
ಗದಗ, 15 ಮಾರ್ಚ್ (ಹಿ.ಸ.)
ಆ್ಯಂಕರ್:- ಕುಟುಂಬದೊಳಗಿನ ಸಣ್ಣ ವಿಚಾರವೇ ದೊಡ್ಡ ದುರಂತಕ್ಕೆ ಕಾರಣವಾದ ಘಟನೆ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆದಿದೆ. ಮಗಳ ಮದುವೆ ವಿಚಾರವಾಗಿ ಮೂಡಿದ ಅಣ್ಣತಮ್ಮಂದಿರ ನಡುವಿನ ವೈಮನಸ್ಸು ಕೊನೆಗೆ ಹಲ್ಲೆ ಹಾಗೂ ಸಾವಿನ ದುರಂತಕ್ಕೆ ತಿರುಗಿದೆ. ಸುಮಾರು 15 ರಿಂದ 16 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಕೊನೆಗೂ ಸಾವನ್ನಪ್ಪಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಮೃತ ವ್ಯಕ್ತಿಯನ್ನು ಲಕ್ಕುಂಡಿ ಗ್ರಾಮದ ನಿವಾಸಿ ಗಿರೀಶಪ್ಪ ಆಲೂರು ಎಂದು ಗುರುತಿಸಲಾಗಿದೆ. ತಮ್ಮಂದಿರಾದ ಶಿವಕುಮಾರ್ ಮತ್ತು ಈರಪ್ಪ ಅವರಿಂದ ನಡೆದ ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗಿರೀಶಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಇಂದು ಮೃತಪಟ್ಟಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಫೆಬ್ರವರಿ 27ರಂದು ನಡೆದಿದ್ದ ಗಲಾಟೆ
ಘಟನೆಯ ಹಿನ್ನೆಲೆ ಫೆಬ್ರವರಿ 27ರಂದು ನಡೆದ ಗಲಾಟೆಯಾಗಿದೆ. ಗಿರೀಶಪ್ಪ ಹಾಗೂ ಅವರ ಸಹೋದರರಾದ ಶಿವಕುಮಾರ್ ಮತ್ತು ಈರಪ್ಪ ನಡುವೆ ಮಗಳ ಮದುವೆ ವಿಚಾರವಾಗಿ ವಾಗ್ವಾದ ಆರಂಭಗೊಂಡಿತ್ತು. ಈ ವೇಳೆ ಮಾತಿನ ಚಕಮಕಿ ತೀವ್ರವಾಗಿ ಹಲ್ಲೆಗೆ ತಿರುಗಿದರೆಂದು ಆರೋಪಿಸಲಾಗಿದೆ.
ಕುಟುಂಬದವರ ಹೇಳಿಕೆಯ ಪ್ರಕಾರ, ಶಿವಕುಮಾರ್ ಹಾಗೂ ಈರಪ್ಪ ಸೇರಿ ಗಿರೀಶಪ್ಪ ಮತ್ತು ಅವರ ಪತ್ನಿಗೆ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಲ್ಲಿ ಗಿರೀಶಪ್ಪ ಅವರ ಕೈ, ಭುಜ ಮತ್ತು ಬೆನ್ನಿನ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸುಮಾರು ಎರಡು ವಾರಗಳ ಕಾಲ ಚಿಕಿತ್ಸೆ ನೀಡಿದರೂ ಅವರು ಗುಣಮುಖರಾಗದೆ ಇಂದು ಮೃತಪಟ್ಟಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಮಗಳ ಮದುವೆಯೇ ವಿವಾದದ ಮೂಲ
ಗಿರೀಶಪ್ಪ, ಈರಪ್ಪ ಮತ್ತು ಶಿವಕುಮಾರ್ ಮೂವರು ಸಹೋದರರು. ಇವರ ನಡುವೆ ಇಷ್ಟು ವರ್ಷಗಳ ಕಾಲ ಅನ್ಯೋನ್ಯ ಸಂಬಂಧವಿದ್ದರೂ, ಗಿರೀಶಪ್ಪ ಅವರ ಕಿರಿಯ ಮಗಳ ಮದುವೆ ವಿಚಾರವೇ ಈ ಗಲಾಟೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಗಿರೀಶಪ್ಪ ಅವರ ಕಿರಿಯ ಮಗಳು ಪವಿತ್ರಾ ಅವರ ಮದುವೆಯನ್ನು ಸರ್ಕಾರಿ ಉದ್ಯೋಗದಲ್ಲಿರುವ ಹುಡುಗನಿಗೆ ಕೊಡಬೇಕು ಎಂದು ತಮ್ಮಂದಿರು ಒತ್ತಾಯಿಸುತ್ತಿದ್ದರು. ಆದರೆ ಗಿರೀಶಪ್ಪ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಸರ್ಕಾರಿ ಉದ್ಯೋಗದಲ್ಲಿರುವವರು ಕೆಲಸದ ಕಾರಣದಿಂದ ಮನೆತನದ ಕಡೆ ಹೆಚ್ಚಿನ ಗಮನ ಕೊಡುವುದಿಲ್ಲ ಎಂದು ವಾದ ಮಂಡಿಸಿದ್ದರು.
ಈ ಕಾರಣದಿಂದ ಅವರು ಸಂಬಂಧಿಕರಲ್ಲೇ ಒಬ್ಬ ಯುವಕನನ್ನು ಆಯ್ಕೆ ಮಾಡಿ ಫೆಬ್ರವರಿ 20ರಂದು ಮದುವೆ ಮಾಡಿಕೊಟ್ಟಿದ್ದರು. ಈ ವಿಚಾರದಿಂದ ಕೋಪಗೊಂಡಿದ್ದ ಸಹೋದರರು ಕುಟುಂಬದಿಂದ ದೂರವಾಗಿದ್ದರು ಎಂದು ಹೇಳಲಾಗುತ್ತಿದೆ.
ಆಶೀರ್ವಾದ ಪಡೆಯಲು ಹೋದ ವೇಳೆ ಗಲಾಟೆ
ಮದುವೆಯಾದ ನಂತರ ಪವಿತ್ರಾ ತಮ್ಮ ಪತಿಯೊಂದಿಗೆ ಊರಿಗೆ ಬಂದಿದ್ದು, ಅಜ್ಜನ ಆಶೀರ್ವಾದ ಪಡೆಯಲು ಚಿಕ್ಕಪ್ಪ ಶಿವಕುಮಾರ್ ಮನೆಗೆ ತೆರಳಿದ್ದರು. ಈ ವೇಳೆ ಮದುವೆ ವಿಷಯವಾಗಿ ನಮಗೆ ಸಲಹೆ ಕೇಳಲಿಲ್ಲ, ಮದುವೆಗೆ ನಮ್ಮನ್ನು ಕರೆಯಲಿಲ್ಲ ಎಂದು ಆರೋಪಿಸಿ ಶಿವಕುಮಾರ್ ಹಾಗೂ ಈರಪ್ಪ ಗಲಾಟೆ ಆರಂಭಿಸಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಈ ವೇಳೆ ನಡೆದ ವಾಗ್ವಾದ ಹಲ್ಲೆಗೆ ತಿರುಗಿ, ಗಿರೀಶಪ್ಪ ಮೇಲೆ ಹಲ್ಲೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡ ಅವರು ಆಸ್ಪತ್ರೆಗೆ ದಾಖಲೆಯಾಗಿದ್ದರು. ಹಲ್ಲೆಯಿಂದಲೇ ಸಾವು ಎಂದು ಕುಟುಂಬದ ಆರೋಪ
ಮೃತ ಗಿರೀಶಪ್ಪ ಅವರ ಪತ್ನಿ ಲಕ್ಷ್ಮೀ, ಪುತ್ರಿಯರಾದ ಪವಿತ್ರಾ ಮತ್ತು ಯಶೋದಾ ಅವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
“ನಮ್ಮ ಕುಟುಂಬದ ಮೇಲೆ ಮನಬಂದಂತೆ ಹಲ್ಲೆ ಮಾಡಲಾಗಿದೆ. ಅದರ ಪರಿಣಾಮವೇ ನನ್ನ ಪತಿ ಮೃತಪಟ್ಟಿದ್ದಾರೆ. ನಮಗೆ ನ್ಯಾಯ ದೊರಕಬೇಕು. ಪ್ರಕರಣದಲ್ಲಿ ಭಾಗಿಯಾಗಿರುವ ಶಿವಕುಮಾರ್, ರತ್ನವ್ವ, ಈರಣ್ಣ ಮತ್ತು ಗೀತಾ ಅವರನ್ನು ಬಂಧಿಸಬೇಕು” ಎಂದು ಕುಟುಂಬದವರು ಆಗ್ರಹಿಸಿದ್ದಾರೆ.
ಲಿವರ್ ಸಮಸ್ಯೆ ಇದ್ದಿತ್ತೆಂಬ ಮಾತು
ಇದೇ ವೇಳೆ ಕಳೆದ 15–20 ವರ್ಷಗಳಿಂದ ಗಿರೀಶಪ್ಪ ಅವರಿಗೆ ಮದ್ಯಪಾನದ ಚಟವಿದ್ದು, ಲಿವರ್ ಸಮಸ್ಯೆಯೂ ಇತ್ತು ಎಂಬ ಮಾತುಗಳು ಗ್ರಾಮದಲ್ಲಿ ಕೇಳಿಬರುತ್ತಿವೆ. ಇದರಿಂದಲೇ ಅವರು ಮೃತಪಟ್ಟಿರಬಹುದೆಂದು ಕೆಲವರು ಹೇಳುತ್ತಿದ್ದಾರೆ.
ಆದರೆ ಕುಟುಂಬದವರು ಈ ವಾದವನ್ನು ತಳ್ಳಿ ಹಾಕಿದ್ದು, ಹಲ್ಲೆಗೊಳಗಾದ ನಂತರವೇ ಗಿರೀಶಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಹೀಗಾಗಿ ಹಲ್ಲೆಯ ಪರಿಣಾಮವೇ ಸಾವಿಗೆ ಕಾರಣವಾಗಿದೆ ಎಂದು ಅವರು ವಾದಿಸಿದ್ದಾರೆ.
ಪೊಲೀಸರ ತನಿಖೆ ಮುಂದುವರಿಕೆ
ಈ ಘಟನೆ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP