
ಕೋಲಾರ, ೧೩ ಮಾರ್ಚ್ (ಹಿ.ಸ):
ಆ್ಯಂಕರ್ : ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ರಕ್ಷಿಸುವಲ್ಲಿ ಪವಿತ್ರವಾದ ಸಂಸತ್ತು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಸಂಸತ್ತಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಆತಂಕಕಾರಿಯಾಗಿವೆ. ವಿಶೇಷವಾಗಿ, ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಅವರನ್ನು ಸದನದಿಂದ ಅಮಾನತುಗೊಳಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವೆಂದು ಕರ್ನಾಟಕ ದಲಿತ ರೈತ ಸೇನೆ ಆಕ್ರೋಶ ವ್ಯಕ್ತಪಡಿಸಿದರು.
ಬಂಗಾರಪೇಟೆ ತಹಸೀಲ್ದಾರ್ ಸುಜಾತ ಅವರ ಮುಖಾಂತರ ರಾಷ್ಟçಪತಿಗಳಿಗೆ ಮನವಿ ನೀಡಿ ಮಾತನಾಡಿದ ಹುಣಸನಹಳ್ಳಿ ಎನ್.ವೆಂಕಟೇಶ್ ಅವರು, ಸಂಸದ ರಾಘವ್ ಚಡ್ಡಾ ಅವರು ಯುವ ಸಂಸದರಾಗಿ ಸಾರ್ವಜನಿಕರ, ಅದರಲ್ಲೂ ಬಡವರ, ದಲಿತರ ಮತ್ತು ರೈತರ ಪರವಾಗಿ ಸಂಸತ್ತಿನಲ್ಲಿ ಪ್ರಬಲವಾಗಿ ಧ್ವನಿ ಎತ್ತುತ್ತಿದ್ದರು. ಸರ್ಕಾರದ ನೀತಿಗಳ ಬಗ್ಗೆ ತಾರ್ಕಿಕವಾಗಿ ವಿಮರ್ಶೆ ಮಾಡುವುದು ಪ್ರತಿಯೊಬ್ಬ ಜನಪ್ರತಿನಿಧಿಯ ಸಾಂವಿಧಾನಿಕ ಹಕ್ಕು ಆಗಿದೆ. ಅಂತಹ ಧ್ವನಿಯನ್ನು ಅಡಗಿಸುವ ಉದ್ದೇಶದಿಂದ ಅಮಾನತು ಕ್ರಮ ಕೈಗೊಳ್ಳುವುದು ಸರಿಯಲ್ಲ. ಈ ಕ್ರಮವು ಕೇವಲ ಒಬ್ಬ ವ್ಯಕ್ತಿಯ ವಿರುದ್ಧವಲ್ಲ, ಬದಲಿಗೆ ಅವರು ಪ್ರತಿನಿಧಿಸುವ ಲಕ್ಷಾಂತರ ಜನರ ಆಶೋತ್ತರಗಳನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.
ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷದ ಧ್ವನಿಯು ಆಡಳಿತ ಪಕ್ಷದ ಲೋಪದೋಷಗಳನ್ನು ತಿದ್ದುವ ಕೈಗನ್ನಡಿಯಂತಿರಬೇಕು. ಅಂತಹ ಧ್ವನಿಗಳು ಸದನದ ಒಳಗಡೆ ಕೇಳಿಬಂದಾಗ ಮಾತ್ರ ಸಂವಿಧಾನದ ಆಶಯಗಳು ಈಡೇರಲು ಸಾಧ್ಯ. ಆದ್ದರಿಂದ, ದೇಶದ ಪ್ರಥಮ ಪ್ರಜೆಗಳಾದ ತಾವು ಈ ವಿಷಯದಲ್ಲಿ ತುರ್ತಾಗಿ ಮಧ್ಯಪ್ರವೇಶಿಸಬೇಕು. ಸಂಸದ ರಾಘವ್ ಚಡ್ಡಾ ಅವರ ಅಮಾನತನ್ನು ತಕ್ಷಣವೇ ರದ್ದುಗೊಳಿಸಬೇಕು. ಸಂಸತ್ತಿನಲ್ಲಿ ವಿರೋಧ ಪಕ್ಷದ ಸದಸ್ಯರಿಗೆ ಮುಕ್ತವಾಗಿ ಮಾತನಾಡಲು ಮತ್ತು ಜನರ ಸಮಸ್ಯೆಗಳನ್ನು ಮಂಡಿಸಲು ಅವಕಾಶ ನೀಡಬೇಕು. ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವಂತಹ ಯಾವುದೇ ಏಕಪಕ್ಷೀಯ ತೀರ್ಮಾನಗಳನ್ನು ತಡೆಯಬೇಕು. ನ್ಯಾಯ ಮತ್ತು ಸಮಾನತೆಯ ಪರವಾಗಿ ಹೋರಾಡುವ ನಮ್ಮ ಸಂಘಟನೆಯು ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರವೀಣ್ಸಿದ್ದಾರ್ಥ, ಹರ್ಲಹಳ್ಳಿ ಶಿವು ಹಾಗೂ ಮುಂತಾದವರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್