
ವಿಜಯಪುರ, 21 ಮಾರ್ಚ್ (ಹಿ.ಸ.)
ಆ್ಯಂಕರ್ : ಬಿಸಿಲಿನ ನಾಡು ವಿಜಯಪುರ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಅಕಾಲಿಕ ಆಲಿಕಲ್ಲು ಮಳೆ ರೈತರ ಪಾಲಿಗೆ ಭಾರೀ ಸಂಕಷ್ಟ ತಂದಿದೆ.
ತಿಕೋಟಾ, ಮುದ್ದೇಬಿಹಾಳ, ನಿಡಗುಂದಿ, ಬಸವನಬಾಗೇವಾಡಿ, ಕೊಲ್ಹಾರ ಹಾಗೂ ಮುಳವಾಡ ಭಾಗಗಳಲ್ಲಿ ಗಾಳಿ ಸಹಿತ ಸುರಿದ ಮಳೆಯಿಂದ ದ್ರಾಕ್ಷಿ ಹಾಗೂ ದಾಳಿಂಬೆ ಬೆಳೆಗಳಿಗೆ ದೊಡ್ಡ ಮಟ್ಟದ ಹಾನಿ ಉಂಟಾಗಿದೆ.
ಆಲಿಕಲ್ಲು ಮಳೆಯ ತೀವ್ರತೆ ಎಷ್ಟಿತ್ತೆಂದರೆ ರಸ್ತೆಗಳು ಬಿಳಿ ಹಿಮದಂತೆ ಆಲಿಕಲ್ಲುಗಳಿಂದ ಆವರಿಸಿಕೊಂಡ ದೃಶ್ಯ ಕಂಡುಬಂದಿತು.ಕೆಲವರು ಈ ದೃಶ್ಯವನ್ನು ನೋಡಿ ಸಂಭ್ರಮಿಸಿದರೆ, ಇನ್ನೊಂದೆಡೆ ತಮ್ಮ ಬೆಳೆ ಹಾನಿಯನ್ನು ಕಂಡು ರೈತರು ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಯಿತು.
ವಿಶೇಷವಾಗಿ ದ್ರಾಕ್ಷಿ ಬೆಳೆಗಾರರಿಗೆ ಭಾರೀ ಹೊಡೆತ ಬಿದ್ದಿದ್ದು, ಒಣದ್ರಾಕ್ಷಿ ತಯಾರಿಸಲು ಹಾಕಿದ್ದ ಡ್ರೈಯಿಂಗ್ ಟೆಂಟ್ಗಳು ಹಾನಿಗೊಳಗಾಗಿವೆ. ತಿಕೋಟಾ ತಾಲೂಕಿನ ಇಟ್ಟಂಗಿಹಾಳ ದೊಡ್ಡಿಯಲ್ಲಿ ರೈತ ಅಬ್ದುಲ್ ರಶೀದ್ ಇನಾಮದಾರ ಅವರು ನಿರ್ಮಿಸಿದ್ದ ಆಧುನಿಕ ಡ್ರೈಯಿಂಗ್ ಟೆಂಟ್ ಸಂಪೂರ್ಣ ಹಾನಿಗೊಂಡಿದೆ. ಟೆಂಟ್ನಲ್ಲಿ ಸುಮಾರು 3 ಟನ್ಗಿಂತ ಹೆಚ್ಚು ದ್ರಾಕ್ಷಿ ಒಣಗಲು ಇಡಲಾಗಿದ್ದು, ಅವರ ಸ್ವಂತ ಮೂರು ಎಕರೆ ತೋಟದ ದ್ರಾಕ್ಷಿಯೂ ಸೇರಿತ್ತು. ಜೊತೆಗೆ ಗ್ರಾಮದ ಹಲವಾರು ರೈತರು ತಮ್ಮ ದ್ರಾಕ್ಷಿಯನ್ನು ಇದೇ ಟೆಂಟ್ನಲ್ಲಿ ಒಣಗಿಸಲು ಇಟ್ಟಿದ್ದರು.
ಆದರೆ ಅಕಾಲಿಕ ಆಲಿಕಲ್ಲು ಮಳೆಯಿಂದ ಟೆಂಟ್ ಸಂಪೂರ್ಣ ಹಾನಿಗೊಂಡು ಒಳಗಿದ್ದ ದ್ರಾಕ್ಷಿ ಹಾಳಾಗಿದ್ದು, ಒಟ್ಟು ಸುಮಾರು ₹3 ಕೋಟಿ ಮೌಲ್ಯದ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.
ತಿಂಗಳ ಕಾಲದ ಶ್ರಮ, ಹೂಡಿಕೆ ಹಾಗೂ ಸಾಲದ ಒತ್ತಡದ ನಡುವೆ ಬೆಳೆ ಕೈಗೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ಮಳೆ ಭಾರೀ ಆಘಾತ ನೀಡಿದೆ. ತಕ್ಷಣ ಸರ್ಕಾರ ಹಾನಿಯನ್ನು ಪರಿಶೀಲಿಸಿ ಪರಿಹಾರ ಘೋಷಿಸಬೇಕು ಎಂದು ರೈತರು ಹಿಂದುಸ್ತಾನ್ ಸಮಾಚಾರ್ ಸುದ್ದಿ ಸಂಸ್ಥೆ ಮೂಲಕ ಆಗ್ರಹಿಸಿದ್ದಾರೆ.
ಒಟ್ಟಾರೆ ಅಕಾಲಿಕ ಆಲಿಕಲ್ಲು ಮಳೆಯ ಅಬ್ಬರಕ್ಕೆ ಒಣದ್ರಾಕ್ಷಿ ಸೇರಿದಂತೆ ಹಲವು ಬೆಳೆಗಳು ಹಾನಿಗೊಂಡಿದ್ದು, ರೈತರ ಆರ್ಥಿಕ ಸ್ಥಿತಿ ಸಂಕಷ್ಟಕ್ಕೆ ಸಿಲುಕಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande