ಬಾಗಲಕೋಟೆ ಉಪಚುನಾವಣೆ: ಶಂಕುಸ್ಥಾಪನೆ ವೇದಿಕೆ ರಾಜಕೀಯ ‘ರಣಕಹಳೆ’ಗೆ ನಾಂದಿ
ವಿಶೇಷ ವರದಿ
ಬಾಗಲಕೋಟೆ ಉಪಚುನಾವಣೆ: ಶಂಕುಸ್ಥಾಪನೆ ವೇದಿಕೆ ರಾಜಕೀಯ ‘ರಣಕಹಳೆ’ಗೆ ನಾಂದಿ


ಬಾಗಲಕೋಟೆ, 13 ಮಾರ್ಚ್ (ಹಿ.ಸ.)

ಆ್ಯಂಕರ್ : ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯ ರಾಜಕೀಯ ವಾತಾವರಣ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಇದೇ ಹಿನ್ನೆಲೆಯಲ್ಲಿ ನಡೆಯಲಿರುವ ಸರ್ಕಾರಿ ಕಾರ್ಯಕ್ರಮ ರಾಜಕೀಯವಾಗಿ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ. ಮೇಲ್ನೋಟಕ್ಕೆ ಇದು ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮವಾಗಿದ್ದರೂ, ಇದೇ ವೇದಿಕೆಯಿಂದ ಉಪಚುನಾವಣೆಗೆ ಕಾಂಗ್ರೆಸ್ ಪರೋಕ್ಷವಾಗಿ ರಣಕಹಳೆ ಮೊಳಗಿಸುವ ಸಾಧ್ಯತೆಗಳಿವೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ.

ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ

ಹಾಗೂ ಉಪ ಮುಖ್ಯಮಂತ್ರಿ ಆಗಮಿಸುತ್ತಿರುವುದರಿಂದ ಕ್ಷೇತ್ರದ ರಾಜಕೀಯ ಚಟುವಟಿಕೆಗಳಿಗೆ ಮತ್ತಷ್ಟು ಚೈತನ್ಯ ಸಿಕ್ಕಿದೆ. ವಿಶೇಷವಾಗಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರು, ಇದೇ ವೇದಿಕೆಯಿಂದ ಉಪಚುನಾವಣೆಯ ಅಭ್ಯರ್ಥಿ ಕುರಿತು ಸುಳಿವು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಅಭ್ಯರ್ಥಿ ಕುರಿತ ಕುತೂಹಲ

ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಈಗಾಗಲೇ ಕ್ಷೇತ್ರದಲ್ಲಿ ಚರ್ಚೆಯ ಕೇಂದ್ರ ಬದುವಾಗಿದೆ. ಪಕ್ಷದ ಹಲವು ಸ್ಥಳೀಯ ನಾಯಕರು, ಮಾಜಿ ಜನಪ್ರತಿನಿಧಿಗಳು ಹಾಗೂ ಸಂಘಟನಾ ಮುಖಂಡರ ಹೆಸರುಗಳು ಓಡಾಡುತ್ತಿವೆ. ಇದೇ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿ ತಮ್ಮ ಭಾಷಣದಲ್ಲಿ ಅಭ್ಯರ್ಥಿ ಆಯ್ಕೆ ಕುರಿತಾಗಿ ಪರೋಕ್ಷ ಸೂಚನೆ ನೀಡಬಹುದು ಎಂಬ ನಿರೀಕ್ಷೆ ಪಕ್ಷದೊಳಗೆ ವ್ಯಕ್ತವಾಗಿದೆ.

ಆದರೆ ಈ ನಿರೀಕ್ಷೆ ಅಷ್ಟು ಸರಳವಾಗಿ ಸತ್ಯವಾಗುವ ಸಾಧ್ಯತೆ ಕಡಿಮೆ ಎಂಬ ಅಭಿಪ್ರಾಯವೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಪಕ್ಷದ ಒಳಗಿನ ಬಣ ರಾಜಕಾರಣ ಹಾಗೂ ಸ್ಥಳೀಯ ನಾಯಕರ ನಡುವಿನ ಸ್ಪರ್ಧೆ ಅಭ್ಯರ್ಥಿ ಘೋಷಣೆಯನ್ನು ವಿಳಂಬಗೊಳಿಸಬಹುದು ಎನ್ನುವ ವಿಶ್ಲೇಷಣೆ ಕೂಡ ಎದುರಾಗುತ್ತಿದೆ.

ಬಣ ರಾಜಕಾರಣದ ಲೆಕ್ಕಾಚಾರ

ಕಾಂಗ್ರೆಸ್ ಪಕ್ಷದೊಳಗಿನ ವಿವಿಧ ಬಣಗಳು ತಮ್ಮ ತಮ್ಮ ನಾಯಕರಿಗೆ ಟಿಕೆಟ್ ಸಿಗಬೇಕು ಎಂಬ ಲೆಕ್ಕಾಚಾರದಲ್ಲಿ ತೊಡಗಿವೆ. ಸ್ಥಳೀಯ ಪ್ರಭಾವ, ಜಾತಿ ಸಮೀಕರಣ, ಸಂಘಟನೆ ಶಕ್ತಿ ಹಾಗೂ ಗೆಲುವಿನ ಸಾಧ್ಯತೆಗಳ ಲೆಕ್ಕಾಚಾರದಲ್ಲಿ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗಿರುವುದರಿಂದ ಅಭ್ಯರ್ಥಿ ಆಯ್ಕೆ ಸುಲಭವಲ್ಲ ಎನ್ನುವುದು ರಾಜಕೀಯ ವೀಕ್ಷಕರ ಅಭಿಪ್ರಾಯ.

ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಯಾರೊಬ್ಬರಿಗೂ ಮುಂಚಿತವಾಗಿ ಸ್ಪಷ್ಟ ಸುಳಿವು ನೀಡದಂತೆ ಪಕ್ಷದ ಉನ್ನತ ನಾಯಕತ್ವ ಎಚ್ಚರಿಕೆಯಿಂದ ನಡೆದುಕೊಳ್ಳುವ ಸಾಧ್ಯತೆಗಳಿವೆ.

ಬಿಜೆಪಿಯೂ ಕಾದು ನೋಡುತ್ತಿರುವ ತಂತ್ರ ಇನ್ನೊಂದೆಡೆ ಪ್ರತಿಪಕ್ಷವಾದ ಬಿಜೆಪಿ ಕೂಡ ಕಾಂಗ್ರೆಸ್ನ ಈ ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾದ ಬಳಿಕವೇ ತಮ್ಮ ರಾಜಕೀಯ ತಂತ್ರ ರೂಪಿಸಲು ಬಿಜೆಪಿ ಕಾಯುತ್ತಿರುವ ಸೂಚನೆಗಳು ಕಂಡು ಬರುತ್ತಿವೆ.

ಚುನಾವಣಾ ಚಟುವಟಿಕೆಗಳಿಗೆ ಚಾಲನೆ ನೀಡಲು ನಾಳೆಯ ವೇದಿಕೆ ಸಜ್ಜಾಗಿದೆ. ಒಟ್ಟಾರೆ, ಶಂಕುಸ್ಥಾಪನೆ ಸಮಾರಂಭ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದ್ದು, ಇದರ ಮೂಲಕ ಬಾಗಲಕೋಟೆ ಉಪಚುನಾವಣೆಯ ರಾಜಕೀಯ ಸಮರಕ್ಕೆ ನಾಂದಿ ಹಾಡುವ ಸಾಧ್ಯತೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಅಭ್ಯರ್ಥಿ ಆಯ್ಕೆ, ಪಕ್ಷಗಳ ತಂತ್ರ ಹಾಗೂ ಬಣ ರಾಜಕಾರಣದ ಬೆಳವಣಿಗೆಗಳು ಕ್ಷೇತ್ರದ ರಾಜಕೀಯವನ್ನು ಮತ್ತಷ್ಟು ಕಾವೇರಿಸುವುದು ಖಚಿತ ಎಂದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande