
ಗದಗ, 12 ಮಾರ್ಚ್ (ಹಿ.ಸ.)
ಆ್ಯಂಕರ್:- ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ‘ವಚನ ಕಲ್ಯಾಣ’ ಅಹೋರಾತ್ರಿ ನಾಟಕವನ್ನು ಸಿದ್ಧಪಡಿಸಿ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರದರ್ಶಿಸಲು ಯೋಜನೆ ರೂಪಿಸಲಾಗಿದ್ದು, ಈ ನಾಟಕದಲ್ಲಿ ಅಭಿನಯಿಸಲು ನುರಿತ ಹಾಗೂ ಆಸಕ್ತ ಯುವಕ–ಯುವತಿಯರು ಮತ್ತು ಅನುಭವಿ ರಂಗಕಲಾವಿದರು, ಗಾಯಕರುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಕಟಣೆಯ ಪ್ರಕಾರ, ‘ವಚನ ಕಲ್ಯಾಣ’ ಎಂಬ ಒಂಬತ್ತು ಗಂಟೆಗಳ ಅಹೋರಾತ್ರಿ ನಾಟಕಕ್ಕಾಗಿ ಕಲಾವಿದರ ಆಯ್ಕೆ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. 18ರಿಂದ 40 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ರಂಗಶಿಕ್ಷಣದಲ್ಲಿ ತರಬೇತಿ ಪಡೆದಿರುವ ಹಾಗೂ ನಾಟಕಗಳಲ್ಲಿ ಅಭಿನಯಿಸಿದ ಅನುಭವ ಹೊಂದಿರುವ ಕಲಾವಿದರಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಲಾಗಿದೆ.
ಆಸಕ್ತರು ಭರ್ತಿ ಮಾಡಿದ ಅರ್ಜಿಯನ್ನು ಮಾರ್ಚ್ 20ರೊಳಗೆ ಸದಸ್ಯ ಕಾರ್ಯದರ್ಶಿ, ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು–560056 ವಿಳಾಸಕ್ಕೆ ಮುದ್ದಾಂ ಅಥವಾ ಅಂಚೆ ಮೂಲಕ ಕಳುಹಿಸಬಹುದು. ಜೊತೆಗೆ ಇ-ಮೇಲ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳು ಮೂರು ತಿಂಗಳ ಅವಧಿಯಲ್ಲಿ ಪೂರ್ಣಕಾಲಿಕವಾಗಿ ನಡೆಯುವ ತರಬೇತಿ ಹಾಗೂ ನಾಟಕ ಪ್ರದರ್ಶನಗಳಲ್ಲಿ ಭಾಗವಹಿಸುವುದು ಕಡ್ಡಾಯವಾಗಿದ್ದು, ಅವರಿಗೆ ಮಾಸಿಕ ಗೌರವಧನದ ಜೊತೆಗೆ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಅರ್ಜಿ ನಮೂನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ‘ವಚನ ಕಲ್ಯಾಣ’ ನಾಟಕದ ನಿರ್ದೇಶಕರಾದ ಸಿ. ಬಸವಲಿಂಗಯ್ಯ (ಮೊ. 94485 38620) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.
ಸಂದರ್ಶನಕ್ಕೆ ಹಾಜರಾಗುವ ಕಲಾವಿದರಿಗೆ ಯಾವುದೇ ಪ್ರಯಾಣ ಭತ್ಯೆ ನೀಡಲಾಗುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP