡ ಅರಣ್ಯದ ಅಂಚಿನ ಜಮೀನಿನಲ್ಲಿ ಕುರಿ ಕಾಯುವ ವೇಳೆ ಕುರಿಗಾಯಿಯ ಮೇಲೆ ಕಾಡುಹಂದಿ ದಾಳಿ ಮಾಡಿದೆ.

ದಾಳಿಯಲ್ಲಿ ಕುರಿಗಾಯಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಶಿರಹಟ್ಟಿ ತಾಲೂಕ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಜಲ್ಲಿಗೇರಿ ತಾಂಡಾದ ನಿವಾಸಿ ಮಹಾಂತೇಶ್ ಚವ್ಹಾನ್ ಅವರು ತಮ್ಮ ಕುರಿಗಳನ್ನು ಮೇಯಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅರಣ್ಯದ ಅಂಚಿನಲ್ಲಿರುವ ಜಮೀನಿನಲ್ಲಿ ಕುರಿಗಳನ್ನು ಕಾಯುವಾಗ ಏಕಾಏಕಿ ಕಾಡುಹಂದಿ ದಾಳಿ ನಡೆಸಿದೆ. ದಾಳಿಯ ತೀವ್ರತೆಗೆ ಮಹಾಂತೇಶ್ ಅವರ ಮೊಣಕಾಲು, ಮೊಣಕೈ ಹಾಗೂ ಮುಖ ಭಾಗಗಳಿಗೆ ಗಂಭೀರ ಗಾಯಗಳಾಗಿವೆ.

ಆ ಪ್ರದೇಶದಲ್ಲಿ ಕಾಡುಹಂದಿಗಳ ಸಂಚಾರ ಹೆಚ್ಚಿದ್ದು, ಕೆಲ ನಾಯಿಗಳು ಕಾಡುಹಂದಿಯನ್ನು ಬೆನ್ನಟ್ಟಿದ್ದರಿಂದ ಅದು ಆಕ್ರೋಶಗೊಂಡು ಕುರಿಗಾಯಿಯ ಮೇಲೆ ದಾಳಿ ಮಾಡಿರಬಹುದು ಎಂದು ಶಂಕಿಸಲಾಗಿದೆ. ಘಟನೆಯ ನಂತರ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದು, ಅರಣ್ಯ ಪ್ರದೇಶದ ಸಮೀಪದಲ್ಲಿರುವ ರೈತರು ಹಾಗೂ ಕುರಿಗಾಯಿಗಳು ಭಯಭೀತರಾಗಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಶಿರಹಟ್ಟಿ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದಾಳಿ ನಡೆದ ಪ್ರದೇಶವನ್ನು ಪರಿಶೀಲಿಸಿ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಇದೇ ವೇಳೆ, ಅರಣ್ಯ ಇಲಾಖೆಯು ಗ್ರಾಮಸ್ಥರಿಗೆ ಅರಣ್ಯದ ಅಂಚಿನ ಪ್ರದೇಶಗಳಲ್ಲಿ ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚಿಸಿದೆ. ಕಾಡುಪ್ರಾಣಿಗಳ ಸಂಚಾರ ಹೆಚ್ಚಿರುವ ಹಿನ್ನೆಲೆಯಲ್ಲಿ ಒಂಟಿಯಾಗಿ ತೆರಳದಂತೆ ಹಾಗೂ ಕುರಿಗಳನ್ನು ಮೇಯಿಸುವಾಗ ಜಾಗರೂಕತೆಯನ್ನು ವಹಿಸುವಂತೆ ಸಲಹೆ ನೀಡಲಾಗಿದೆ.

ಗಾಯಾಳು ಮಹಾಂತೇಶ್ ಅವರಿಗೆ ಶಿರಹಟ್ಟಿ ತಾಲೂಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಘಟನೆ ಕಪ್ಪತ್ತಗುಡ್ಡ ಅರಣ್ಯದ ಅಂಚಿನ ಪ್ರದೇಶಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚುತ್ತಿರುವುದನ್ನು ಮತ್ತೊಮ್ಮೆ ತೋರಿಸಿದೆ. ಗ್ರಾಮಸ್ಥರು ಹಾಗೂ ರೈತರು ತಮ್ಮ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬುದು ಅಗತ್ಯವಾಗಿದ್ದು, ಅರಣ್ಯ ಇಲಾಖೆ ಕೂಡ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande