ಮೂಲ ಸೌಕರ್ಯ ನೀಡುವಂತೆ ಗದಗ ನಿವಾಸಿಗಳ ಆಗ್ರಹ
ಗದಗ, 21 ಮಾರ್ಚ್ (ಹಿ.ಸ.) ಆ್ಯಂಕರ್:- ಗದಗ ನಗರದ 16ನೇ ವಾರ್ಡ್ ವ್ಯಾಪ್ತಿಯ ಹೊಂಬಳನಾಕಾ ಜನತಾ ಕಾಲೋನಿಯ ನಿವಾಸಿಗಳು ಮೂಲಭೂತ ಸೌಲಭ್ಯಗಳ ಕೊರತೆಯಿಂದ ದಶಕಗಳ ಕಾಲ ನರಕಯಾತನೆ ಅನುಭವಿಸುತ್ತಿದ್ದು, ತಕ್ಷಣವೇ ಶಾಶ್ವತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ. ಹೊಂಬಳನಾಕಾ ಜನತಾ ಕಾಲೋನಿ ಅಭಿವೃದ್ಧಿ ಪ
ಫೋಟೋ


ಗದಗ, 21 ಮಾರ್ಚ್ (ಹಿ.ಸ.)

ಆ್ಯಂಕರ್:- ಗದಗ ನಗರದ 16ನೇ ವಾರ್ಡ್ ವ್ಯಾಪ್ತಿಯ ಹೊಂಬಳನಾಕಾ ಜನತಾ ಕಾಲೋನಿಯ ನಿವಾಸಿಗಳು ಮೂಲಭೂತ ಸೌಲಭ್ಯಗಳ ಕೊರತೆಯಿಂದ ದಶಕಗಳ ಕಾಲ ನರಕಯಾತನೆ ಅನುಭವಿಸುತ್ತಿದ್ದು, ತಕ್ಷಣವೇ ಶಾಶ್ವತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.

ಹೊಂಬಳನಾಕಾ ಜನತಾ ಕಾಲೋನಿ ಅಭಿವೃದ್ಧಿ ಪರ ಸೇವಾ ಸಂಘದ ಅಧ್ಯಕ್ಷ ಕೃಷ್ಣಾ ಎಚ್. ಹಡಪದ ಅವರು, “ನಗರದ ಮಧ್ಯಭಾಗದಲ್ಲಿದ್ದರೂ ನಾವು ಅತಂತ್ರ ಜೀವನ ನಡೆಸುತ್ತಿದ್ದೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“21ನೇ ಶತಮಾನದಲ್ಲೂ ಒಂದು ತುರ್ತು ಆಂಬ್ಯುಲೆನ್ಸ್ ಕೂಡ ಕಾಲೋನಿಗೆ ಪ್ರವೇಶಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿರುವುದು ವ್ಯವಸ್ಥೆಯ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆ” ಎಂದು ಅವರು ಕಿಡಿಕಾರಿದ್ದಾರೆ. ಮೃತ್ಯುಕೂಪವಾಗಿರುವ ಸೇತುವೆ ಕಾಲೋನಿಗೆ ಸಂಪರ್ಕ ಕಲ್ಪಿಸುವ ಸುಮಾರು 30 ವರ್ಷಗಳ ಹಳೆಯ ಕಿರುಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದು, ಕಾಂಕ್ರೀಟ್ ಉದುರಿ ಒಳಗಿನ ಕಬ್ಬಿಣದ ಸರಳುಗಳು ಹೊರಬಿದ್ದಿವೆ.

ದಿನನಿತ್ಯ ನೂರಾರು ಶಾಲಾ ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಜೀವ ಭಯದ ನಡುವೆ ಇದೇ ಸೇತುವೆಯನ್ನು ದಾಟುತ್ತಿದ್ದಾರೆ. ಯಾವುದೇ ಕ್ಷಣದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇದ್ದು, ಅನಾಹುತ ಸಂಭವಿಸಿದರೆ ನಗರಸಭೆ ಮತ್ತು ಜಿಲ್ಲಾಡಳಿತವೇ ನೇರ ಹೊಣೆಗಾರರಾಗಬೇಕು ಎಂದು ಹಡಪದ ಎಚ್ಚರಿಸಿದ್ದಾರೆ.

ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿಗಳು

ಕಾಲೋನಿಯ ಅಭಿವೃದ್ಧಿಗೆ ಸುಮಾರು 45 ಲಕ್ಷ ರೂ. ಅನುದಾನ ಮಂಜೂರಾಗಿ ರಸ್ತೆ ಕಾಮಗಾರಿ ಆರಂಭವಾದರೂ, ಅವು ಪರಸ್ಪರ ಸಂಪರ್ಕ ಹೊಂದದೇ ಅರ್ಧದಲ್ಲೇ ನಿಂತಿವೆ. ಡಿಸಿ ಮಿಲ್ ಕಾಂಪೌಂಡ್ನಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ವಾಹನಗಳು ಒಳಗೆ ಹೋದರೆ ಹಿಂದಿರುಗಲು ಸಂಕಷ್ಟ ಅನುಭವಿಸುವ ಪರಿಸ್ಥಿತಿ ಇದೆ. ಈ ಕಾಂಪೌಂಡ್ ತೆರವುಗೊಳಿಸಿ ಹಳೇ ಕೋರ್ಟ್ ವೃತ್ತ ಹಾಗೂ ರೈಲ್ವೇ ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸಿದರೆ ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಚಿವರ ಪುತ್ರ ಕೃಷ್ಣಗೌಡ ಪಾಟೀಲ ಅವರ ಸೇವೆಯನ್ನು ಹಡಪದ ಮೆಚ್ಚಿ ಮಾತನಾಡಿದ್ದು, ಬಡವರ ಸಮಸ್ಯೆಗಳಿಗೆ ಸ್ಪಂದಿಸುವ ಅವರ ಗುಣ ಶ್ಲಾಘನೀಯವಾಗಿದೆ ಎಂದು ತಿಳಿಸಿದ್ದಾರೆ.

ರಾಜಕಾಲುವೆ ಕಾಮಗಾರಿಯಿಂದ ಅವಾಂತರ

ಕಾಲೋನಿಯಲ್ಲಿ ಅರ್ಧಕ್ಕೆ ನಿಂತಿರುವ ರಾಜಕಾಲುವೆ ಕಾಮಗಾರಿಯಿಂದ ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುವ ಭೀತಿ ಹೆಚ್ಚಾಗಿದೆ. ನಗರಸಭೆ ಅಧಿಕಾರಿಗಳಾದ ಲಕ್ಷ್ಮಣ ಜೋಗುದಂಡಕರ್ ಅವರು ಬಡವರ ಪರ ಕಾಳಜಿ ತೋರುತ್ತಿದ್ದು, ಹಿರಿಯ ಸದಸ್ಯ ಕೃಷ್ಣಾ ಪರಾಪೂರ ಅವರು ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಹಡಪದ ಹೇಳಿದ್ದಾರೆ. ಆದರೆ ಈ ಪ್ರಯತ್ನಗಳಿಗೆ ಪೂರಕವಾಗಿ ಸರ್ಕಾರದಿಂದ ಹೆಚ್ಚಿನ ಅನುದಾನ ಅಗತ್ಯವಿದೆ ಎಂದರು.

ಪ್ರಮುಖ ಆಗ್ರಹಗಳು ಕಾಲೋನಿಯ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ‘ಬೃಹತ್ ಯೋಜನೆ’ ರೂಪಿಸಿ ಕನಿಷ್ಠ 2ರಿಂದ 3 ಕೋಟಿ ರೂ. ಅನುದಾನ ಮಂಜೂರು ಮಾಡಬೇಕು. ಶಿಥಿಲಗೊಂಡಿರುವ ಸೇತುವೆಯನ್ನು ತೆರವುಗೊಳಿಸಿ ಹೊಸದಾಗಿ ಸುರಕ್ಷಿತ ಸೇತುವೆ ನಿರ್ಮಿಸಬೇಕು. ಜೊತೆಗೆ ಅರ್ಹ ಬಡ ಕುಟುಂಬಗಳಿಗೆ ಆಶ್ರಯ ಮನೆಗಳನ್ನು ಕೂಡಲೇ ಒದಗಿಸಬೇಕು ಎಂದು ಒತ್ತಾಯಿಸಲಾಗಿದೆ.

ಹೋರಾಟದ ಎಚ್ಚರಿಕೆ

“ನಮಗೆ ಬೇಕಿರುವುದು ಕನಿಷ್ಠ ಮೂಲಭೂತ ಸೌಲಭ್ಯಗಳು ಮತ್ತು ನೆಮ್ಮದಿಯ ಬದುಕು ಮಾತ್ರ. ನಮ್ಮ ಮನವಿಯನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸದಿದ್ದರೆ, ಎಲ್ಲಾ ನಿವಾಸಿಗಳೊಂದಿಗೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ” ಎಂದು ಕೃಷ್ಣಾ ಎಚ್. ಹಡಪದ ಎಚ್ಚರಿಕೆ ನೀಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande