
ವಿಜಯಪುರ, 12 ಮಾರ್ಚ್ (ಹಿ.ಸ.)
ಆ್ಯಂಕರ್ : ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಉಪ್ಪಿನ ಸತ್ಯಾಗ್ರಹವು ಅಸಹಕಾರ ಮತ್ತು ಅಹಿಂಸೆಯ ಶಕ್ತಿಯನ್ನು ಜಗತ್ತಿಗೆ ತೋರಿಸಿದ ಮಹತ್ವದ ಅಧ್ಯಾಯವಾಗಿದೆ. ಮಾರ್ಚ್ 12, 1930ರಂದು ನಡೆದ ದಂಡಿ ಯಾತ್ರೆಯನ್ನು ಇವತ್ತಿನ ಪೀಳಿಗೆ ಸ್ಮರಿಸಬೇಕೆಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ತಿಳಿಸಿದರು.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಣೆ ಬಿಡುಗಡೆ ಮಾಡಿರುವ ಅವರು
ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ 1930ರ ಮಾರ್ಚ್ 12ರಂದು ಗುಜರಾತಿನ ಸಾಬರಮತಿ ಆಶ್ರಮದಿಂದ ಆರಂಭವಾದ ಈ ಚಳವಳಿ, ಏಪ್ರಿಲ್ 6ರವರೆಗೆ ಮುಂದುವರಿಯಿತು. ಬ್ರಿಟಿಷ್ ಸರ್ಕಾರದ ಉಪ್ಪು ತೆರಿಗೆ ವಿರುದ್ಧವಾಗಿ ನಡೆದ ಈ ಪ್ರತಿಭಟನೆ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕನ್ನು ನೀಡಿತು.
ಅಹಿಂಸೆಯ ಮಾರ್ಗದಲ್ಲಿ ನಡೆದ ಈ ಸತ್ಯಾಗ್ರಹವು ಸಾಮಾನ್ಯ ಜನರ ಹಕ್ಕುಗಳಿಗಾಗಿ ನಡೆದ ಮಹತ್ವದ ಹೋರಾಟವಾಗಿದ್ದು, ದೇಶದಾದ್ಯಂತ ಸ್ವಾತಂತ್ರ್ಯದ ಜ್ವಾಲೆಯನ್ನು ಹೊತ್ತಿಸಿ ಲಕ್ಷಾಂತರ ಜನರಲ್ಲಿ ದೇಶಭಕ್ತಿ ಮತ್ತು ಆತ್ಮಗೌರವವನ್ನು ಬಲಪಡಿಸಿತು.
ಈ ಚಳವಳಿ ಇತಿಹಾಸದಲ್ಲಿ ಉಪ್ಪಿನ ಸತ್ಯಾಗ್ರಹ ಎಂದೇ ಪ್ರಸಿದ್ಧವಾಗಿದ್ದು, ಇಂದಿಗೂ ಸ್ವಾತಂತ್ರ್ಯ ಹೋರಾಟಗಾರರ ಧೈರ್ಯ, ತ್ಯಾಗ ಮತ್ತು ದೇಶಪ್ರೇಮವನ್ನು ನೆನಪಿಸುವ ಸ್ಮರಣೀಯ ದಿನವಾಗಿದೆ ಎಂದು ಅವರು ಬಣ್ಣಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande