
ವಿಜಯಪುರ, 12 ಮಾರ್ಚ್ (ಹಿ.ಸ.)
ಆ್ಯಂಕರ್ : ಶ್ರೀ ರಾಮನವಮಿ ಉತ್ಸವದ ಅಂಗವಾಗಿ ವಿಜಯಪುರ ನಗರದಲ್ಲಿ ಮಾರ್ಚ್ 29ರಂದು ಭವ್ಯ ಶೋಭಾಯಾತ್ರೆ ಆಯೋಜಿಸಲಾಗಿದೆ ಎಂದು ಶ್ರೀ ರಾಮನವಮಿ ಉತ್ಸವ ಸಮಿತಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ನಗರದ ಕಾಳಿಕಾ ದೇವಿ ದೇವಸ್ಥಾನದಲ್ಲಿ ಇಂದು ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಉತ್ಸವದ ಸಿದ್ಧತೆಗಳು, ಮೆರವಣಿಗೆಯ ಮಾರ್ಗ ಹಾಗೂ ಸಾರ್ವಜನಿಕರ ಭಾಗವಹಿಸುವಿಕೆ ಕುರಿತು ಚರ್ಚೆ ನಡೆಸಲಾಯಿತು.
ಸಮಿತಿ ಅಧ್ಯಕ್ಷ ಉಮೇಶ ವಂದಾಲ ಮಾತನಾಡಿ, ಮಾರ್ಚ್ 29ರಂದು ಭಾನುವಾರ ಸಂಜೆ 4 ಗಂಟೆಗೆ ವಿಜಯಪುರ ನಗರದ ಶ್ರೀರಾಮ ಮಂದಿರದಿಂದ ಭವ್ಯ ಮೆರವಣಿಗೆ ಆರಂಭವಾಗಲಿದೆ ಎಂದು ತಿಳಿಸಿದರು.
2017ರಿಂದ ಆರಂಭವಾದ ರಾಮನವಮಿ ಉತ್ಸವವು ಈ ವರ್ಷ 10ನೇ ವರ್ಷಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಈ ಬಾರಿ ವಿಶೇಷವಾಗಿ ಶ್ರೀ ರಾಮನ ಮೂರ್ತಿಯ ಭವ್ಯ ಶೋಭಾಯಾತ್ರೆ ಆಯೋಜಿಸಲಾಗುತ್ತಿದೆ ಎಂದು ಹೇಳಿದ ಅವರು, ಹಿಂದೂಗಳ ಹೊಸ ವರ್ಷವಾದ ಯುಗಾದಿ ದಿನದಂದು ಪ್ರತಿಯೊಂದು ಹಿಂದೂ ಮನೆಯ ಮೇಲೂ ಭಗವಾ ಧ್ವಜ ಹಾರಿಸುವ ಸಂಕಲ್ಪದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಮಸ್ತ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಮಿತಿ ಮನವಿ ಮಾಡಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande