ಪಾದಚಾರಿ ಮಾರ್ಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ನಾಗರೀಕರ ಪ್ರತಿರೋಧ
ಅಂಬೇಡ್ಕರ್ ಉದ್ಯಾನವನದ ಮುಂದೆ ಫುಟ್ಪಾತ್ನಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ನಾಗರೀಕರ ಪ್ರತಿರೋಧ
ಕೋಲಾರ ನಗರದ ಟೇಕಲ್ ರಸ್ತೆಯ ಡಾ.ಬಿ.ಆರ್. ಅಂಬೇಡ್ಕರ್ ಉದ್ಯಾನವನದ ಮುಂದೆ ಪಾದಚಾರಿಗಳ ರಸ್ತೆಯಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣವನ್ನು ನಾಗರೀಕರು ವಿರೋಧಿಸಿದ್ದಾರೆ.


ಕೋಲಾರ, ೧೩ ಮಾರ್ಚ್ (ಹಿ.ಸ)

ಆಂಕರ್ : ನಗರದ ಟೇಕಲ್ ರಸ್ತೆಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಉದ್ಯಾನವನದ ಮುಂದೆ ಪಾದಚಾರಿಗಳ ರಸ್ತೆಯಲ್ಲಿ ನಗರಸಭೆ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡುವುದಕ್ಕೆ ನಾಗರೀಕರು ತೀವ್ರ ಪ್ರತಿರೋಧ ಒಡ್ಡಿದ್ದಾರೆ. ಪಾದಚಾರಿಗಳ ರಸ್ತೆಯಲ್ಲಿ ಮಳಿಗೆಗಳನ್ನು ನಿರ್ಮಾಣ ಮಾಡುವುದರಿಂದ ರಸ್ತೆ ಕಿರಿದಾಗಲಿದೆ. ಅಲ್ಲದೆ ಉದ್ಯಾನವನದ ಅಸ್ಥಿತತ್ವಕ್ಕೆ ಧಕ್ಕೆ ಆಗಲಿದೆ ಎಂದು ನಾಗರೀಕರು ಆತಂಕ ವ್ಯಕ್ತಪಡಿಸಿದ್ದಾರೆ.

ಎಲ್ಲ ನಗರಗಳಲ್ಲಿ ಸಾಮಾನ್ಯವಾಗಿ ಪಾದಚಾರಿಗಳ ರಸ್ತೆಯ ಒತ್ತುವರಿಯನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಆದರೆ ಕೋಲಾರ ನಗರಸಭೆಗೆ ದೂರದೃಷ್ಠಿ ಹಾಗೂ ಮುಂದಾಲೋಚನೆ ಇಲ್ಲ. ಪಾದಚಾರಿಗಳ ರಸ್ತೆ ಮೇಲೆ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವುದು ಕೋಲಾರ ನಗರಸಭೆಯ ಮಹತ್ವಾಕಾಂಕ್ಷೆಯ ಯೋಜನೆ ಆಗಿದೆ.

ಕೋಲಾರ ನಗರಸಭೆಗೆ ನಾಗರೀಕ ಪ್ರಜ್ಞೆ ಹಾಗೂ ದೂರದೃಷ್ಠಿ ಇಲ್ಲವಾಗಿದೆ. ಕೋಲಾರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪಶ್ಚಿಮಕ್ಕೆ ಸೇರಿರುವ ಪಾದಚಾರಿಗಳ ರಸ್ತೆಯಲ್ಲಿ ೧೯೯೬ರಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಲಕ್ಷಾಂತರ ರೂಪಾಯಿಗೆ ಹರಾಜು ಹಾಕಲಾಗಿದೆ. ಪಾದಚಾರಿಗಳ ರಸ್ತೆಯ ಮೇಲೆ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವುದು ಕರ್ನಾಟಕ ಪುರಸಭೆ ಕಾಯ್ದೆಗೆ ವಿರುದ್ಧವಾಗಿದೆ. ಆದರೆ ಕಾಯ್ದೆಯನ್ನು ಉಲ್ಲಂಘಿಸಿ ಪಾದಚಾರಿಗಳ ರಸ್ತೆಯ ಮೇಲೆ ಅಂಗಡಿಗಳನ್ನು ಕಟ್ಟಿ ರಸ್ತೆಯನ್ನು ಕಿರಿದು ಮಾಡಲಾಗಿದೆ.

ಮುಂದುವರೆದ ಭಾಗವಾಗಿ ಸರ್ಕಾರಿ ಬಾಲಕರ ಕಾಲೇಜಿನ ಉತ್ತರಕ್ಕೆ ಇರುವ ಎರಡು ಪಾದಚಾರಿ ರಸ್ತೆಗಳನ್ನು ಒತ್ತುವರಿ ಮಾಡಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಸರ್ಕಾರಿ ಕಾಲೇಜಿನ ಕಾಂಪೌಂಡ್ ಕೆಡವಿ ರಸ್ತೆಯ ಮೇಲೆ ವಿದ್ಯಾರ್ಥಿಗಳಿಗಾಗಿ ಜ್ಞಾನ ಕುಟೀರಗಳನ್ನು ನಿರ್ಮಿಸಲಾಗಿದೆ. ಇದು ಈ ಹಿಂದೆ ಕೋಲಾರದ ಎಸ್ಪಿ ಆಗಿದ್ದ ಡಿ.ದೇವರಾಜ್ ಅವರ ಕನಸಿನ ಯೋಜನೆ ಆಗಿದೆ.

ಈ ಜ್ಞಾನ ಕುಟೀರಗಳತ್ತು ವಿದ್ಯಾರ್ಥಿಗಳು ಸುಳಿಯುವುದಿಲ್ಲ. ರಾತ್ರಿಯ ವೇಳೆ ಕುಡುಕರ ತಾಣವಾಗಿದೆ. ಜ್ಞಾನ ಕುಟೀರಗಳಿಗೆ ಎದುರಿಗೆ ಇದ್ದ ಪಾದಚಾರಿಗಳ ರಸ್ತೆಯಲ್ಲಿ ನಗರಸಭೆ ಫುಡ್ ಕೋರ್ಟ್ ನಿರ್ಮಿಸಿದೆ. ಎರಡೂ ಪಾದಚಾರಿ ರಸ್ತೆಗಳಲ್ಲಿ ಕಟ್ಟಡ ನಿರ್ಮಿಸಿರುವ ಕಾರಣ ಇಲ್ಲಿ ವಾಹನ ನಿಲುಗಡೆಗೆ ನಾಗರೀಕರು ಪರದಾಡಬೇಕಾಗಿದೆ. ಫುಡ್ಕೋರ್ಟ್ ಮುಂಭಾಗ ವಾಹನಗಳನ್ನು ನಿಲ್ಲಿಸಿದರೆ ಪೊಲೀಸರು ದಂಡ ಹಾಕುತ್ತಾರೆ.

ನಗರಸಭೆಯ ತಪ್ಪಿಗೆ ನಾಗರೀಕರು ಕಿರಿಕಿರಿ ಅನುಭವಿಸಬೇಕಾಗಿದೆ. ಜೊತೆಗೆ ನೀವು ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿದ್ದೀರಿ ಎಂದು ಸಂಚಾರಿ ಪೊಲೀಸರು ದಂಡ ಹಾಕುತ್ತಾರೆ. ಹಬ್ಬ ಹರಿದಿನಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡಲು ನಾಗರೀಕರು ಪರದಾಡಬೇಕಾಗಿದೆ. ಈಗ ಟೇಕಲ್ ರಸ್ತೆಯ ಅಂಬೇಡ್ಕರ್ ಪಾರ್ಕಿನ ಮುಂದೆ ಇರುವ ಪಾದಚಾರಿಗಳ ರಸ್ತೆಯ ಮೇಲೆ ನಗರಸಭೆಯ ಕಣ್ಣು ಬಿದ್ದಿದೆ. ಪಾದಚಾರಿಗಳ ರಸ್ತೆಯ ಮೇಲೆ ಅನಧಿಕೃತವಾಗಿ ಬೀದಿ ಬದಿ ವ್ಯಾಪಾರಿಗಳು ಅಂಗಡಿಗಳನ್ನು ತೆರೆದಿದ್ದಾರೆ. ಸುಗಮ ಸಂಚಾರಕ್ಕೆ ಕಿರಿಕಿರಿ ಆಗುತ್ತದೆ ಎಂಬ ದೂರುಗಳ ಬಗ್ಗೆ ನಗರಸಭೆ ನಿರ್ಲಕ್ಷ್ಯ ಮಾಡಿದೆ. ಮೂರು ಪಾದಚಾರಿ ರಸ್ತೆಗಳನ್ನು ನುಂಗಿದ ಮೇಲೆ ಈಗ ನಾಗರೀಕರ ಪ್ರತಿರೋಧದ ನಡುವೆಯೂ ಅಂಗಡಿಗಳನ್ನು ನಿರ್ಮಿಸಲು ನಗರಸಭೆ ಮುಂದಾಗಿದೆ. ಯಾವುದೇ ದೂರ ದೃಷ್ಠೀ ಮತ್ತು ಯೋಜನೆ ಹೊಂದಿರು ಸ್ಥಳೀಯ ಸಂಸ್ಥೆ ಪಾದಚಾರಿಗಳ ರಸ್ತೆಯನ್ನು ಉಳಿಸುತ್ತದೆ.

ಆದರೆ ಕೋಲಾರ ನಗರಸಭೆಗೆ ಮುಂದಾಲೋಚನೇಯೇ ಇಲ್ಲ. ೯೦ರ ದಶಕದಲ್ಲಿ ಕೋಲಾರ ಬಸ್ ನಿಲ್ದಾಣದ ಸಮೀಪ ವಿಜಯಬ್ಯಾಂಕ್ ಎದುರು ಪಾದಚಾರಿಗಳ ರಸ್ತೆಯಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು ನಗರಸಭೆ ಮುಂದಾಗಿತ್ತು. ಆದರೆ ನಾಗರೀಕರು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ರಿಟ್ ಅರ್ಜಿ ಸಲ್ಲಿಸಿದ ಕಾರಣ ಯೋಜನೆಯನ್ನು ಕೈ ಬಿಡಲಾಗಿತ್ತು. ಈಗ ಟೇಕಲ್ ರಸ್ತೆಯ ಪಾದಚಾರಿಗಳ ರಸ್ತೆಯ ಮೇಲೆ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ವ್ಯಾಪಕವಾದ ಪ್ರತಿರೋದ ಎದುರಾಗಿದೆ. ಆದರೆ ಆಡಳಿತ ನಡೆಸುವವರಿಗೆ ನಾಗರೀಕರ ಪ್ರತಿರೋಧ ತಲುಪಿಲ್ಲ.

ಆಗ್ರೋ ಇಂಡಸ್ಟ್ರೀಸ್ ಕಾರ್ಪೋರೇಷನ್ಗೆ ಸೇರಿದ ಜಮೀನನ್ನು ಬಾಲಭವನ, ಮಕ್ಕಳ ಆಟದ ಮೈದಾನ ಹಾಗೂ ಲೈಬ್ರರಿ ನಿರ್ಮಿಸಲು ಉಚಿತವಾಗಿ ನಗರಸಭೆಗೆ ನೀಡಲಾಗಿದೆ. ಉದ್ದೇಶಿತ ಯೋಜನೆಗೆ ನಗರಸಭೆ ಜಮೀನನ್ನು ಬಳಕೆ ಮಾಡಿಲ್ಲ. ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ತೋರಿದ ಆಸಕ್ತಿಯನ್ನು ಸಾರ್ವಜನಿಕ ಉದ್ಯನ ಅಭಿವೃದ್ಧಿಗೆ ನಗರಸಭೆ ಆಸಕ್ತಿ ತೋರುವುದಿಲ್ಲ.

ನಗರದ ಪ್ರತಿಷ್ಟಿತ ಅಂಬೇಡ್ಕರ್ ಉದ್ಯಾನವನದ ಮುಂಭಾಗ ವಾಣಿಜ್ಯ ಮಳಿಗೆ ನಿರ್ಮಿಸುವ ಮೂಲಕ ಅದರ ಅಂದ ಹಾಳು ಮಾಡಿ ಅಲ್ಲಿರುವ ಯೋಧರ ಸ್ಮಾರಕವೂ ಕಾಣದಂತೆ ಮಾಡುವ ಪ್ರಯತ್ನ ನಡೆಸಿರುವ ನಗರಸಭೆ ನಿರ್ಧಾರವನ್ನು ಮಾಜಿ ಸಂಸದ ಎಸ್.ಮುನಿಸ್ವಾಮಿ ತೀವ್ರವಾಗಿ ವಿರೋಧಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಭಿವೃದ್ದಿಯಲ್ಲಿ ಮರೀಚಿಕೆಯಾಗಿರುವ ಕೋಲಾರ ನಗರದಲ್ಲಿ ಇರುವುದರಲ್ಲೊಂದು ಉತ್ತಮ ಉದ್ಯಾನವನ ನಗರದ ಜಯನಗರ ಮುಖ್ಯರಸ್ತೆಯಲ್ಲಿ ನಿರ್ಮಿಸಿದ್ದು, ಅದಕ್ಕೆ ಅಂಬೇಡ್ಕರ್ ಉದ್ಯಾನವನ ಎಂದು ಹೆಸರಿಡಲಾಗಿದೆ. ಅದರ ಒಳ ಭಾಗದಲ್ಲಿ ಭಾರತೀಯ ಸೇನೆಯಲ್ಲಿ ವೈರಿಗಳ ವಿರುದ್ದಹೋರಾಡಿ ಪ್ರಾಣಾರ್ಪಣೆ ಮಾಡಿದ ಯೋಧರ ಸ್ಮರಣಾರ್ಥ ಯೋಧರ ಸ್ಮಾರಕವನ್ನು ಅತ್ಯಂತ ಸುಂದರವಾಗಿ ನಿರ್ಮಿಸಲಾಗಿದೆ ಎಂದು ತಿಳಿಸಿದ್ದಾರೆ.

ಇಂತಹ ಉದ್ಯಾನವನದ ಮುಂಭಾಗ ಅಂಗಡಿ ಮಳಿಗೆಗಳನ್ನು ನಿರ್ಮಿಸಿ ಉದ್ಯಾನವನ ಹಾಗೂ ಯೋಧರ ಸ್ಮಾರಕ ಕಾಣದಂತೆ ಮಾಡುವ ಷಡ್ಯಂತ್ರ ನಡೆದಿದ್ದು, ಇದು ಯಾರೋ ಗುತ್ತಿಗೆದಾರರನ್ನು ಉಳಿಸುವ ಕೆಲಸವಾಗಿದೆ ಎಂದು ಆರೋಪಿಸಿದ್ದಾರೆ.

ಈ ಉದ್ಯಾನವನದ ಜಾಗ ಆಗ್ರೋ ಸಂಸ್ಥೆಗೆ ಸೇರಿದ್ದು, ಆರೇಳು ವರ್ಷಗಳ ಹಿಂದೆ ಕೃಷಿ ಇಲಾಖೆಗೆ ಪಡೆದುಕೊಂಡು ಈ ಜಾಗದಲ್ಲಿ ಮಕ್ಕಳ ಆಟದ ಮೈದಾನ, ಉದ್ಯಾನವನ, ಮತ್ಸಾಲಯ, ಬಾಲಭವನ, ಮಕ್ಕಳ ಗ್ರಂಥಾಲಯ ನಿರ್ಮಿಸುವ ಉದ್ದೇಶದಿಂದ ನಗರಸಭೆ ಸುಪರ್ದಿಗೆ ಪಡೆಯಲಾಗಿತ್ತು ಎಂದು ತಿಳಿಸಿದ್ದಾರೆ.

ಕಡೆಗೂ ತಾವು ಸಂಸದರಾಗಿದ್ದ ಅವಧಿಯಲ್ಲಿ ಸ್ಥಳೀಯ ನಗರಸಭೆ ಸದಸ್ಯ ಮುರಳಿಗೌಡ ಮತ್ತಿತರರ ಪ್ರಯತ್ನದಿಂದ ಇಲ್ಲೊಂದು ಸುಂದರ ಉದ್ಯಾನವನ ನಿರ್ಮಾಣಗೊಂಡಿತು. ನಂತರದ ದಿನಗಳಲ್ಲಿ ನಿವೃತ್ತ ಸೈನಿಕರ ಮನವಿಗೆ ಸ್ಪಂದಿಸಿ ಉದ್ಯಾನವನದ ಒಂದು ಭಾಗದಲ್ಲಿ ಅತ್ಯಂತ ಸುಂದರವಾಗಿ ಯೋಧರ ಸ್ಮಾರಕವನ್ನು ನಿರ್ಮಿಸಲಾಯಿತು ಎಂದು ಸ್ಮರಿಸಿದ್ದಾರೆ.

ಇದೇ ಜಾಗದಲ್ಲಿ ರೈಲ್ವೆ ಮಾರ್ಗ ಹಾದು ಹೋಗಲಿದ್ದು, ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಇಲ್ಲೊಂದು ಮೇಲ್ಸೇತುವೆ ಮಾರ್ಗ ಅಳವಡಿಕೆಗೆ ಎಸ್ಟಿಮೇಟ್ ಸಹಾ ಆಗಿದ್ದು, ಈ ಉದ್ಯಾನವನದ ಮುಂಭಾಗವೇ ರೈಲ್ವೆ ಮೇಲ್ಸೇತುವೆ ಹಾದು ಹೋಗುವುದರಿಂದ ಮುಂದಿನ ದಿನಗಳಲ್ಲಿ ಪಾರ್ಕಿಂಗ್ಗೂ ತೊಂದರೆ ತಪ್ಪಿದ್ದಲ್ಲ.

ಇಷ್ಟೆಲ್ಲಾ ಇದ್ದರೂ ನಗರಸಭೆಯ ಮೊಂಡುತನದಿAದಾಗಿ ಉದ್ಯಾನವನದ ಕಾಂಪೌ0ಡ್ ಬಳಿಯ ಚರಂಡಿ ಮೇಲೆ ಅಂಗಡಿ ಮಳಿಗೆಗಳನ್ನು ಕಟ್ಟಲು ಟೆಂಡರ್ ಕರೆದಿರುವುದು ಅವೈಜ್ಞಾನಿಕ ನಿರ್ಧಾರ ಎಂದು ಖಂಡಿಸಿರುವ ಅವರು ಪಾರ್ಕ್ ಮುಂದೆ ಅಂಗಡಿ ಮಳಿಗೆ ನಿರ್ಮಿಸುವ ನಿರ್ಧಾರ ಕೈಬಿಡಲು ಆಗ್ರಹಿಸಿದ್ದಾರೆ.

ಇದರ ಜತೆಗೆ ಸುಸ್ಥಿತಿಯಲ್ಲಿದ್ದ ಅತ್ಯಂತ ಪ್ರತಿಷ್ಟಿತ ಕೋಲಾರದ ಬಾಲಕರ ಕಾಲೇಜು ಕಟ್ಟಡವನ್ನು ನವೀಕರಿಸುವ ಬದಲಿಗೆ ಏಕಾಏಕಿ ನೆಲಸಮ ಮಾಡಿ ಅಲ್ಲಿ ಹೊಸ ಕಟ್ಟಡ ಕಟ್ಟಲು ಮುಂದಾಗಿದ್ದು, ಇದು ಜನರ ತೆರಿಗೆ ಹಣದ ದುರ್ಬಳಕೆಗೆ ಕಾರಣವಾಗಿದ್ದು, ಇದೂ ಸಹಾ ಗುತ್ತಿಗೆದಾರರಿಗೆ ಹಣ ಮಾಡಿಕೊಟ್ಟು, ಕೆಲವು ಜನಪ್ರತಿನಿಧಿಗಳ ಕಮಿಷನ್ ಜೇಬಿಗೆ ಇಳಿಸುವ ತಂತ್ರವಾಗಿದೆ ಎಂದು ಖಂಡಿಸಿದ್ದಾರೆ. ಇತ್ತೀಚೆಗೆ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಹೋಂಡಾ ಕಂಪನಿಯ ಸಿಎಸ್ಆರ್ ನಿಧಿಯಿಂದ ಸುಮಾರು ೧ ಕೋಟಿಗೂ ಹೆಚ್ಚು ಹಣದಿಂದ ನಿರ್ಮಿಸಲಾಗಿದ್ದ ಸುಸಜ್ಜಿತ ಸಭಾಂಗಣವನ್ನು ಹೊಸ ಕಟ್ಟಡ ಕಟ್ಟುವ ನೆಪವೊಡ್ಡಿ ನೆಲಸಮ ಮಾಡಲಾಯಿತು.

ಇರುವ ಸುಸಜ್ಜಿತ ಕಟ್ಟಡಗಳನ್ನು ಉಳಿಸದೇ ಕೇವಲ ಕಮಿಷನ್ ಆಸೆಗೆ ಈ ರೀತಿ ಸುಂದರ ಮತ್ತು ಸುಸಜ್ಜಿತ ಕಟ್ಟಡಗಳನ್ನು ನಾಶ ಮಾಡುತ್ತಿರುವ ಸ್ಥಳೀಯ ಜನಪ್ರತಿನಿಧಿಗಳ ವರ್ತನೆ ಖಂಡನೀಯ ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande