
ಬೀದರ್, 21 ಮಾರ್ಚ್ (ಹಿ.ಸ.):
ಆ್ಯಂಕರ್:
ವಿಶ್ವ ಅರಣ್ಯ ದಿನಾಚರಣೆ ಅಂಗವಾಗಿ ಅರಣ್ಯಗಳ ಮಹತ್ವವನ್ನು ಒತ್ತಿಹೇಳಿದ ಅರಣ್ಯ ಸಚಿವ ಈಶ್ವರ ಖಂಡ್ರೆ, “ಅರಣ್ಯವೆಂದರೆ ಕೇವಲ ಮರಗಳ ಸಮೂಹವಲ್ಲ, ಅದು ನಮ್ಮ ಬದುಕಿನ ಆಧಾರ ಮತ್ತು ಭವಿಷ್ಯದ ಭರವಸೆ” ಎಂದು ಹೇಳಿದರು.
ಪ್ರಕೃತಿಯೊಂದಿಗೆ ಮಾನವನ ಸಂಬಂಧ ದಿನೇದಿನೇ ದುರ್ಬಲವಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಸಂರಕ್ಷಣೆ ನಮ್ಮೆಲ್ಲರ ಮೊದಲ ಆದ್ಯತೆಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು. ಹವಾಮಾನ ಬದಲಾವಣೆ, ಜಲಾಭಾವ ಮತ್ತು ಪರಿಸರ ಹಾನಿಯನ್ನು ತಡೆಯುವ ಶಕ್ತಿ ಅರಣ್ಯಗಳಲ್ಲಿ ಅಡಕವಾಗಿದೆ ಎಂದು ಹೇಳಿದರು.
ಕರ್ನಾಟಕ ಸರ್ಕಾರ ಅರಣ್ಯ ಸಂರಕ್ಷಣೆ, ವನಸಂಪತ್ತು ವೃದ್ಧಿ ಹಾಗೂ ಜೀವ ವೈವಿಧ್ಯತೆ ಕಾಪಾಡುವ ದಿಕ್ಕಿನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಜನರ ಸಹಭಾಗಿತ್ವವೇ ಈ ಕಾರ್ಯಕ್ಕೆ ಪ್ರಮುಖ ಶಕ್ತಿ ಎಂದು ತಿಳಿಸಿದರು.
ಈ ವಿಶ್ವ ಅರಣ್ಯ ದಿನದ ಅಂಗವಾಗಿ ಪ್ರತಿಯೊಬ್ಬರೂ ಒಂದು ಮರ ನೆಡುವ ಸಂಕಲ್ಪ ಮಾಡಬೇಕು ಹಾಗೂ ಅರಣ್ಯಗಳನ್ನು ಉಳಿಸಿ ಪರಿಸರವನ್ನು ಕಾಪಾಡಬೇಕು ಎಂದು ಕರೆ ನೀಡಿದರು.
“ಅರಣ್ಯ ಉಳಿದರೆ – ಜೀವನ ಉಳಿಯುತ್ತದೆ” ಎಂಬ ಸಂದೇಶದೊಂದಿಗೆ ಹಸಿರು ಕರ್ನಾಟಕ ನಿರ್ಮಾಣವೇ ನಮ್ಮ ಗುರಿ ಎಂದು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa