ಯುಪಿಎಸ್ಸಿ ಸ್ಪರ್ಧಿಗಳಿಗೆ ದೆಹಲಿಯಲ್ಲಿ ವಸತಿ ಸೌಲಭ್ಯ ಕಲ್ಪಿಸಲು ಮನವಿ
ಯುಪಿಎಸ್ಸಿ ಸ್ಪರ್ಧಿಗಳಿಗೆ ಕರ್ನಾಟಕ ಸರ್ಕಾರ ದೆಹಲಿಯಲ್ಲಿ ವಸತಿ ಸೌಲಭ್ಯ ಕಲ್ಪಿಸಲು ಮನವಿ
ಪ್ರಸಕ್ತ ಸಾಲಿನಲ್ಲಿ ಯು.ಪಿ.ಎಸ್.ಸಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಂದ್ರ ಸರ್ಕಾರದ ಕ್ಲಾಸ್ ೧ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳನ್ನು ಒಕ್ಕಲಿಗರ ಫಸ್ಟ್ ಸರ್ಕಲ್ನಿಂದ ಸನ್ಮಾನಿಸಲಾಯಿತು.


ಕೋಲಾರ,೧೬ ಮಾರ್ಚ್ (ಹಿ.ಸ):

ಆಂಕರ್ : ಯುಪಿಎಸ್ಸಿಯಲ್ಲಿ ಪಾಸ್ ಆಗಿರುವ ನಾವುಗಳು ರೈತರ ಮಕ್ಕಳು, ತಮ್ಮ ಪೋಷಕರು ಆಸ್ತಿ ಮಾಡಿಲ್ಲ, ಆದರೆ ನಮಗೆ ವಿದ್ಯಾಭ್ಯಾಸ ಕೊಡಿಸುವುದಕ್ಕೆ ಹಗಲಿರುಳು ನಮಗೆ ಬೆನ್ನೆಲುಬಾಗಿ ನಿಂತು ವಿದ್ಯೆಯ ಆಸ್ತಿಯನ್ನು ಕೊಡಿಸಿದ್ದಾರೆ. ಯುಪಿಎಸ್ಸಿ ಪರೀಕ್ಷೆ ಪಾಸ್ ಆಗುವುದು ಸುಲಭದ ಮಾತಲ್ಲ. ಅದರಲ್ಲೂ ಸಂದರ್ಶನ ಸಮಯದಲ್ಲಿ ದೆಹಲಿಯಲ್ಲಿ ಒಂದೂವರೆ ತಿಂಗಳು ಇರಬೇಕಾಗುತ್ತದೆ. ಈ ವೇಳೆ ವಾಸ್ತವ್ಯ, ಊಟಕ್ಕೆ, ಸಿದ್ಧತೆಗೆ ಬಹಳಷ್ಟ ಹಣ ಬೇಕಾಗುತ್ತದೆ. ಹೀಗಾಗಿ, ದಾನಿಗಳು, ರಾಜ್ಯ ಸರ್ಕಾರವು ಯುಪಿಎಸ್ಸಿ ಆಕಾಂಕ್ಷಿಗಳಿಗೆ ಆರ್ಥಿಕ ನೆರವು ನೀಡಿದೆ ಮತ್ತಷ್ಟು ಸಾಧಕರು ಹುಟ್ಟಿಕೊಳ್ಳುತ್ತಾರೆ ಎಂದು ಯುಪಿಎಸ್ಸಿ ರ್ಯಾಂಕ್ ವಿಜೇತರು ತಮ್ಮ ಮನದಾಳದ ಮಾತಗಳನ್ನು ಹೇಳಿದರು.

ನಗರ ಹೊರವಲಯದ ಒಲಿವಿಯಾ ರೆಸಾರ್ಟ್ನಲ್ಲಿ ಫರ್ಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಸಂಸ್ಥೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಯುಪಿಎಸ್ಸಿ ರ್ಯಾಂಕ್ ವಿಜೇತರು ಮಾತನಾಡಿದರು.

ಒಕ್ಕಲಿಗ ಸಮುದಾಯಕ್ಕೆ ಸೇರಿದ ಕೋಲಾರ ತಾಲ್ಲೂಕಿನ ಇರಗಸಂದ್ರ ಗ್ರಾಮದ ಎ.ಮಧು (೪೩೬ನೇ ರ್ಯಾಂಕ್), ತ್ಯಾವನಹಳ್ಳಿ ಗ್ರಾಮದ ವರುಣ್ಗೌಡ ಪಿ.(೪೬೨ನೇ ರ್ಯಾಂಕ್), ನೆನಮನಹಳ್ಳಿ ಗ್ರಾಮದ ಸಾಗರ್.ಎ (೬೪೧ನೇ ರ್ಯಾಂಕ್ ) ಅವರನ್ನು ಸನ್ಮಾನಿಸಲಾಯಿತು. ತರಬೇತಿಯಲ್ಲಿ ಪಾಲ್ಗೊಂಡಿರುವ ಕಾರಣ ಮೇಡಿತಂಬಳ್ಳಿ ಗ್ರಾಮದ ಎಂ.ಎಸ್.ಉಲ್ಲಾಸ್ (೫೫೬ನೇ ರ್ಯಾಂಕ್) ಬಂದಿರಲಿಲ್ಲ. ಬದಲಾಗಿ ಅವರ ಪೋಷಕರನ್ನು ಗೌರವಿಸಲಾಯಿತು.

ಈ ವೇಳೆ ಮಾತನಾಡಿದ ಎ.ಮಧು, ಈ ಬಾರಿ ತಮಿಳುನಾಡಿನಿಂದ ೫೭ ಮಂದಿ, ಮಹಾರಾಷ್ಟçದಿಂದ ೬೦ಕ್ಕೂ ಅಧಿಕ ಮಂದಿ ಯುಪಿಎಸ್ಸಿ ಪಾಸ್ ಆಗಿದ್ದಾರೆ. ಆದರೆ, ರಾಜ್ಯದ ಕೇವಲ ೨೫ ಮಂದಿ ಉತ್ತೀರ್ಣರಾಗಿದ್ದಾರೆ. ಇದಕ್ಕೆ ಕಾರಣವೇನು? ಎಲ್ಲಿ ಎಡವುತ್ತಿದ್ದೇವೆ? ಎಲ್ಲಿ ಲೋಪವಿದೆ ಎಂಬುದನ್ನು ಪತ್ತೆ ಹಚ್ಚಬೇಕು? ಎಂದು ಮನವಿ ಮಾಡಿದರು.

ರಾಜ್ಯ ಸರ್ಕಾರವೂ ಈ ನಿಟ್ಟಿನಲ್ಲಿ ಚಿಂತಿಸಬೇಕು. ಯುಪಿಎಸ್ಸಿ ಆಕಾಂಕ್ಷಿಗಳಿಗೆ ತಮಿಳುನಾಡು ಸರ್ಕಾರ ಬೆಂಬಲ ನೀಡುತ್ತಿದೆ. ಆ ರೀತಿ ನಮ್ಮಲ್ಲೂ ಬೆಂಬಲದ ಅಗತ್ಯವಿದೆ. ಸಂದರ್ಶನ ಸಂದರ್ಭದಲ್ಲಿ ಒಂದೂವರೆ ತಿಂಗಳು ದೆಹಲಿಯಲ್ಲಿ ಇರಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಆರ್ಥಿಕ ಸಹಾಯ ಮಾಡಬೇಕು ಎಂದು ಕೋರಿದರು.

ಕಳೆದ ಬಾರಿ ರ್ಯಾಂಕ್ ಬಂದು ರೆವೆನ್ಯೂ ಸರ್ವೀಸ್ ಸೇರಿದೆ. ರಜೆ ಪಡೆದು ಬಂದು ಮತ್ತೆ ಓದಿ ರ್ಯಾಂಕ್ ಹೆಚ್ಚಿಸಿಕೊಂಡೆ. ಪೋಷಕರು ನನಗಾಗಿ ತ್ಯಾಗ ಮಾಡಿದ್ದಾರೆ. ಶಿಕ್ಷಕರಿಗೂ ಕೃತಜ್ಞತೆ ಹೇಳುತ್ತೇನೆ ಎಂದು ನುಡಿದರು.

ವರುಣ್ಗೌಡ ಮಾತನಾಡಿ, ಒಕ್ಕಲಿಗ ಸಮುದಾಯದವರು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಇನ್ನೂ ಹೆಚ್ಚಿನವರು ಯುಪಿಎಸ್ಸಿ ಪಾಸ್ ಆಗಬೇಕು. ಅವರಿಗೆ ಸರ್ಕಾರ ಹಾಗೂ ಸಮಾಜ ಸಹಾಯ ಮಾಡಬೇಕು. ಯುಪಿಎಸ್ಸಿ ಬರೆಯುವ ಅಭ್ಯರ್ಥಿಗಳಿಗೆ ನಮ್ಮಿಂದಾದ ಸಹಾಯ ಮಾಡುತ್ತೇವೆ. ಪೋಷಕರು ನಮ್ಮನ್ನು ಕಷ್ಟಪಟ್ಟು ಓದಿಸಿದ್ದಾರೆ. ಓದಿನಿಂದ ಮಾತ್ರ ಬದುಕಿನ ದಾರಿ ಕಂಡುಕೊಳ್ಳಲು ಸಾಧ್ಯ? ನಮ್ಮ ಸಮುದಾಯದಲ್ಲಿ ಅನೇಕ ಪ್ರತಿಭಾವಂತರಿದ್ದಾರೆ.ಅವರಿಗೆ ಪ್ರೋತ್ಸಾಹ ಸಿಕ್ಕರೆ ಮತ್ತಷ್ಟು ಮಂದಿ ಯುಪಿಎಸ್ಸಿಯಲ್ಲಿ ರ್ಯಾಂಕ್ ಪಡೆಯಬಹುದು. ಈಬಗ್ಗೆ ಒಕ್ಕಲಿಗ ಸಮುದಾಯ ಚಿಂತನೆ ನಡಸಬೇಕಾಗಿದೆ ಎಂದು ಹೇಳಿದರು.

ಸಾಗರ್ ಎ. ಮಾತನಾಡಿ, ನಾನು ಯುಪಿಎಸ್ಸಿಯಲ್ಲಿ ರ್ಯಾಂಕ್ ಬಂದಿರುವುದಕ್ಕೆ ಹೆಮ್ಮೆ ಇದೆ. ನನ್ನ ವಿದ್ಯಾಭ್ಯಾಸಕ್ಕೆ ಹಲವಾರು ಮಂದಿ ಸಹಾಯ ಮಾಡಿದ್ದಾರೆ. ಕೋಲಾರ ಪತಂಜಲಿ ಶಿಕ್ಷಣ ಸಂಸ್ಥೆಯಲ್ಲಿ ಹಿರಿಯರಾದ ಬಿಸಪ್ಪಗೌಡ, ಇಂಚರ ಗೋವಿಂದರಾಜು ಅವರು ನನಗೆ ಪ್ರೋತ್ಸಾಹಧನ ೧೦ ಸಾವಿರ ಕೊಟ್ಟರು, ಆದು ನನ್ನ ಕಷ್ಟಕಾಲದಲ್ಲಿ ವಿದ್ಯಾಭ್ಯಾಸ ಮಾಡುವುದಕ್ಕೆ ಸಾಧ್ಯವಾಯಿತು. ತಮಿಳುನಾಡು ಸರ್ಕಾರ ಅಲ್ಲಿನ ಯುಪಿಎಸ್ಸಿ ಆಕಾಂಕ್ಷಿಗಳಿಗೆ ಸಹಾಯ ಮಾಡುತ್ತಿದೆ. ದೆಹಲಿಯಲ್ಲಿ ಉಳಿಯಲು ಹೆಚ್ಚು ಖರ್ಚಾಗುತ್ತದೆ. ಹೀಗಾಗಿ, ರಾಜ್ಯ ಸರ್ಕಾರ ಕೂಡ ಸಹಾಯ ಮಾಡಬೇಕು. ಸಮುದಾಯದಿಂದ ಹಾಸ್ಟೆಲ್ಗಳು ನಿರ್ಮಾಣವಾಗಬೇಕು ಎಂದು ಮನವಿ ಮಾಡಿದರು.

ಕೋಲಾರದ ಐವರು ರ್ಯಾಂಕ್ ಪಡೆದಿದ್ದು, ಈ ಬಾರಿ ರಾಜ್ಯದಲ್ಲಿ ಅಧಿಕ ಸಂಖ್ಯೆಯಲ್ಲಿ ಪಾಸ್ ಆಗಿದ್ದಾರೆ. ನಮ್ಮ ಪೋಷಕರು ಓದಿಲ್ಲ. ಆದರೆ, ನಮ್ಮನ್ನು ಚೆನ್ನಾಗಿ ಓದಿಸಿದ್ದಾರೆ. ಶಿಕ್ಷಣದ ಜೊತೆ ವಿನಯ ಇರಲಿ. ಮಕ್ಕಳು ಇಷ್ಟ ಪಟ್ಟಿದ್ದನ್ನು ಓದಿಸಿ. ಕೆ.ಆರ್.ನಂದಿನಿ, ಡಿ.ಕೆ.ರವಿ ನಮಗೆ ಸ್ಫೂರ್ತಿ ಎಂದರು.

ಫರ್ಸ್ಟ್ ಸರ್ಕಲ್ ಒಕ್ಕಲಿಗ ಉದ್ಯಮಿ ಜಿಲ್ಲಾ ಅಧ್ಯಕ್ಷ ಸಿಎಂಆರ್ ಶ್ರೀನಾಥ್ ಮಾತನಾಡಿ, ಒಕ್ಕಲಿಗರು ಕೇವಲ ಉದ್ಯೋಗಿಗಳಲ್ಲ, ಉದ್ಯಮಿಗಳಾಗಬೇಕು. ಈ ನಿಟ್ಟಿನಲ್ಲಿ ನಾಲ್ಕು ವರ್ಷಗಳ ಹಿಂದೆ ಜಯರಾಂ ರಾಯಪುರ ಫರ್ಸ್ಟ್ ಸರ್ಕಲ್ ಸ್ಥಾಪಿಸಿದರು. ಯುಪಿಎಸ್ಸಿ ಪರೀಕ್ಷೆಯಲ್ಲಿ ಒಕ್ಕಲಿಗ ಸಮುದಾಯದ ನಾಲ್ವರು ಪಾಸ್ ಆಗಿರುವುದು ಸಮುದಾಯದ ಹೆಮ್ಮೆ ಎಂದು ಹೇಳಿದರು.

ಕೋಲಾರಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಇಂಥ ಜಿಲ್ಲೆಯಲ್ಲಿ ನಮ್ಮ ಸಮುದಾಯ ಉತ್ತಮ ಸಾಧನೆ ಮಾಡಿದೆ. ಈ ಸಾಧಕರು ಗ್ರಾಮೀಣ ಭಾಗದಿಂದ ಬಂದವರು. ಗ್ರಾಮೀಣ ಭಾಗದಲ್ಲಿನ ಶಿಕ್ಷಣ ಸಂಸ್ಥೆಗಳು ನೈತಿಕತೆ, ಮಾನವೀಯ ಮೌಲ್ಯ ತುಂಬುತ್ತಿವೆ ಎಂದರು.

ಇತ್ತೀಚಿನ ದಿನಗಳಲ್ಲಿ ಒಕ್ಕಲಿಗ ಸಮುದಾಯದಲ್ಲಿ ಉಪ ಪಂಗಡಗಳನ್ನು ಸೃಷ್ಠಿಸಿಕೊಂಡಿ ಹೋಗುತ್ತಿರುವುದರಿಂದ ಸಮುದಾಯ ರಾಜಕೀಯವಾಗಿ ಕ್ಷಿಣಿಸುತ್ತಿದೆ. ಇದನ್ನು ಬಿಟ್ಟು ನಾವುಗಳು ಒಕ್ಕಲಿಗರ ಅನ್ನೋ ಭಾವನೆಯನ್ನು ಬೆಳೆಸಿಕೊಳ್ಳಬೇಕೆಂದರು. ರಾಜ್ಯ ಒಕ್ಕಲಿಗ ಸಂಘ ಬಲಿಷ್ಠವಾಗಿದೆ. ದೆಹಲಿಯಲ್ಲಿ ಒಕ್ಕಲಿಗ ಸಂಘದ ಹಾಸ್ಟಲ್ ಕಟ್ಟಿ ಯುಪಿಎಸ್ಸಿ ಸೇರಿದಂತೆ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಕೊಟ್ಟಾಗ ಮತ್ತಷ್ಟು ಪ್ರತಿಭಾವಂತ ವಿದ್ಯಾರ್ಥಿಗಳು ಹೊರ ಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಯುಪಿಎಸ್ಸಿ ಆಕಾಂಕ್ಷಿಗಳಿಗೆ ವೈಯಕ್ತಿಕವಾಗಿ ನಾನು ಕೂಡ ಆರ್ಥಿಕ ಸಹಾಯ ಮಾಡುತ್ತೇನೆ. ಎಷ್ಟೇ ಲಕ್ಷ ಖರ್ಚಾದರೂ ನಾನು ಒಕ್ಕಲಿಗರ ವೇದಿಕೆ ಮೂಲಕ ಭರಿಸುತ್ತೇನೆ? ಎಂದು ಭರವಸೆ ನೀಡಿದರು.

ಒಕ್ಕಲಿಗ ಸಮುದಾಯ ನಾಲ್ವರು ಯುವಕರು ಯುಪಿಎಸ್ಸಿಯಲ್ಲಿ ರ್ಯಾಂಕ್ ಪಡೆದಿದ್ದಾರೆ. ಇದು ನಮ್ಮ ಸಮುದಾಯಕ್ಕೆ ಹೆಮ್ಮ ತರುವ ವಿಚಾರ. ಈಗಾಗಲೇ ಅವರು ತಮ್ಮ ವಿದ್ಯಾಭ್ಯಾಸದ ದಿನಗಳನ್ನ ಮೆಲುಕು ಹಾಕಿ ಕಷ್ಟದ ದಿಗಳನ್ನು ಸ್ಮರಿಸಿಕೊಂಡಿದ್ದಾರೆ. ಇವರಂತೆ ಎಷ್ಟೊ ವಿದ್ಯಾರ್ಥಿಗಳು ಕಷ್ಟದ ದಿನಗಳನ್ನು ಎದುರಿಸುತ್ತಿದ್ಧಾರೆ. ಅವರು ನಮ್ಮ ಒಕ್ಕಲಿಗ ಸಮುದಾಯ ಅಥವಾ ನನ್ನನ್ನ ಸಂಪರ್ಕಿಸಿದರೆ ಅವರಿಗೆ ಸಹಾಯ ಮಾಡೋದಾಗಿ ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಹಿಂದೆ ಜಿಲ್ಲಾಧಿಕಾರಿ ಆಗಿದ್ದ ಬಿ.ಕೆ.ರವಿ ಹಲವರಿಗೆ ಸ್ಫೂರ್ತಿ ಆಗಿದ್ದಾರೆ. ಜಿಲ್ಲೆಯ ಕೆ.ಆರ್.ನಂದಿನಿ ದೇಶಕ್ಕೆ ಅಗ್ರಸ್ಥಾನ ಪಡೆದವರು. ಛಲ, ದಾಹ ಇದ್ದ ಕಾರಣ ಈ ಸಾಧನೆ ಮೂಡಿಬಂದಿದೆ. ಉತ್ತಮ ಅಧಿಕಾರಿಗಳಾಗಿ ಸಮಾಜಕ್ಕೆ ಕೊಡುಗೆ ನೀಡಿ ಎಂದು ಆಶಿಸಿದರು.

ರಾಜ್ಯದಲ್ಲಿ ೨೬ ಮಂದಿ ಯುಪಿಎಸ್ಸಿಯಲ್ಲಿ ರ್ಯಾಂಕ್ ಬಂದಿದ್ದಾರೆ. ಅದ್ರಲ್ಲಿ ಕೋಲಾರದ ಐವರು ರ್ಯಾಂಕ್ ಗಳಿಸಿದ್ದಾರೆ. ಅದರಲ್ಲೂ ಒಕ್ಕಲಿಗ ಸಮುದಾಯದ ನಾಲ್ವರು ರ್ಯಾಂಕ್ ಬಂದಿರುವುದು ಇಡೀ ಸಮಾಜಕ್ಕೆ ತಂದ ಗೌರವ. ವಿದ್ಯಾಭ್ಯಾಸ ಹಸಿವು ನಮ್ಮ ಮುಂದೆ ಬಂದಾಗ ಇಂತಹ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ತಮಿಳುನಾಡು ಸರ್ಕಾರದ ಮುಖ್ಯಮಂತ್ರಿಗಳು ಯುಪಿಎಸ್ಸಿಯಲ್ಲಿ ಪಾಸದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವಿರಿಗೆ ಶುಭ ಕೋರಿರುವ ವಿಚಾರ ನನ್ನ ಗಮನಕ್ಕೆ ನಮ್ಮ ಯುವಕರ ತಂದಿದ್ದಾರೆ. ಕೂಡಲೇ ರಾಜ್ಯದ ಮುಖ್ಯಮಂತ್ರಿ-ಡಿಸಿಎA ಅವರ ಗಮನಕ್ಕೆ ತಂದು ಅವರನ್ನು ಅಭಿನಂದಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಫರ್ಸ್ಟ್ ಸರ್ಕಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಂಬರೀಷ್, ಫರ್ಸ್ಟ್ ಸರ್ಕಲ್ ಅನ್ನು ಹೊರ ರಾಜ್ಯಗಳಿಗೂ ವಿಸ್ತರಿಸುತ್ತಿದ್ದೇವೆ. ಕೊಯಮತ್ತೂರು, ಕುಪ್ಪಂನಲ್ಲಿ ಸ್ಥಾಪಿಸಲಾಗುತ್ತಿದೆ. ಬಿಸಿನೆಸ್, ಸಂಪರ್ಕ ಹೆಚ್ಚುತ್ತಿದೆ. ನಾವು ಬೆಳೆದು ನಮ್ಮವರನ್ನು ಬೆಳೆಸಬೇಕಿದೆ? ಎಂದರು.

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ.ಶಂಕರಪ್ಪ, ರೈತಾಪಿ ವರ್ಗದ ಮಕ್ಕಳು ಯುಪಿಎಸ್ಸಿಯಲ್ಲಿ ಸಾಧನೆ ಮಾಡುತ್ತಿದ್ದಾರೆ. ಈಗ ಎಲ್ಲವೂ ಬಿಸಿನೆಸ್ ಆಗಿದೆ. ಪೋಡಿ ಮಾಡಿಸಿಕೊಳ್ಳಲು ಅಧಿಕಾರಿಗಳಿಗೆ ಭಾಗ ಕೊಡಬೇಕಾದ ಪರಿಸ್ಥಿತಿ ಇದೆ. ಜನರ ಕಷ್ಟ ಅರಿತು ಕೆಲಸ ಮಾಡಬೇಕು. ಬಿ.ಕೆ.ರವಿ ಅವರಂಥವರನ್ನು ನೆನಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಫರ್ಸ್ಟ್ ಸರ್ಕಲ್ನ ಮಾಗೇರಿ ನಾರಾಯಣಸ್ವಾಮಿ ಸ್ವಾಗತಿಸಿ ಮಾತನಾಡಿ, ಯುಪಿಎಸ್ಸಿ ಆಕಾಂಕ್ಷಿಗಳಿಗೆ ಒಕ್ಕಲಿಗರ ಸಂಘದಿAದ ವಿವಿಧ ರೀತಿಯಲ್ಲಿ ಸಹಕಾರ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಮಧು ಪೋಷಕರಾದ ಆನಂದ್ ಗೌಡ ಹಾಗೂ ತಾಯಿ ಸುಶೀಲಮ್ಮ, ವರುಣ್ ಗೌಡ ಪೋಷಕರಾದ ಪ್ರಕಾಶ್ ಆರ್. ಹಾಗೂ ಎಂ.ಪ್ರೇಮಾ, ಉಲ್ಲಾಸ್ ಪೋಷಕರಾದ ಎಂ.ಎಚ್.ಶ್ರೀನಿವಾಸ್ ಮತ್ತು ಸುಜಾತಾ, ಸಾಗರ್ ಪೋಷಕರಾದ ಅಶ್ವಥಪ್ಪ ಹಾಗೂ ಸುಶೀಲಮ್ಮ ಭಾಗವಹಿಸಿದ್ದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ರಮೇಶ್, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಒಲಿವಿಯಾ ಹೋಟೆಲ್ನ ಓಂಪ್ರಕಾಶ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲ್, ಬಣಕನಹಳ್ಳಿ ನಟರಾಜ್, ಸೀತಿಹೊಸೂರು ಮುರಳಿಗೌಡ, ಲಕ್ಷಣಗೌಡ, ಮುರಳಿಗೌಡ, ದಿಂಬಾಲ್ ಅಶೋಕ ಫರ್ಸ್ಟ್ ಸರ್ಕಲ್ ಪದಾಧಿಕಾರಿಗಳು, ಸಮುದಾಯದ ಮುಖಂಡರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande